Advertisement

ಇಲ್ಲಿ ಗ್ರಾಪಂ ಕಚೇರಿಯಲ್ಲೇ ಮಲಗುತ್ತವೆ ಬೀದಿ ನಾಯಿಗಳು

03:00 PM Dec 23, 2017 | |

ಸಂತೆಮರಹಳ್ಳಿ: ನೈರ್ಮಲ್ಯಕ್ಕೆ ಕೊಡೆ ಹಿಡಿದ ಕಸದ ರಾಶಿ, ವಿಲೇವಾರಿ ಮಾಡದ ಘನ ತ್ಯಾಜ್ಯ, ಅಶುಚಿತ್ವ ತಾಂಡವವಾಡುತ್ತಿರುವ ಪಂಚಾಯ್ತಿ ಆವರಣ, ಸುತ್ತ ಮಲ ಮೂತ್ರ ವಿಸರ್ಜನೆ, ದುರ್ನಾತ… ಇದು ಯಾವುದೋ ಕೊಳಚೆ ಪ್ರದೇಶದ ಪರಿಸ್ಥಿತಿಯಲ್ಲ, ಬದಲಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಪ್ರಮುಖ ಹೋಬಳಿ ಕೇಂದ್ರವಾಗಿರುವ ಸಂತೆಮರಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸುತ್ತಮುತ್ತ ಹಾಗೂ ಕೂಗಳತೆ ದೂರದಲ್ಲಿರುವ ಬಸ್‌ ನಿಲ್ದಾಣದಲ್ಲಿನ ದುಸ್ಥಿತಿ.

Advertisement

ಸಂತೆಮರಹಳ್ಳಿ ಗ್ರಾಮವು ಪ್ರಮುಖ ಹೋಬಳಿ ಕೇಂದ್ರವಾಗಿದೆ. ಚಾಮರಾಜನಗರ, ಯಳಂದೂರು, ನಂಜನಗೂಡು, ಮೈಸೂರಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನವೂ ಹೌದು. ಈ ಹಿಂದೆ ಸಂತೆಮರಹಳ್ಳಿಯು ವಿಧಾನಸಭಾ ಕ್ಷೇತ್ರವಾಗಿತ್ತು. ಆದರೆ, ಆ ನಂತರ ಕ್ಷೇತ್ರ ಮರು ವಿಂಗಡಣೆಯಿಂದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪಿಗೆ ಸೇರಲ್ಪಟ್ಟಿತ್ತು. ವಿಧಾನಸಭಾ ಕ್ಷೇತ್ರವಾಗಿದ್ದಾಗ ಹಲವು ಶಾಸಕರು ಗೆದ್ದಿದ್ದರು.

ಆದರೆ, ಇಲ್ಲಿ ಗೆದ್ದವರು ಸಂತೆಮರಹಳ್ಳಿಯನ್ನು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ತಾಳಿದ್ದರು. ಪರಿಣಾಮ ಇದರ ಅಭಿವೃದ್ಧಿ ಇಂದಿಗೂ ಮರೀಚಿಕೆಯಾಗಿದೆ.
 
ಸಂತೆಮರಹಳ್ಳಿಗೆ ನಿತ್ಯ ಸಾವಿರಾರು ಜನರು ಬರುತ್ತಾರೆ. ಆದರೆ, ಇಲ್ಲಿ ಸೂಕ್ತ ಬಸ್‌ ನಿಲ್ದಾಣ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಇತರೆ ಮೂಲ ಸೌಕರ್ಯಗಳಿಲ್ಲ. ಇದರಿಂದ ಇದು ಪ್ರಮುಖ ಹೋಬಳಿ ಕೇಂದ್ರವಾಗಿದ್ದರೂ ಕುಗ್ರಾಮವಾಗಿಯೇ ಇದೆ. 

ಪಂಚಾಯ್ತಿ ಸುತ್ತಮುತ್ತ ನೈರ್ಮಲ್ಯ ಕೊರತೆ: ಗ್ರಾಮಗಳ ನೈರ್ಮಲ್ಯ ಕಾಪಾಡಬೇಕಾದ ಗ್ರಾಪಂ ಕಚೇರಿ ತನ್ನ ಸುತ್ತ ಕಸಕಡ್ಡಿಯ ರಾಶಿ ಇಟ್ಟುಕೊಂಡಿದೆ. ಅದನ್ನು ತೆರವಿಗೆ ಮುಂದಾಗದಿರುವುದು ಇಲ್ಲಿನ ಆಡಳಿತ ವೈಖರಿಯನ್ನು ಎತ್ತಿತೋರಿಸುತ್ತದೆ. ನಿತ್ಯ ಇಲ್ಲಿಯೇ ಓಡಾಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಸವನ್ನು ಕಂಡರೂ ಕಾಣದಂತೆ ನೋಡಿ ಓಡಾಡುತ್ತಿದ್ದರೆ. ತಮ್ಮ ಕೆಲಸ
ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಆಡಳಿತ ವೈಖರಿಗೆ ಶಾಪ ಹಾಕಿ ಹೋಗುತ್ತಾರೆ. 

ಪಂಚಾಯ್ತಿ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆ: ಗ್ರಾಪಂ ಕಚೇರಿ ಪಕ್ಕದಲ್ಲಿಯೇ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಕಚೇರಿ ಒಳಗೆ ಹಾಗೂ ಹೊರಗೆ ದುರ್ನಾತ ಬೀರುತ್ತಿದೆ. ಇದು ರೋಗ ರುಜಿನಗಳಿಗೆ ಎಡೆಮಾಡಿಕೊಡುತ್ತಿದೆ. ಇನ್ನೊಂದೆಡೆ ಕಸದ ರಾಶಿಯ ಮೇಲೆ ಮೂತ್ರ ವಿಸರ್ಜನೆ ಮಾಡುವುದರಿಂದ ಕಸ ಕೊಳೆತು ಗಬ್ಬುನಾರುತ್ತಿದ್ದು ಇದನ್ನು ಸಹ ವಿಲೇವಾರಿ ಮಾಡಿ ಸ್ವತ್ಛತೆ ಮಾಡುವಲ್ಲಿ ಪಂಚಾಯಿತಿ ನಿರ್ಲಕ್ಷ್ಯ ತಾಳಿಲ್ಲ. 

Advertisement

ಅಲ್ಲದೇ ಪಂಚಾಯಿತಿ ಕಾರ್ಯಾಲಯದ ಒಳಗೆ ನಾಯಿಗಳು ಬಂದು ಮಲಗುತ್ತಿವೆ. ಇವು ರಾತ್ರಿ ವೇಳೆ ಬಂದು ಗಲೀಜು ಮಾಡಿ ಹೋಗುತ್ತವೆ. ಕಾರ್ಯಾಲಯದ ಸುತ್ತ ಸೂಕ್ತ ಕಾಂಪೌಂಡ್‌ ನಿರ್ಮಾಣ ಮಾಡಿ ಇವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮುಂದಾಗಬೇಕಿದೆ ಎಂಬುದು ಕಣ್ಣೇಗಾಲ ಮಹದೇವನಾಯಕ ಅವರ ದೂರು.

ಸಂತೇಮರಹಳ್ಳಿ ಗ್ರಾಮದಲ್ಲಿ ಸ್ವತ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪಂಚಾಯ್ತಿ ಮುಂದಾಗಿದೆ. ಆದರೆ, ಕೆಲವು ಕಡೆ ಅಶುಚಿತ್ವ ಕಂಡುಬರುತ್ತಿರುವ ಕುರಿತು ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಅವುಗಳ ಬಗ್ಗೆ ಮಾಹಿತಿ ಕಲೆ ಹಾಕಿ ನೈರ್ಮಲ್ಯ ಕಾಪಾಡಿ ಸಾರ್ವಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲಾಗುವುದು.
ಕಿ ರಾಮೇಗೌಡ, ಪಿಡಿಒ, ಸಂತೆಮರಹಳ್ಳಿ

 ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next