Advertisement

ಇಲ್ಲಿ ಕುಕೃತ್ಯ; ಅಲ್ಲಿ ಮಾಮೂಲು

01:13 PM Feb 03, 2018 | Team Udayavani |

ಬೆಂಗಳೂರು: ದರೋಡೆಕೋರರ ಗುಂಪೊಂದು ಕೊಡಿಗೇಹಳ್ಳಿ ಪೊಲೀಸ್‌ ಠಾಣೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪೊಲೀಸರ ರೈಫ‌ಲನ್ನೇ ಕಿತ್ತುಕೊಂಡು ಹೋದ ಘಟನೆ ಬೆಂಗಳೂರು ಮಟ್ಟಿಗೆ ಹುಬ್ಬೇರಿಸುವಂತಿರಬಹುದು. ಆದರೆ ಬಿಹಾರ, ಮಧ್ಯಪ್ರದೇಶ ಸೇರಿ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಇಂಥ ಘಟನೆಗಳಲ್ಲಾ ಮಾಮೂಲು.

Advertisement

ಜ.18ರಂದು 8 ದರೋಡೆಕೋರರು ರಾತ್ರಿ ಗಸ್ತಿನಲ್ಲಿದ್ದ ಕೋಡಿಗೇಹಳ್ಳಿ ಠಾಣೆಯ ಪೇದೆಗಳಾದ ಪರಮೇಶಪ್ಪ ಮತ್ತು ಸಿದ್ದಪ್ಪ ಮೇಲೆ ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸಿಬ್ಬಂದಿ ಬಳಿಯಿದ್ದ “303 ರೈಫ‌ಲ್‌’ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಮಧ್ಯಪ್ರದೇಶದ ರಾಯ್‌ಸಿಂಗ್‌ ಮೆಹರ್‌, ಈತನ ಸಹೋದರರಾದ ಆಜಂಬಾಯ್‌ ಸಿಂಗ್‌, ಅಬುಬಾಯ್‌ ಸಿಂಗ್‌, ಸುರೇಶ್‌ ಕೋದ್ರಿಯಾ ಹಾಗೂ ಜಿತೇನ್‌ ರೇಮ್‌ಸಿಂಗ್‌ ಪಲಾಶೆ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಗುಂಡಿಕ್ಕಿ ಬಂಧನ: ರೈಫ‌ಲ್‌ ಕದ್ದೊಯ್ದ ಘಟನೆ ನಂತರ ನೆರೆ ರಾಜ್ಯಗಳ ಪೊಲೀಸರು ಹಾಗೂ ಮಧ್ಯ ಪ್ರದೇಶ ಪೊಲೀಸ್‌ ಇಲಾಖೆ ನೀಡಿದ ಮಾಹಿತಿ ಮೇರೆಗೆ ಮಧ್ಯಪ್ರದೇಶದ ಧಾರ್‌ ಜಿಲ್ಲೇಯಲ್ಲಿರುವ ಭಗೋಲಿಗೆ ತರಳಿದ ನಗರ ಪೊಲೀಸರ ವಿಶೇಷ ತಂಡ, ಪ್ರಕರಣದ ಪ್ರಮುಖ ಆರೋಪಿ ರಾಯ್‌ಸಿಂಗ್‌ನನ್ನು ಪತ್ತೆ ಮಾಡಿದೆ. ನಂತರ ವಿದ್ಯಾರಣ್ಯಪುರ ಠಾಣೆ ಪಿಎಸ್‌ಐ ಅಣ್ಣಯ್ಯ, ಸಿಬ್ಬಂದಿ ನರಸಿಂಹ ಹಾಗೂ ಅರುಣ್‌ಕುಮಾರ್‌ ಆರೋಪಿಯನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ಇತರೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ.

ಈ ಮಾಹಿತಿ ಆಧರಿಸಿ ವಿದ್ಯಾರಣ್ಯಪುರ ಇನ್ಸ್‌ಪೆಕ್ಟರ್‌ ರಾಮಮೂರ್ತಿ, ಪಿಎಸ್‌ಐ ಅಣ್ಣಯ್ಯ, ಪೇದೆಗಳಾದ ಗೋಪಾಲ್‌, ಚಿದಂಬರ್‌ ಚತ್ತರಕ್ಕಿ, ಮಹದೇವಮೂರ್ತಿ ಹಾಗೂ ಚೆನ್ನಬಸಪ್ಪ ವರನ್ನೊಳಗೊಂಡ ತಂಡ, ಶುಕ್ರವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಯಲಹಂಕ ಉಪನಗರ ಬಳಿಯ ವೀರಸಾಗರ ರಸ್ತೆಯ ಕೆಂಪನಹಳ್ಳಿಯಲ್ಲಿ ಸರ್ಕಾರ ನಿರ್ಮಿಸಿರುವ ಆಶ್ರಯ ಮನೆಗಳಲ್ಲಿ ಅಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲು ಮುಂದಾಗಿದೆ.

ಈ ವೇಳೆ ಆರೋಪಿಯೊಬ್ಬ ಪೊಲೀಸ್‌ ಜೀಪ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಹೊರಗಿನ ಸದ್ದು ಕೇಳಿ ಮನೆಯೊಳಗೆ ಮಲಗಿದ್ದ ಮೂವರು ಆರೋಪಿಗಳು ಹೊರ ಬಂದಿದ್ದಾರೆ. ಈ ಪೈಕಿ ಒಬ್ಬ ಕಳವು ಮಾಡಿದ್ದ ರೈಫ‌ಲ್‌ನಿಂದ (ಬಟ್‌ ಟ್ರ್ಯಾಪ್‌ ಮೂಲಕ) ಇನ್ಸ್‌ಪೆಕ್ಟರ್‌ ರಾಮಮೂರ್ತಿ ಮೇಲೆ ಹಲ್ಲೆ ನಡೆಸಿದ್ದು, ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ.

Advertisement

ಆದರೂ ಆರೋಪಿಗಳು ಕಲ್ಲು ತೂರಾಟ ನಿಲ್ಲಿಸದ ಕಾರಣ ಆತ್ಮರಕ್ಷಣೆಗಾಗಿ ಆಜಂಬಾಯ್‌ ಸಿಂಗ್‌, ಜಿತೇನ್‌ ಮತ್ತು ಹಾಗೂ ಸುರೇಶ್‌ ಕೋದ್ರಿಯಾ ಕಾಲಿಗೆ ಗುಂಡು ಹೊಡೆದಿದ್ದಾರೆ. ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿ ಅಬುಬಾಯ್‌ ಸಿಂಗ್‌ನನ್ನು ಚೆನ್ನಬಸಪ್ಪ ಬಂಧಿಸಿದ್ದಾರೆ. ಆರೋಪಿಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇನ್ಸ್‌ಪೆಕ್ಟರ್‌ ತಲೆದಂಡ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳು, ಶಸ್ತ್ರಾಸ್ತ್ರ ಇದ್ದರೂ ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಲು ವಿಫ‌ಲರಾದ ಪೇದೆಗಳು ಹಾಗೂ ಕರ್ತವ್ಯ ಲೋಪ ಎಡಗಿಸಿದ ಕೊಡಿಗೇಹಳ್ಳಿ ಠಾಣೆ ಇನ್ಸ್‌ಸ್ಪೆಕ್ಟರನ್ನು ಅಮಾನತುಗೊಳಿಸಿದ್ದರು. ಆರೋಪಿಗಳ ಪತ್ತೆಗೆ ಡಿಸಿಪಿ ಗಿರೀಶ್‌ ನೇತೃತ್ವದಲ್ಲಿ ಈಶಾನ್ಯ ಮತ್ತು ಉತ್ತರ ವಿಭಾಗ ಪೊಲೀಸರ ನಾಲ್ಕು ವಿಶೇಷ ತಂಡ ರಚಿಸಲಾಗಿತ್ತು. ಇ

ದೇ ಮಾದರಿಯ ಪ್ರಕರಣಗಳ ಜಾಡು ಹಿಡಿದು ಹೊರಟ ವಿಶೇಷ ತಂಡ, ಮಧ್ಯಪ್ರದೇಶದಲ್ಲಿ ಇಂತಹ ತಂಡ ಇರುವ ಬಗ್ಗೆ ತಮಿಳುನಾಡು, ಆಂಧ್ರ ಪೊಲೀಸರಿಂದ ಮಾಹಿತಿ ಪಡೆದಿತ್ತು. ಈ ಮಾಹಿತಿ ಮೇರೆಗೆ ನಗರ ಪೊಲೀಸರು ಮಧ್ಯಪ್ರದೇಶ ಪೊಲೀಸರ ಜತೆ ಚರ್ಚಿಸಿ, ಭಗೋಲಿ ಗ್ರಾಮಕ್ಕೆ ತೆರಳಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದರು. ಇನ್ನೂ ಮೂವರು ಆರೋಪಿಗಳಿಗಾಗಿ ಎಸಿಪಿ ಪ್ರಭಾಕರ್‌ ಬಾರ್ಕಿ, ಪಿಐ ಅಂಜನ್‌ಕುಮಾರ್‌ ನೇತೃತ್ವದ ತಂಡ ಮಧ್ಯಪ್ರದೇಶದಲ್ಲೇ ಕಾರ್ಯಾಚರಣೆ ಮುಂದುವರಿಸಿದೆ.

ಟಿಕೆಟ್‌ ಕಾಯ್ದಿಸಿರಿ ಸಿಕ್ಕಿಬಿದ್ರು: ಆರೋಪಿಗಳು ದರೋಡೆಗಾಗಿ ಮಧ್ಯಪ್ರದೇಶದಿಂದ ಮಹಾರಾಷ್ಟ್ರ ಮೂಲಕ ನಗರಕ್ಕೆ ಖಾಸಗಿ ಬಸ್‌ಗಳಲ್ಲೇ ಬಂದು ಹೋಗುತ್ತಿದ್ದರು. ಇದಕ್ಕಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸುವಾಗ ನೀಡಿದ್ದ ಹೆಸರು ಮತ್ತು ವಿಳಾಸದಿಂದಾಗಿ ಆರೋಪಿಗಳ ಪತ್ತೆ ಸುಲಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರೈಲಿನಲ್ಲಿ ಬಂದರೆ ಪೊಲೀಸ್‌ ತಪಾಸಣೆ ನಡೆಸಯಬಹುದು ಎಂಬ ಕಾರಣಕ್ಕೆ ಬಸ್‌ಗಳಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಕೊಡಿಗೇಹಳ್ಳಿ ಸಿಬ್ಬಂದಿಯಿಂದ ಕಸಿದುಕೊಂಡು ಹೋಗಿದ್ದ ರೈಫ‌ಲ್‌ ಅನ್ನು ಆರೋಪಿಗಳು ಪ್ರತಿ ಬಾರಿ ತಂಗುತ್ತಿದ್ದ ಆಶ್ರಯ ಮನೆಯೊಂದರ ಪಕ್ಕದ ಪೊದೆಯಲ್ಲಿ ಬಟ್ಟೆ ಸುತ್ತಿ ಬಚ್ಚಿಟ್ಟಿದ್ದರು. ಕೃತ್ಯದ ನಂತರ ಮಧ್ಯ ಪ್ರದೇಶಕ್ಕೆ ಹೋಗಿದ್ದ ನಾಲ್ವರು ಆರೋಪಿಗಳು, ನಾಲ್ಕು ದಿನ ಹಿಂದಷ್ಟೇ ನಗರಕ್ಕೆ ಬಂದು ಆಶ್ರಯ ಮನೆಗಳಲ್ಲಿ ತಂಗಿದ್ದರು.

ಮೈಮರೆತಿದ್ದರೆ ಬಾಣ ಎದೆ ಸೀಳುತ್ತಿತ್ತು!: “ಪೊಲೀಸರ ಮೇಲೆ ದಾಳಿ ಮಾಡುವಾಗ ಆರೋಪಿಗಳು ಬಳಸುವ ಪ್ರಮುಖ ಅಸ್ತ್ರ ಕಲ್ಲು. ಕಲ್ಲುಗಳಿಗೆ ದಾರ ಕಟ್ಟಿಕೊಂಡು ಎದುರಾಳಿ ಕಡೆಗೆ ಆರೋಪಿಗಳು ಕಲ್ಲು ಎಸೆಯುತ್ತಾರೆ. ಯಾವುದೇ ಕಾರಣಕ್ಕೂ ಅವರ ಗುರಿ ತಪ್ಪುವುದಿಲ್ಲ. ಬಾಣವನ್ನೂ ಅಷ್ಟೇ ಸ್ಪಷ್ಟವಾಗಿ ಬಿಡುತ್ತಾರೆ. ಕಾರ್ಯಾಚರಣೆ ವೇಳೆ ನಾವು ಒಂದು ಕ್ಷಣ ಮೈಮರೆತಿದ್ದರೂ ಬಾಣಗಳು ನಮ್ಮ ಎದೆ ಸೀಳುತ್ತಿದ್ದವು,’ ಎಂದು ಕಾರ್ಯಾಚರಣೆ ನಡೆಸಿದ ವಿಶೇಷ ತಂಡದ ಸದಸ್ಯರು ಹೇಳುತ್ತಾರೆ. ಪ್ರಸ್ತುತ ಸೆರೆ ಸಿಕ್ಕಿರುವ ತಂಡ ಮಧ್ಯಪ್ರದೇಶದ ಹಲವೆಡೆ ಪೊಲೀಸರ ಮೇಲೆರಗಿ ಹಲ್ಲೆ ನಡೆಸಿ, ರೈಫ‌ಲ್‌ ಕಳವು ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳು ಸಿನಿಮಾ ಕೂಡ ಇದೆ: “ತಿರನ್‌’ ತಮಿಳು ಸಿನಿಮಾ ನೋಡಿದವರೆಗೆ ಭಿಲ್‌ ಸಮುದಾಯದ ದರೋಡೆ ಕೃತ್ಯದ ಮಾದರಿ ಗೊತ್ತಾಗುತ್ತವೆ. ಸಿನಿಮಾದಲ್ಲಿ ರಾಜಸ್ಥಾನದ ಬುಡಕಟ್ಟು ಸಮುದಾಯವೊಂದು ನೆರೆ ರಾಜ್ಯಗಳಿಗೆ ಬಂದು ಬೀಗ ಹಾಕಿದ ಹಾಗೂ ಶ್ರೀಮಂತ ವ್ಯಕ್ತಿಗಳ ಮನೆಗಳನ್ನು ಗುರುತಿಸಿ  ದರೋಡೆ ಮಾಡಿ ಅಮಾಯಕರನ್ನು ಹತ್ಯೆಗೈಯುತ್ತಾರೆ. ಬಳಿಕ ತಮ್ಮ ಊರಿನಲ್ಲಿ ತಲೆಮರೆಸಿಕೊಳ್ಳುತ್ತಾರೆ. ಆ ಗ್ರಾಮಕ್ಕೆ ಪೊಲೀಸರು ಹೋಗಲು ಹೆದರುತ್ತಾರೆ. ಇದೇ ಮಾದರಿಯಲ್ಲಿ ಭಿಲ್‌ ಸಮುದಾಯ ಕೂಡ ಇದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next