Advertisement

ಅಮ್ಮನ ವಿವರಗಳು ಇಲ್ಲಿವೆ

10:51 AM May 25, 2018 | |

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ದ್ವಾರಕೀಶ್‌ ನಿರ್ಮಾಣದ “ಅಮ್ಮ ಐ ಲವ್‌ ಯೂ’ ಅಮ್ಮಂದಿರ ದಿನದ ಪ್ರಯುಕ್ತ ಬಿಡುಗಡೆಯಾಗಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ಚುನಾವಣೆಗಳು ಬಂದಿದ್ದರಿಂದ, ಚಿತ್ರವನ್ನು ಮುಂದೂಡಲಾಯ್ತು. ಅಮ್ಮಂದಿರ ದಿನದ ಅಂಗವಾಗಿ “ಅಮ್ಮ ಐ ಲವ್‌ ಯೂ’ ತಂಡದಿಂದ ಒಂದು ಟೈಲರ್‌ ಬಿಡುಗಡೆಯಾಗಿದ್ದು, ಈಗ ಚಿತ್ರಕ್ಕೆ ಗುರುಕಿರಣ್‌ ಸಂಯೋಜಿಸಿರುವ ಹಾಡುಗಳು ಇದೇ ತಿಂಗಳ 28ರಂದು ಬಿಡುಗಡೆಯಾಗಲಿದೆ.

Advertisement

ಹಾಗಂತ ಖುದ್ದು ಚಿರಂಜೀವಿ ಸರ್ಜಾ ಹೇಳಿಕೊಂಡಿದ್ದಾರೆ. ಇನ್ನು ಜೂನ್‌ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. “ಅಮ್ಮ ಐ ಲವ್‌ ಯೂ’ ಚಿತ್ರವು ತಮಿಳಿನ “ಪಿಚೆòಕ್ಕಾರನ್‌’ ಚಿತ್ರದ ರೀಮೇಕ್‌ ಆಗಿದ್ದು, ಮೂಲ ಚಿತ್ರದಲ್ಲಿ ವಿಜಯ್‌ ಆ್ಯಂಟೋನಿ ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಚಿರಂಜೀವಿ ಸರ್ಜಾ ನಿರ್ವಹಿಸಿದ್ದಾರೆ. ಚಿರುಗೆ ನಾಯಕಿಯಾಗಿ ಹೊಸ ಹುಡುಗಿ ನಿಶ್ವಿ‌ಕಾ ನಾಯ್ಡು ಇದ್ದಾರೆ.

ತಾಯಿ ಪಾತ್ರದಲ್ಲಿ ಹಿರಿಯ ನಟಿ ಸಿತಾರಾ ನಟಿಸಿದರೆ, ಮಿಕ್ಕಂತೆ ಪ್ರಕಾಶ್‌ ಬೆಳವಾಡಿ, ರವಿ ಕಾಳೆ, ಗಿರಿ ದ್ವಾರಕೀಶ್‌, ಚಿಕ್ಕಣ್ಣ, ಬಿರಾದಾರ್‌ ಮುಂತಾದವರು ಚಿತ್ರದಲ್ಲಿದ್ದಾರೆ. ಇದೊಂದು ತಾಯಿ-ಮಗನ ಬಾಂಧವ್ಯದ ಚಿತ್ರವಾಗಿದ್ದು, ತಾಯಿ ಪ್ರೀತಿ ಅನ್ನೋದು ಎಷ್ಟು ದೊಡ್ಡದು ಮತ್ತು ಅದನ್ನು ಪಡೆಯುವುದಕ್ಕೆ ಮಗ ಯಾವ ಹಂತಕ್ಕೆ ಹೋಗುತ್ತಾನೆ ಅನ್ನೋದೇ ಚಿತ್ರದ ಕಥೆಯಂತೆ.

“ಅಮ್ಮ ಐ ಲವ್‌ ಯೂ’ ಚಿತ್ರವು ದ್ವಾರಕೀಶ್‌ ಬ್ಯಾನರ್‌ನ 51ನೇ ಚಿತ್ರ. ಈ ಚಿತ್ರವನ್ನು ದ್ವಾರಕೀಶ್‌ ಅವರ ಮಗ ಯೋಗಿ ದ್ವಾರಕೀಶ್‌ ನಿರ್ಮಿಸುತ್ತಿದ್ದಾರೆ. ಇನ್ನು “ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ನಿರ್ದೇಶಿಸುತ್ತಿದ್ದಾರೆ. ಇನ್ನು ಶೇಖರ್‌ ಚಂದ್ರು ಅವರ ಛಾಯಾಗ್ರಹಣ ಮತ್ತು ಗುರುಕಿರಣ್‌ ಅವರ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next