ಆಧುನಿಕ ಜೀವನ ವಿಧಾನ ಮತ್ತು ಕ್ರಮಗಳು ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮವನ್ನು ಉಂಟುಮಾಡುತ್ತದೆ. ಇಂದಿನ ದಿನಗಳಲ್ಲಿ ನಾವು ಸೇವಿಸುವ ಬಾಯಿಗೆ ರುಚಿ ಎನಿಸುವ ತಿನಿಸುಗಳು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ ಎನ್ನುವುದನ್ನು ನಿರ್ಲಕ್ಷ್ಯಿಸುವಂತಿಲ್ಲ.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಗಳಲ್ಲಿ ಅಸಿಡಿಟಿ ಕೂಡಾ ಒಂದು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿರುವುದು, ಆರೋಗ್ಯಕರವಾದ ಆಹಾರ ಕ್ರಮವನ್ನು ಅನುಸರಿಸದಿರುವುದು ಅಸಿಡಿಟಿ ಸಮಸ್ಯೆಗೆ ಮೂಲ ಕಾರಣವಾಗಿದೆ.
ನಾವು ದಿನನಿತ್ಯದ ಆಹಾರದಲ್ಲಿ ಎಣ್ಣೆಯುಕ್ತ ಹಾಗೂ ಮಸಾಲೆಯುಕ್ತ ತಿನಿಸುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಈ ಸಮಸ್ಯೆ ಕಾಣಿಸಿಕೊಂಡು ಹೆಮ್ಮರವಾಗುತ್ತಾ ಹೋಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಕೆಲವು ಆರೋಗ್ಯಕರ ಜೀವನ ವಿಧಾನಗಳೊಂದಿಗೆ ನೈಸರ್ಗಿಕವಾಗಿ ಸಿಗುವ ಕೆಲವು ಮನೆಮದ್ದನ್ನು ಬಳಸಬಹುದಾಗಿದೆ. ಇವುಗಳು ನಮ್ಮನ್ನು ಅಸಿಡಿಟಿ ಸಮಸ್ಯೆಯಿಂದ ಹೊರಬರಲು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
ಅಸಿಡಿಟಿ ನಿವಾರಣೆಗೆ ಸರಳ ಮನೆಮದ್ದುಗಳು
ಸಾಮಾನ್ಯವಾಗಿ ಎಳೆನೀರಿನ ಬಳಕೆ ಹಾಗೂ ಬಾದಾಮಿಯ ಬಳಕೆಯು ಅಸಿಡಿಟಿಯಿಂದ ನಮ್ಮನ್ನು ದೂರವಿರುಸುತ್ತದೆ. ಇದಷ್ಟೇ ಅಲ್ಲದೆ ಇನ್ನೂ ಹಲವಾರು ನೈಸರ್ಗಿಕ ಪದಾರ್ಥಗಳಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಓಂ ಕಾಳು
ಅಜ್ವಾನ ಅಥವಾ ಓಂ ಕಾಳು ಅನ್ನು ನಮ್ಮ ಆಹಾರ ಕ್ರಮದಲ್ಲಿ ಬಳಕೆ ಮಾಡುವುದರಿಂದ ಅಸಿಡಿಟಿ ಸಮಸ್ಯೆ ನಿವಾರಿಸಬಹುದು. ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಓಂ ಕಾಳನ್ನು ಬಳಸುವುದು ಉತ್ತಮ. ಅಲ್ಲದೆ ಮಜ್ಜಿಗೆಗೆ ಸಲ್ಪ ಪ್ರಮಾಣದಲ್ಲಿ ಈ ಕಾಳನ್ನು ಬೆರೆಸಿ ಸೇವನೆ ಮಾಡುವುದು ಬಹಳ ಒಳ್ಳೆಯದು. ಈ ಕಾಳು ಕೇವಲ ಅಸಿಡಿಟಿ ಸಮಸ್ಯೆ ಮಾತ್ರವಲ್ಲದೆ ಹೃದಯ ಸಂಬಂಧಿ ಕಾಯಿಲೆಗಳನ್ನು ಪರಿಹರಿಸುತ್ತದೆ.
ನೀರು ಸೇವನೆ
ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಮಾಡಬಹುದಾದ ಅತ್ಯಂತ ಸರಳ ವಿಧಾನ ಎಂದರೆ ಸಾಕಷ್ಟು ನೀರನ್ನು ಸೇವಿಸುವುದು. ದಿನ ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಸೇವಿಸುವುದರಿಂದ ಅಸಿಟಿಡಿ ನಿವಾರಣೆಯಾಗುತ್ತದೆ. ಕೇವಲ ಬೆಳಿಗ್ಗೆ ಮಾತ್ರವಲ್ಲದೆ ದಿನವಿಡಿ ಆಗಾಗ ಸಾಕಷ್ಟು ನೀರನ್ನು ಸೇವನೆ ಮಾಡುವುದರಿಂದ ಸಮಸ್ಯೆ ಬಹುಬೇಗ ನಿವಾರಣೆಯಾಗುತ್ತದೆ.
ಎಳೆ ನೀರು ಸೇವನೆ
ತೆಂಗಿನ ನೀರು ಅಥವಾ ಎಳನೀರಿನಲ್ಲಿ ಹಲವಾರು ಆರೋಗ್ಯಕರ ಅಂಶಗಳಿದ್ದು, ಇದು ಅಸಿಡಿಟಿ ಸಮಸ್ಯೆಯನ್ನೂ ನಿವಾರಿಸುತ್ತದೆ. ಒಳ್ಳೆಯ ಫಲಿತಾಂಶ ಬೇಕೆಂದರೆ ದಿನಕ್ಕೆ ಎರಡು ಬಾರಿ ತೆಂಗಿನ ನೀರನ್ನು ಸೇವಿಸಬೇಕು. ತೆಂಗಿನ ನೀರು ಬಹುಬೇಗ ಜೀರ್ಣವಾಗುತ್ತದೆ ಮತ್ತು ಹೊಟ್ಟೆಯನ್ನು ತಣ್ಣಗಾಗಿಸಿ ತಣ್ಣನೆಯ ಅನುಭವ ನೀಡಿ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ. ತೆಂಗಿನ ನೀರನ್ನು ದೇಹದಲ್ಲಿ ನಿರ್ಜಲೀಕರಣವಾದಾಗ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ನಿರ್ಜಲೀಕರಣವನ್ನು ತಡೆಯುವಂತಹ ಶಕ್ತಿ ತೆಂಗಿನ ನೀರಿಗಿದೆ.
ತಣ್ಣನೆಯ ಹಾಲು ಸೇವನೆ
ಹಾಲು ಹೊಟ್ಟೆಯಲ್ಲಿ ಉಂಟಾಗುವ ಅಸಿಡಿಟಿ ಆಮ್ಲವನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿದೆ. ಅಲ್ಲದೆ ಹೊಟ್ಟೆಯಲ್ಲಿ ಉಂಟಾಗುವ ಹೆಚ್ಚಿನ ಅಸಿಡಿಟಿ ಆಮ್ಲವನ್ನು ತಡೆಯುತ್ತದೆ. ಎದೆನೋವಿನ ಲಕ್ಷಣಗಳು ಹಾಲು ಕುಡಿಯುವುದರಿಂದ ಕಡಿಮೆಯಾಗುತ್ತದೆ. ಅದನ್ನು ಸಕ್ಕರೆಯಿಲ್ಲದೆ ಕುಡಿಯುವುದು ಒಳ್ಳೆಯದು. ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ದಿನ ನಿತ್ಯ ಹಾಲು ಸೇವನೆ ಮಾಡುವುದು ಉತ್ತಮ ಆದರೆ, ಕೇವಲ ಹಾಲನ್ನು ಮಾತ್ರ ಸೇವಿಸದೆ ಹಾಲಿನ ಜೊತೆ ಸ್ಪಲ್ಪ ನೀರು ಬೆರೆಸಿ ಕುಡಿಯುವುದು ಒಳ್ಳೆಯದು.
ಅಲೋವೆರಾ
ಅಲೋವೆರಾ ಒಂದು ಸರ್ವರೋಗಗಳ ಮದ್ದಾಗಿದ್ದು ಇದು ತನ್ನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಅಲೋವೆರ ಜ್ಯೂಸ್ ಸೇವಿಸಿದರೆ ಅದು ಅಸಿಡಿಟಿಯನ್ನು ಕಡಿಮೆಮಾಡುತ್ತದೆ. ಈ ಉದ್ದೇಶಕ್ಕಾಗಿ ನೀವು ಅದನ್ನು ಬಳಸುವುದಾದರೆ ಅದರ ಮೇಲಿರುವ ಎಲೆಯ ರೀತಿಯ ಪದಾರ್ಥವನ್ನು ತೆಗೆದು ಹಾಕಿ ಅನಂತರ ಒಳಗಿರುವ ಪದಾರ್ಥವನ್ನು ಜೂಸ್ ಗಾಗಿ ಬಳಸಬಹುದು. ಅಲೋವೆರಾ ಜ್ಯೂಸ್ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಅದು ತಣ್ಣನೆಯ ಅನುಭವವನ್ನು ನೀಡುತ್ತದೆ ಮತ್ತು ಅಸಿಡಿಟಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲೋವೇರ ಜ್ಯೂಸ್ ತೂಕ ಕಡಿಮೆ ಮಾಡುವ ಗುಣವನ್ನು ಸಹ ಹೊಂದಿದೆ. ಆಗಾಗ ಅಲೋವೆರಾ ಬಳಕೆ ಮಾಡುವುದರಿಂದ ಅತ್ಯಂತ ಸುಲಭವಾಗಿ ಸಮಸ್ಯೆಯಿಂದ ದೂರವಿರಬಹುದಾಗಿದೆ.
ಬಾದಾಮಿ ಬಳಕೆ
ಬಾದಾಮಿ ಒಂದು ಪೋಷಕಾಂಶಗಳ ಆಗರ. ಇದರ ಪ್ರಯೋಜನಗಳು ಹಲವಾರು. ಇದೊಂದು ಅಸಿಡಿಟಿಗೆ ರಾಮಬಾಣ ಎಂದು ಹೇಳಲಾಗುತ್ತದೆ ಕೆಲವರು ಬಾದಾಮಿಯನ್ನು ರಾತ್ರಿ ನೆನೆಸಿ ಬೆಳಗ್ಗೆ ತಿನ್ನುವುದು ಒಳ್ಳೆಯದು ಎಂದು ಹೇಳುತ್ತಾರೆ. ದಿನನಿತ್ಯ ನಾಲ್ಕರಿಂದ ಐದು ಬಾದಾಮಿಗಳನ್ನು ತಿನ್ನುವುದರಿಂದ ಅಸಿಡಿಟಿಯಿಂದ ದೂರವುಳಿಯಬಹುದು ಮತ್ತು ಇದು ಹೆಚ್ಚಿನ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಬಾದಾಮಿಯನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ನುಣ್ಣಗೆ ರುಬ್ಬಿ ಸಕ್ಕರೆ ರಹಿತವಾಗಿ ಅದನ್ನು ಸೇವಿಸಿದರೆ ಸಹ ಅಸಿಡಿಟಿಯಿಂದ ದೂರವುಳಿಯಬಹುದು.
ಜೀರಿಗೆ
ಜೀರಿಗೆ ಮತ್ತು ಮೆಣಸುಗಳನ್ನು ಬಳಸಿದರೆ ಅಸಿಡಿಟಿ ಸಮಸ್ಯೆ ಉಂಟಾಗಬಹುದು ಎಂದು ಹಲವರು ಹೇಳುತ್ತಾರೆ . ಆದರೆ ಇದರ ನಿಯಮಿತ ಬಳಕೆಯಿಂದ ಅಸಿಡಿಟಿಯನ್ನು ದೂರವಿಡಬಹುದು. ಆದರೂ ಅಸಿಡಿಟಿ ಉಂಟಾದರೆ ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಚಮಚ ಜೀರಿಗೆ ಅರ್ಧ ಚಮಚ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿ. ಇದರಿಂದ ಅಸಿಡಿಟಿ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೆ ಅಡಿಗೆ ಮಾಡುವಾಗ ಯಾವಾಗಲೂ ಜೀರಿಗೆ ಮತ್ತು ಕಾಳು ಮೆಣಸಿನ ಪುಡಿಗಳನ್ನು ಬಳಸುವುದರಿಂದ ಅಸಿಡಿಟಿಯ ಪ್ರಮಾಣವನ್ನು ಕಡಿಮೆ ಮಾಡಬಹುದು.