ಹೊಸದಿಲ್ಲಿ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ಬಾಲ ರಾಮನ ಮೂರ್ತಿಗೆ ಕಳೆದ ಸೋಮವಾರ ಪ್ರಾಣ ಪ್ರತಿಷ್ಠೆ ಮಾಡಲಾಗಿದೆ. ಭವ್ಯ ರಾಮ ಮಂದಿರದ ಗರ್ಭಗುಡಿಯಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಡೆದ ಬಾಲ ರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ರಾಮ ಮಂದಿರಕ್ಕಾಗಿ ಮೂವರು ಶಿಲ್ಪಿಗಳು ಪ್ರತ್ಯೇಕವಾಗಿ ಮೂರು ಮೂರ್ತಿಗಳನ್ನು ಕೆತ್ತಿದ್ದರು. ಅದರಲ್ಲಿ ಅರುಣ್ ಅವರ ರಚನೆಯ ಮೂರ್ತಿ ಪ್ರತಿಷ್ಠೆಗಾಗಿ ಆಯ್ಕೆಯಾಗಿತ್ತು.
ಅರುಣ್ ಯೋಗಿರಾಜ್ ಜತೆಗೆ ಹೊನ್ನಾವರ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ರಾಮಮೂರ್ತಿಗಳನ್ನು ಕೆತ್ತಿದ್ದರು. ಕನ್ನಡಿಗರಿಬ್ಬರು ಕೃಷ್ಣ ಶಿಲೆಯಲ್ಲಿ ರಚಿಸಿದ್ದರೆ, ಪಾಂಡೆ ಅವರು ಅಮೃತ ಶಿಲೆಯನ್ನು ರಾಮ ಮೂರ್ತಿ ಕಡೆದಿದ್ದರು. ಸತ್ಯನಾರಾಯಣ ಪಾಂಡೆ ಅವರು ಕೆತ್ತಿದ್ದ ಮೂರ್ತಿಯನ್ನು ಮಂಗಳವಾರ ಅನಾವರಣಗೊಳಿಸಲಾಗಿತ್ತು.
ಪಾಂಡೆ ಕೆತ್ತಿದ್ದ ರಾಮ್ ಲಲ್ಲಾನ ಬಿಳಿ ಅಮೃತಶಿಲೆಯ ವಿಗ್ರಹವು ಚಿನ್ನದ ಆಭರಣಗಳು ಮತ್ತು ಬಟ್ಟೆಗಳಿಂದ ಅಲಂಕರಿಸಲ್ಪಟ್ಟಿದೆ. ವಿಗ್ರಹವು ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸುವ ಕಮಾನಿನಿಂದ ಆವೃತವಾಗಿದೆ. ದೇವಾಲಯದ ಮೊದಲ ಮಹಡಿಯಲ್ಲಿ ಬಿಳಿ ಅಮೃತಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗುವುದು.
ಹೊನ್ನಾವರದ ಶಿಲ್ಪಿಯ ಸುಂದರ ಮೂರ್ತಿ
ಗಣೇಶ್ ಭಟ್ ಅವರ ನೇತೃತ್ವದಲ್ಲಿ ರಚಿಸಿದ ರಾಮಲಲ್ಲಾನ ಮೂರ್ತಿ ಇದೀಗ ಬಿಡುಗಡೆಯಾಗಿದೆ. ಸೂರ್ಯ ದೇವರು ಕಿರೀಟದಲ್ಲಿ ನೆಲೆಸಿದ್ದು, ಸೂರ್ಯಚಕ್ರ, ವಿಗ್ರಹದ ಮೇಲೆ ಸಿಂಹ ಲಲಾಟವನ್ನು ಕಾಣಬಹುದು.
ಇದೊಂದು ಏಕಶಿಲೆಯ ಮೂರ್ತಿಯಾಗಿದ್ದು, ಬಿಲ್ಲು ಮತ್ತು ಬಾಣವನ್ನೂ ಒಳಗೊಂಡಿದೆ. ವಾಲ್ಮೀಕಿ ರಾಮಾಯಣದ ಪ್ರಕಾರ ಮುಖವನ್ನು ಕೆತ್ತಲಾಗಿದೆ. ಹೊಟ್ಟೆಯ ಮೃದುತ್ವವನ್ನು ಹೊಂದಿದ್ದು, ಕಮಲದ ದಳದ ಪೀಠವಿದೆ.
ಇದನ್ನು ಹೊಯ್ಸಳ ಶೈಲಿಯಲ್ಲಿ ಕೆತ್ತಲಾಗಿದೆ ಮತ್ತು ವಿಗ್ರಹದ ಪಕ್ಕದಲ್ಲಿ ಭಗವಾನ್ ಬ್ರಹ್ಮ, ಲಕ್ಷ್ಮಿ, ಹನುಮಂತ, ಗರುಡ ಕೆತ್ತನೆಯಿದೆ.