Advertisement

ಬಡಗಿನ ಶ್ರೇಷ್ಠ ಭಾಗವತ ಹೆರಂಜಾಲು ಗೋಪಾಲ ಗಾಣಿಗರು 

06:00 PM Aug 26, 2018 | |

ಹೆರಂಜಾಲು… ಯಕ್ಷಗಾನ ಲೋಕದಲ್ಲಿ ಈ ಪುಟ್ಟ ಊರಿನ ಹೆಸರು ಕಳೆದ ಒಂದು ಶತಮಾನದಿಂದ ಪ್ರಸಿದ್ಧಿಯಲ್ಲಿದೆ. ಇದಕ್ಕೆ ಕಾರಣ ಯಕ್ಷರಂಗಕ್ಕೆಅಮೋಘ ಕೊಡುಗೆ ಸಲ್ಲಿಸಿರುವ ಹೆರಂಜಾಲು ಗಣಪಯ್ಯ ಗಾಣಿಗ, ಅವರ ಪುತ್ರ ಗುರು ಹೆರಂಜಾಲು ವೆಂಕಟರಮಣ ಗಾಣಿಗ ಮತ್ತು ಅವರ ಪುತ್ರ ಪ್ರಸಿದ್ದ ಭಾಗವತ ಹೆರಂಜಾಲು ಗೋಪಾಲ ಗಾಣಿಗರು.

Advertisement

ಬಡಗುತಿಟ್ಟಿನ ಯಕ್ಷಗಾನ ಲೋಕದ ಸಮರ್ಥ ಗುರುಗಳಲ್ಲಿ ಒಬ್ಬರಾದ ಹೆರಂಜಾಲು ವೆಂಕಟರಮಣ ಗಾಣಿಗರ ಸುಪುತ್ರನಾಗಿ ಜನಿಸಿದ ಗೋಪಾಲ ಗಾಣಿಗರು ಬಾಲ್ಯದಲ್ಲೇ ಕಲಾವಿದನಾಗುವ ಮಹಾದಾಸೆ ಹೊಂದಿ  ಸಾಧನೆ ಮತ್ತು ಶ್ರಮದಿಂದ ಯಶಸ್ಸು ಪಡೆದು ಅಪಾರ ಸಾಂಪ್ರದಾಯಿಕ ಯಕ್ಷಗಾನ ಅಭಿಮಾನಿಗಳ ಪ್ರೀತಿಗೆ ಪಾತ್ರವಾದವರು. 

1978-79 ರಲ್ಲಿ ಡಾ.ಶಿವರಾಮ ಕಾರಂತರ ನೇತ್ರತ್ವದ ಉಡುಪಿಯ ಯಕ್ಷಗಾನ ಕೇಂದ್ರ ಉಡುಪಿ ಇಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡ ಗೋಪಾಲ ಗಾಣಿಗರು ಗುರುತ್ರಯರಾಗಿದ್ದ ಭಾಗವತ ನೀಲಾವರರಾಮಕೃಷ್ಣಯ್ಯ ,ವೆಂಕಟರಮಣ ಗಾಣಿಗ ಮತ್ತು ಕೋಟ ಮಹಾಬಲ ಕಾರಂತರಿಂದ 5 ವರ್ಷಗಳ ಕಾಲ  ಹಿಮ್ಮೇಳ ಮತ್ತು ಮುಮ್ಮೇಳದ ಎಲ್ಲಾ ಪ್ರಕಾರಗಳಶಿಕ್ಷಣ ಪಡದು 1983 ರಲ್ಲಿ ಮಾರಣಕಟ್ಟೆ ಮೇಳದಲ್ಲಿ  ಸಹ ಭಾಗವತನಾಗಿ ಸೇರಿ ಯಕ್ಷಪಯಣವನ್ನು ಆರಂಭಿಸಿದರು. ಸತತ ಮೂರು ವರ್ಷದ ಸೇವೆಯ ಬಳಿಕ ಕಮಲಶಿಲೆ,ಮಂದಾರ್ತಿ ,ಸಾಲಿಗ್ರಾಮ ಮತ್ತು ಶಿರಸಿ ಮೇಳಗಳಲ್ಲಿ ಭಾಗವತಿಕೆ ಮಾಡಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು.

ಯಾವುದೇ ಭಾಗವತರ ಅನುಕರಣೆ ಇಲ್ಲದೆ ಸತತ 32 ವರ್ಷಗಳಿಂದ ಯಕ್ಷ ಲೋಕದ ಗಾನ ಗಂಧರ್ವನಾಗಿ ಮೆರೆಯುತ್ತಿರುವ ಗೋಪಾಲ ಗಾಣಿಗರು ಪ್ರಸ್ತುತ ಬಯಲಾಟಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯ ಉಳ್ಳ  ಬೆರಳೆಣಿಕೆಯ ಕಲಾವಿದರಲ್ಲಿ ಒಬ್ಬರು. 

ಸಾಂಪ್ರಾದಾಯಿಕ ಕುಂಜಾಲು ಶೈಲಿಯ ಪ್ರಸಿದ್ದ ಭಾಗವತರುಗಳ ಕೊಂಡಿಯಾಗಿರುವ ಗೋಪಾಲ ಗಾಣಿಗರು ಭಾಗವತಿಕೆ ಮಾತ್ರವಲ್ಲದೆ ಹೆಜ್ಜೆಗಾರಿಕೆಯನ್ನೂ ಕರಗತ ಮಾಡಿಕೊಂಡಿದ್ದಾರೆ.

Advertisement

ಸಾಲಿಗ್ರಾಮ ಮೇಳದಲ್ಲಿ 10 ವರ್ಷಗಳಕಾಲ ನಡೆಸಿದ ತಿರುಗಾಟ ಗೋಪಾಲ ಗಾಣಿಗರನ್ನು ಪ್ರಸಿದ್ದಿಯ ಉತ್ತುಂಗಕ್ಕೇರಿಸಿತ್ತು. ಪೌರಾಣಿಕ ಪ್ರಸಂಗ ಯಾವುದೇ ಇದ್ದರೂ ಅಲ್ಲಿನ ವೀರ ರಸ, ಶೃಂಗಾರ ,ಕರುಣಾ ರಸ ಯಾವುದೇ ಇರಲಿ ಆ ಪದ್ಯಗಳಿಗೆ ತನ್ನ ಕಂಠ ಸಿರಿಯಿಂದ ನ್ಯಾಯ ಒದಗಿಸುವ ಸಮರ್ಥ ಭಾಗವತ ರಲ್ಲಿ ಒಬ್ಬರಾದ ಇವರಿಗೆ ಸಾಮಾಜಿಕ ಕಥಾನಕಗಳಾದ ಈಶ್ವರಿ ಪರಮೇಶ್ವರಿ ,ರಂಗ ನಾಯಕಿಯಂಥಹ ಸೂಪರ್‌ ಹಿಟ್‌ ಪ್ರಸಂಗಳ ಪದ್ಯಗಳು ಅಪಾರ ಜನಮನ್ನಣೆ ಗಳಿಸಿಕೊಟ್ಟವು. 

ಇವರ ಶೈಲಿಯ ಹಾಡುಗಳನ್ನು ಶಿಷ್ಯರಾದ ಹಿಲ್ಲೂರು ರಾಮಕೃಷ್ಣ ಹೆಗಡೆ, ಬಹ್ಮೂರು ಶಂಕರ್‌ ಭಟ್‌ ,ಸುಬ್ರಹ್ಮಣ್ಯ ನಾವುಡರ ಪದ್ಯಗಳಲ್ಲಿ ಕೇಳಬಹುದಾಗಿದೆ.

ಹೊಸತಕ್ಕೂ ಸೈ, ಹಳೆಯ ಕಠಿಣ ಪದ್ಯಗಳುಳ್ಳ ಪ್ರಸಂಗಗಳ ಭಾಗವತಿಕೆಗೂ ಸೈ ಎನಿಸಬಲ್ಲ, ವಿಮರ್ಶಕರ ನೆಚ್ಚಿನ ಭಾಗವತ ಗೋಪಾಲ ಗಾಣಿಗರು. ಪೌರಾಣಿಕ ಪ್ರಸಂಗಗಳಾದ ಭೀಷ್ಮ ವಿಜಯ, ದಕ್ಷ ಯಜ್ಞ, ತಾಮ್ರಧ್ವಜ ಕಾಳಗ, ಕರ್ಣಾರ್ಜುನ ಕಾಳಗ, ಸುಧನ್ವಾರ್ಜುನ, ಶಶಿಪ್ರಭಾ ಪರಿಣಯ, ವಾಲಿ ವಧೆ, ಪಂಚವಟಿ ಯಂತಹ ಪ್ರಸಂಗಗಳ ಪದ್ಯಗಳನ್ನು  ಸ್ಪಷ್ಟ ಸಾಹಿತ್ಯದೊಂದಿಗೆ ಹಾಡಿ ಹಿರಿಯ ಭಾಗವತರ, ಸಹಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

ಕಲಾವಿದರು ತಮ್ಮಮಕ್ಕಳನ್ನು ವೃತ್ತಿ ಮೇಳಕ್ಕೆ ಕಲಾವಿದನಾಗಿ ಪ್ರವೇಶಮಾಡಿಸಲು ಹಿಂಜರಿಯುವ ಪ್ರಸಕ್ತ ಕಾಲ ಘಟ್ಟದಲ್ಲಿ ಮಧುರ ಕಂಠಸಿರಿ ಹೊಂದಿರುವ  ಸುಪುತ್ರ  ಪಲ್ಲವನನ್ನು ವೃತ್ತಿ ಮೇಳಕ್ಕೆ ತಿರುಗಾಟಕ್ಕಿಳಿಸಿ ಭಾಗವತನನ್ನಾಗಿ ತಯಾರು ಮಾಡುತ್ತಿರುವ  ಗೋಪಾಲ ಗಾಣಿಗರ ಪ್ರಯತ್ನ ಅಭಿನಂದಾನಾರ್ಹ.

ಗೋಪಾಲ ಗಾಣಿಗರ ಮುತುವರ್ಜಿಯಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗರ ಕನಸಿನ ಆಶಾ ಸೌಧ ಯಕ್ಷಗಾನ ಕೇಂದ್ರ  ನಾಗೂರಿನಲ್ಲಿ 2008ರಲ್ಲಿ ಶಿಲಾನ್ಯಾಸಗೊಂಡು  ಕಲಾ ಪ್ರೇಮಿಗಳ ಸಹಕಾರದೊಂದಿಗೆ 2015ರಲ್ಲಿ ಉದ್ಘಾಟನೆಗೊಂಡಿತು. 

1963 ರಿಂದ ತೊಡಗಿದ ಹೆರಂಜಾಲು ಯಕ್ಷ ಪ್ರತಿಷ್ಠಾನದ ಮೂಲಕ ಕಲಾ ಚಟುವಟಿಗೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಕೇಂದ್ರದಲ್ಲಿ ನಿರಂತರವಾಗಿ ಯಕ್ಷಗಾನ ಕಲಿಕಾಸಕ್ತರಿಗೆ ಎಲ್ಲಾ ವಿಧದ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 

 ಗೋಪಾಲ ಗಾಣಿಗರು ಸದ್ಯ ಬಯಲಾಟದ ಪ್ರಸಿದ್ಧ ಮೇಳ ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಪುತ್ರ ಪಲ್ಲವ ಗಾಣಿಗ ಅವರು ಕಲಾಧರ ಬಳಗ ಜಲವಳ್ಳಿ ಡೇರೆ ಮೇಳದಲ್ಲಿ  ತಿರುಗಾಟ ನಡೆಸುತ್ತಿದ್ದಾರೆ. 

ಇನ್ನಷ್ಟು ಶಿಷ್ಯರನ್ನು ಹೆರಂಜಾಲು ಗೋಪಾಲ ಗಾಣಿಗರು ಕಲಾ ಪ್ರಪಂಚಕ್ಕೆನೀಡಲಿ, ಮಾತ್ರವಲ್ಲದೆ ಹಲವು ಕಾಲ ಅಭಿಮಾನಿಗಳ ಕರ್ಣಗಳಿಗೆ ಗಾನ ರಸದೌತಣ ಉಣ ಬಡಿಸಲಿ ಎನ್ನುವುದು ನಮ್ಮ ಹಾರೈಕೆ. 

Advertisement

Udayavani is now on Telegram. Click here to join our channel and stay updated with the latest news.

Next