Advertisement

ಶ್ರವಣ ದೋಷವುಳ್ಳ ಮಕ್ಕಳ ಹೆತ್ತವರು ಮತ್ತು ಶಿಕ್ಷಕರಿಗೆ ಇಲ್ಲಿವೆ ಕೆಲವು ಸಲಹೆ-ಸೂಚನೆಗಳು

09:49 AM Nov 11, 2019 | mahesh |

ಕಿವಿ ಕೇಳದೆ ಇರುವ ಮಗು ಶಾಲೆಯಲ್ಲಿ ಇದ್ದರೆ ಶಿಕ್ಷಕ/ಶಿಕ್ಷಕಿಯರಿಗೆ ತಾನು ಆ ಮಗುವಿಗೆ ಹೇಗೆ ಕಲಿಸಲಿ ಎಂದು ಪ್ರಶ್ನೆ ಏಳುವುದು ಸಹಜ. ಅದ‌ರ ಜತೆ ಹೇಗೆ ಸಂಭಾಷಣೆ ಮಾಡಲಿ ಎಂಬ ಪ್ರಶ್ನೆ ಸಹಜವಾಗಿಯೂ ಮೂಡುತ್ತದೆ. ಹಿಂದುಗಡೆಯಿಂದ ಮಾತನಾಡಿದರೆ ಮಗುವಿಗೆ /ವಿದ್ಯಾರ್ಥಿಗೆ ಅರ್ಥೈಸಿಕೊಳ್ಳಲು ಕಷ್ಟವಾಗುತ್ತದೆ. ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟರೆ ಮಗುವಿನ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ.

Advertisement

ಮಗುವಿಗೆ ಶ್ರವಣ ಯಂತ್ರವನ್ನು ಉಪಯೋಗಿಸಲು ಪ್ರೋತ್ಸಾಹ ನೀಡಬೇಕು.
ಮಾತನಾಡುವಾಗ ಮಾತಿನಲ್ಲಿ ಸ್ಪಷ್ಟತೆ ಹಾಗೂ ಸಹಜವಾಗಿದ್ದರೆ ಉತ್ತಮ.
ತರಗತಿಯಲ್ಲಿ ಸಾಕಷ್ಟು ಬೆಳಕು ಇದ್ದರೆ ಮಗುವಿಗೆ ಅಧ್ಯಾಪಕರ ತುಟಿ ಚಲನೆ ನೋಡಿ, ಹಾವಭಾವ ನೋಡಿ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ.
ಸಾಧ್ಯವಾದಷ್ಟು ಗಲಾಟೆ ಅಥವಾ ಶಬ್ದವು ಕಡಿಮೆ ಇದ್ದರೆ ಒಳ್ಳೆಯದು.
ಮಗುವು ತರಗತಿಯಲ್ಲಿ ಕಿಟಿಕಿಯ ಬದಿಗೆ ಕುಳಿತುಕೊಳ್ಳುತ್ತಿದ್ದರೆ ಹೊರಗಿನ ಶಬ್ದವು ಹೆಚ್ಚಾಗಿ ಕೇಳಿ ಪಾಠಕ್ಕೆ ಗಮನಕೊಡಲು ಕಷ್ಟವಾಗುತ್ತದೆ. ಆದುದರಿಂದ ಮೊದಲಿನ ಸಾಲಿನಲ್ಲಿ ಸರಿಯಾಗಿ ಬೋರ್ಡ್‌ ಕಾಣುವಂತೆ ಕುಳಿತುಕೊಂಡರೆ ಉತ್ತಮ.
ತರಗತಿಯು ಪ್ರತಿಧ್ವನಿ ರಹಿತವಾಗಿರಬೇಕು.
ಯಾವುದೇ ವಿಷಯವನ್ನು ಪಾಠ ಮಾಡುವಾಗ ಅದರ ಬಗ್ಗೆ ಮಾಹಿತಿಯನ್ನು ಯಾ ಶೀರ್ಷಿಕೆಯನ್ನು ಬೋರ್ಡ್‌ನಲ್ಲಿ ಬರೆದರೆ ಮಗುವಿಗೆ ಯಾವುದರ ಬಗ್ಗೆ ಮಾತನಾಡುತ್ತಾರೆ ಎಂದು ಗ್ರಹಿಸಿ, ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ.
ಸಾಧ್ಯವಾದಷ್ಟು ಚಿತ್ರಗಳನ್ನು ತೋರಿಸುವುದು, ವೀಡಿಯೋಗಳನ್ನು ತೋರಿಸಿದರೆ ಬೇಗನೆ ಅರ್ಥ ಮಾಡಲು ಸಹಕಾರಿಯಾಗುತ್ತದೆ.

Small group activity/group discussio ಇದ್ದರೆ ಅವರನ್ನು ಸಹಾ ಭಾಗವಹಿಸಲು ಪ್ರೋತ್ಸಾಹಿಸಿ. ಅದರ ಬಗ್ಗೆ ಮಾಹಿತಿಯನ್ನು ಮೊದಲೇ ಅವರಿಗೆ Handout/ಕರಪತ್ರಗಳನ್ನು ನೀಡಿದರೆ ಉತ್ತಮ.

ಉಚ್ಚಾರವು ಸ್ಪಷ್ಟವಾಗಿದ್ದು, ಮುಖ ಮುಚ್ಚಿ ಮಾತನಾಡದೇ ಪ್ರತಿಯೊಬ್ಬರು ಸಂಭಾಷಣೆ ಪ್ರಾರಂಭಿಸುವ ಮೊದಲು ವಿದ್ಯಾರ್ಥಿಯ ಗಮನಹರಿಸಲು ಕೈ ಸನ್ನೆಯನ್ನು ಮಾಡಿದರೆ ಉತ್ತಮ.

ಸಾಧ್ಯವಾದಷ್ಟು ಸನ್ನೆಯನ್ನು ಕಡಿಮೆ ಮಾಡಿ. ಮಾತನಾಡಲು ಪ್ರೋತ್ಸಾಹಿಸಿ.

Advertisement

ಕಲಿಸುವಿಕೆಯಲ್ಲಿ ವೇಳಾಪಟ್ಟಿ / time table ನಲ್ಲಿ ವ್ಯತ್ಯಾಸವಿದ್ದರೆ ಮುಂಚಿತವಾಗಿ ಬರೆದು ತೋರಿಸಿ.

ಇಂತಹ ಮಕ್ಕಳಿಗೆ ಪ್ರಶ್ನೆ ಕೇಳುವಾಗ ಬೋರ್ಡಿಗೆ ಮುಖ ಮಾಡಿ ಕೇಳಿದರೆ ಅವರಿಗೆ ತಿಳಿಯದೇ ಇರಬಹುದು. ಸಾಧ್ಯವಾದಷ್ಟು ಎದುರಿಗೆ ಮಾತನಾಡಿ ಅಂತರ ಕಡಿಮೆ ಇದ್ದರೆ ಒಳ್ಳೆಯದು.

ಆಧುನಿಕ ಸಲಕರಣೆಗಳನ್ನು ಉಪಯೋಗಿಸಲು ಅವಕಾಶವಿದ್ದರೆ ಉಪಯೋಗಿಸಿ. ಇದರಿಂದ ಮಗುವಿಗೆ ಅಭ್ಯಸಿಸಲು ಸುಲಭವಾಗುತ್ತದೆ.

ಶಾಲೆಗಳಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಬರವಣಿಗೆಯ ಮೂಲಕ ತೋರಿಸಿ ಹೇಳಿಕೊಡಿ.

ಹೆತ್ತವರ ಪಾತ್ರ ಅತೀ ಮುಖ್ಯ
ಹೆತ್ತವರು ಮಗು ಸರಿಯಾಗಿ ಶ್ರವಣ ಯಂತ್ರವನ್ನು ಹಾಕಿಕೊಳ್ಳುತ್ತದೆಯೋ ಎಂದು ಗಮನಿಸಬೇಕು.
ಯಾವಾಗಲೂ ಹಾಕುವ ಮೊದಲು ಅದು ಸರಿಯಾಗಿ ಕೆಲಸ ಮಾಡುತ್ತದೆಯೋ ಎಂದು ಗಮನಿಸಬೇಕು.

ಮಗುವಿನ ವಯಸ್ಸಿಗೆ ಅನುಗುಣವಾಗಿ ಆ ಮಗುವಿನ ಪದ ಭಂಡಾರವನ್ನು ಹೆಚ್ಚಿಸಬೇಕು. ಅಂದರೆ ನಾವು ಬಳಸುವ ಪ್ರತಿಯೊಂದು ವಸ್ತುವಿನ ಪರಿಚಯ ಮಾಡಿಕೊಡಬೇಕು. ಯಾವಾಗಲೂ ಕಲಿಸುವಾಗ ಚಿತ್ರಗಳನ್ನು ತೋರಿಸಿ ಅಥವಾ ನಿಜವಾದ ವಸ್ತುಗಳನ್ನು ತೋರಿಸಿ ಅದರ ಬಗ್ಗೆ ಬರೆದು ತೋರಿಸಿ ಹೇಳಿಕೊಡಿ. ಮಗುವು ನೋಡಿ, ಕೇಳಿ ಹಾಗೂ ಬರವಣಿಗೆಯ ಮೂಲಕ ಅಭ್ಯಸಿಸುವುದರಿಂದ ಭಾಷೆ ಮತ್ತು ಮಾತಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ದಿನಾಲೂ ಒಂದೊಂದು ಹೊಸ ಪದವನ್ನು ಹೇಳಿಕೊಡಿ.
ಮಗುವಿನ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕಾ ಪುಸ್ತಕಗಳನ್ನು ಆರಿಸಿಕೊಳ್ಳಿ.
ಕಥೆಗಳನ್ನು ಹೇಳಿಕೊಡುವಾಗ ಚಿತ್ರಗಳು ಇದ್ದರೆ ಅದನ್ನು ತೋರಿಸಿ ಹೇಳಿಕೊಡಿ. ಅನಂತರ ಮಗುವಿಗೆ ಸಾಧ್ಯವಾದಷ್ಟು ಅದನ್ನು ಬಾಯಿಯಿಂದ ಹೇಳಲು ಪ್ರೋತ್ಸಾಹಿಸಿರಿ.
ಶಾಲೆಯಲ್ಲಿ ನಾಳೆ ಮಾಡುವ ಪಾಠವನ್ನು ಮೊದಲೇ ಅದರ ಬಗ್ಗೆ ಪರಿಚಯ ಮಾಡಿ ಕೊಡಿ. ಹಾಗೆ ಮಾಡುವುದರಿಂದ ಮಗುವಿಗೆ ಶಿಕ್ಷಕ/ಶಿಕ್ಷಕಿಯರು ಹೇಳುವುದನ್ನು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ.

ಕೆಲವೊಂದು ಕ್ಲಿಷ್ಟಕರವಾದ ಸಂಗತಿಗಳನ್ನು ಅರ್ಥಮಾಡಲು ಕಷ್ಟಕರವಾದಾಗ ವೀಡಿಯೋಗಳನ್ನು ತೋರಿಸಿ ಹೇಳಿ ಅಥವಾ ಪ್ರಯೋಗಗಳನ್ನು ಮಾಡಿ ತೋರಿಸಿ.

ವಯಸ್ಸಿಗೆ ಅನುಗುಣವಾಗಿ ಪುಸ್ತಕಗಳನ್ನು ಆರಿಸಿ ಮಗುವಿಗೆ ಗಟ್ಟಿಯಾಗಿ ಓದಲು ಸಹಾಯ ಮಾಡಿ. ಮಗು ತಾನಾಗೇ ಓದಿ ಕೇಳಿಸಿಕೊಂಡು ಉಚ್ಚಾರವನ್ನು ಸರಿ ಮಾಡಿಕೊಳ್ಳಬಹುದು. ಒಂದು ವೇಳೆ ಉಚ್ಚಾರವು ಸರಿಯಾಗದಿದ್ದರೆ ಮಗು ಹೇಳುವ ಶಬ್ದವನ್ನು ಮತ್ತು ಸರಿಯಾಗಿ ಉಚ್ಚರಿಸಬೇಕಾದ ಶಬ್ದವನ್ನು ಬರೆದು ತೋರಿಸಿ ವ್ಯತ್ಯಾಸವನ್ನು ತೋರಿಸಿ ಸರಿಯಾಗಿ ಉಚ್ಚರಿಸಲು ಉತ್ತೇಜನ ನೀಡಿ.

ಮಗುವು ಧರಿಸುವ ಶ್ರವಣೋಪಕರಣವು ಸರಿಯಾಗಿ ಕೆಲಸ ಮಾಡದಿದ್ದರೆ ಅಥವಾ ಅದರಿಂದ ಪ್ರಯೋಜನವಾಗದಿದ್ದರೆ ನಿಮಗೆ ಕಲಿಸಲು ಕಷ್ಟವಾಗುತ್ತದೆ. ಆದುದರಿಂದ ವಾಕ್‌ ಶ್ರವಣ ತಜ್ಞರನ್ನು ಭೇಟಿಯಾಗಿ ಸರಿಪಡಿಸಿ, ಮಾಹಿತಿಯನ್ನು ಪಡೆದುಕೊಳ್ಳಿ.

ಕಿವಿಯಲ್ಲಿ ಗುಗ್ಗೆ ತುಂಬಿಕೊಂಡಿದ್ದರೆ ಅಥವಾ ಕಿವಿಯ ಸೋಂಕು, ಕಿವಿ ಸೋರುತ್ತಿದ್ದರೆ ಕೇಳುವಿಕೆಯಲ್ಲಿ ವ್ಯತ್ಯಾಸವಾಗಬಹುದು. ಅದನ್ನು ನಿರ್ಲಕ್ಷಿಸದೇ ENT ತಜ್ಞರನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳ.

ಶಿಕ್ಷಕ/ಶಿಕ್ಷಕಿಯರನ್ನು ಭೇಟಿ ಮಾಡಿ ಮಗುವಿನ ಪ್ರಗತಿಯ ಬಗ್ಗೆ ಕೇಳಿ ತಿಳಿದುಕೊಳ್ಳಿ. ಸಭೆ, ಸಮಾರಂಭಗಳಲ್ಲಿ ಭಾಗವಹಿಸಲು ಉತ್ತೇಜಿಸಿ. ಎಲ್ಲರೊಡನೆ ಸಂಭಾಷಿಸಲು ಅವಕಾಶ ಮಾಡಿಕೊಡಿ.

ರೇಖಾ ಪಾಟೀಲ್‌ ಎಸ್‌.
ಸಹಾಯಕ ಉಪನ್ಯಾಸಕರು, ಸ್ಪೀಚ್‌ ಮತ್ತು ಹಿಯರಿಂಗ್‌ ವಿಭಾಗ , ಎಂಸಿಎಚ್‌ಪಿ, ಮಾಹೆ – ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next