ಇದು ಆ ಇಳಿಸಂಜೆ ಪಾರಿಜಾತದಂತೆ ಆಕಸ್ಮಿಕವಾಗಿ ಕಂಡವಳ ನೆನೆಪಿನಲ್ಲಿ ಗೀಚುತ್ತಿರುವ ಒನ್ ಸೈಡೆಡ್ ಪ್ರೇಮದೋಲೆ. ಅವತ್ತು, ಉಂಡು ಮಲಗಿದ್ದವನಿಗೆ ಕರೆ ಮಾಡಿ, ಬೇಗ ಬಸ್ ಸ್ಟಾಪ್‌ನತ್ತ ಬಾ ಎಂದಷ್ಟೇ ಹೇಳಿ, ಗೆಳೆಯ ಪ್ರತ್ಯುತ್ತರಕ್ಕೂ ಕಾಯದೆ ಕರೆ ಕಟ್ ಮಾಡಿದ್ದ. ಅವನ ಆಹ್ವಾನದ ಮೇರೆಗೆ, ಇದ್ದ ಸ್ಥಿತಿಯಲ್ಲೇ ಹೋದೆ. ಹಲ್ಲು ಕಿರಿಯುತ್ತ ನಿಂತಿದ್ದವನು, ನನ್ನ ಕಂಡೊಡನೆ ಗಾಡಿ ಏರಿ, ಕೈ ಸನ್ನೆ ಮಾಡಿ ಆತನ ಹಿಂದೆ ಬರುವಂತೆ ಹೇಳಿ ಹೊರಟ. ದಿಕ್ಕು ದಾರಿ ಅರಿಯದೆ ನಿದ್ದೆಗಣ್ಣಿನಲ್ಲೇ ಆತನನ್ನು ಮನದಲ್ಲೇ ಶಪಿಸುತ್ತಾ ಹಿಂಬಾಲಿಸಿದೆ. ಯಾರದೋ ಮನೆಯ ಮುಂದೆ ಆತನ ಬೈಕಿನ ಗಾಲಿಗಳು ನಿಂತವು. ಅಲ್ಲೂ ಏನೊಂದೂ ಹೇಳದೆ ಸೀದಾ ಒಳಗೆ ಹೋಗಿ ಕುಳಿತ ಪುಣ್ಯಾತ್ಮ. ಏನೊಂದು ಅರ್ಥವಾಗದಿದ್ದರೂ ಅನಿವಾರ್ಯವಾಗಿ ನಾನೂ ಒಳಹೋಗಿ ಆಸೀನನಾದೆ. ನಂತರ ತಿಳಿಯಿತು; ಅದು ಆತನ ಪರಿಚಯಸ್ಥರ ಮನೆಯೆಂದು. ಆತ ಮಾತಿನಲ್ಲಿ ಮತ್ತು ನಾನು ಮೌನದಲ್ಲಿ ಮಗ್ನರಾದೆವು. ಕೆಲ ನಿಮಿಷಗಳಲ್ಲಿ ಒಳಗಿನಿಂದ ನಮಗಾಗಿ ಟೀ ಸಹ ಬಂದಿತು. ಅನಾಹುತವೆಲ್ಲ ನಡೆದದ್ದು ಆ ನಂತರದಲ್ಲಿಯೇ. ಏಕೆಂದರೆ, ಟೀ ತಂದ ಹುಡುಗಿ ಥಟ್ಟನೆ ಮನದಲ್ಲೊಂದು ಖಾತೆ ತೆರೆದುಬಿಟ್ಟಳು.
ಅಲ್ಲಿಯವರೆಗೂ ತಿಳಿನೀರ ಕೊಳದಂತಿದ್ದ ನನ್ನ ಮನದಲ್ಲಿ ಆಕೆ ಕಲ್ಲು ಹೊಡೆದು ಗುಲ್ಲು ಎಬ್ಬಿಸಿದಳು. ಕೇವಲ ಐದೇ ನಿಮಿಷದ ನೇರನೋಟದಿಂದ ನನ್ನೆದೆಯ ಗರ್ಭಗುಡಿಯಲ್ಲಿ ಪ್ರೀತಿಯ ದೀಪ ಹೊತ್ತಿಸಿದಳು, ನನ್ನನ್ನೇ ನಾನು ಮರೆಯುವಂತೆ ನನ್ನಲ್ಲಿ ಹುಚ್ಚು ಹಿಡಿಸಿದಳು, ಮರೆತೆನೆಂದರೂ ಮರೆಯಲಾಗದಂತೆ ಮೋಡಿ ಮಾಡಿದಳು ಆ ಮುದ್ದು ಮುಖದ ಹುಡುಗಿ. ಮುಂಗುರುಳ ಮರೆಯಲ್ಲಿ ಎಂತವರನ್ನೂ ಕಣ್ಣಲ್ಲೇ ಕೊಲ್ಲುವ ಅವಳ ನೋಟ, ನಕ್ಕೊಡನೆ ಗಲ್ಲದ ಮೇಲೆ ಬೀಳುವ ಡಿಂಪಲ್… ಇದೆಲ್ಲ ಕಂಡ ನಾನು ಆ ಕ್ಷಣದಲ್ಲಿ ಕಳ್ಳನಾಗಿದ್ದೆ. ಸಣ್ಣದೊಂದು ಅನುಮಾನವೂ ಬಾರದಂತೆ ಅವಳ ಫೋಟೊ ತೆಗೆದು, ಮರುನಿಮಿಷದಲ್ಲಿಯೇ ನನ್ನ ವಾಟ್ಸಪ್‌ಗೆ ಅವಳ ವಾಲ್‌ಪೇಪರ್ ಸೆಟ್ ಮಾಡಿದ್ದೆ.
ತುಟಿಯಂಚಿನಲ್ಲಿ ಅಂದು ಆಕೆ ಬೀರಿದ್ದ ನಗೆ ನನ್ನ ಹೃದಯಕ್ಕೆ ಹಾಕಿತ್ತು ಲಗ್ಗೆ. ನಾನೀಗ ಮೂಕ ಭಕ್ತನಾಗಿದ್ದೇನೆ. ನಾನು ಏನನ್ನೂ ಬೇಡುವುದಿಲ್ಲ. ಏನನ್ನೂ ಹಾಡುವುದಿಲ್ಲ. ಕೇವಲ ಅವಳ ಆರಾಧನೆಯೊಂದೇ ನನ್ನ ಪಾಲಿನ ದಿವ್ಯಮಂತ್ರ. ಇದೀಗ ನನ್ನ ಮನದಲ್ಲಿ ನಿತ್ಯವೂ ಅವಳದೇ ನಿತ್ಯೋತ್ಸವ.
ಲವ್ ಎಟ್ ಫಸ್ಟ್ ಸೈಟ್ ಎಂಬಂತೆ ಮೊದಲ ನೋಟಕೆ ಇಂಚಿಂಚಾಗಿ ಮಿಂಚು ಸಂಚರಿಸಿದ ನನ್ನಲ್ಲಿ ಪ್ರೀತಿ ಚಿಗುರಿ ನಿಂತಿದೆ. ಬಾ ಒಲವ ಮುಡಿಸೊಮ್ಮೆ ನಿನ್ನ ನೆನಪಿನಲ್ಲೇ ಕುಣಿಯುತ್ತಿರುವ ಈ ಹುಚ್ಚುಕೋಡಿ ಹೃದಯಕ್ಕೆ. ನೀನು ಹ್ಞುಂ ಅಂದರೂ, ಊಹೂnಂ ಎಂದರೂ ನನ್ನ ಮನದ ಯಾದಿಯ ಪಟ್ಟಿಯಲ್ಲಿ ಎಂದೆಂದಿಗೂ ಅಳಿಸಲಾಗದ ಮುಯ್ಯಿ ನೀನು.
ಅವಳಿಗೆ ಹೀಗೆಲ್ಲಾ ಹೇಳಬೇಕು ಅನಿಸುತ್ತದೆ. ಅವಕಾಶ ಸಿಗುತ್ತಿಲ್ಲ. ಮತ್ತೂಮ್ಮೆ ಯಾವುದೋ ಕುಂಟು ನೆಪ ಮಾಡಿಕೊಂಡು ಅವಳ ಮನೆಗೇ ಹೋಗಿ ಬಿಡಬೇಕು ಅನಿಸುತ್ತಿದೆ. ಧೈರ್ಯ ಬರುತ್ತಿಲ್ಲ. ಎದುರು ಮನೆಯ ಪುಟ್ಟ ಹುಡುಗಿಯಿಂದ, ಆಚೆ ಬದಿಯ ಅವಳ ಕ್ಲಾಸ್‌ಮೇಟ್ ಮೂಲಕ ರಹಸ್ಯ ಸುದ್ದಿಯನ್ನು ರಹಸ್ಯವಾಗಿಯೇ ತಲುಪಿಸಬೇಕು ಅಂದುಕೊಳ್ಳುತ್ತೇನೆ. ಮನದ ಮಾತು ತುಟಿಯಿಂದ ಹೊರಗೇ ಬರುವುದಿಲ್ಲ. ಹಾಗಾಗಿ ಸ್ವಲ್ಪ ಹೆದರಿಕೆಯಿಂದ, ಒಂದಿಷ್ಟು ಗಲಿಬಿಲಿಯಿಂದ, ಸಣ್ಣದೊಂದು ಆಸೆಯಿಂದ ಈ ಕಾಗದದ ದೋಣಿಯಲ್ಲಿ ನನ್ನ ಒಲವಿನ ಹೂಗಳನ್ನಿಟ್ಟು ಅವಳೆಡೆಗೆ ತೂರಿಬಿಟ್ಟಿದ್ದೇನೆ.
ಈ ಒನ್‌ಸೈಡೆಡ್ ಪ್ರೇಮಪತ್ರ ಅವಳನ್ನು ತಲುಪಲಿ. ನನ್ನ ಕಳ್ಳ ಮನಸ್ಸು ಅವಳಿಗೂ ತಿಳಿಯಲಿ…ಸದ್ಯಕ್ಕೆ ಇಷ್ಟಾಗಲಿ, ಉಳಿದದ್ದನ್ನು ಮುಂದೆ ನೋಡಿಕೊಂಡರಾಯ್ತು…
ಕಲ್ಮೇಶ ಹ ತೋಟದ