ಅದೇನೋ ಗೊತ್ತಿಲ್ಲ, ಆ ಊರಿನ ಮರ, ಗಿಡ, ಕಲ್ಲು, ಮಣ್ಣು, ಪಕ್ಷಿ, ಪ್ರಾಣಿಲೋಕದ ತುಂಬೆಲ್ಲಾ ಅವಳ ಚರಿತೆಯೇ ತುಂಬಿತ್ತು. ಬಾಯಿಂದ ಬಾಯಿಗೆ ಕಥೆಯಾಗಿ ಹರಿಯುತ್ತ ಜೀವಂತವಾಗಿಯೂ ಉಳಿದಿತ್ತು. ಬೆಳ್ಳಂಬೆಳಿಗ್ಗೆ ತಮ್ಮ ಹೆಣ್ಣುಮಕ್ಕಳ ಜಡೆ ಹೆಣೆಯುತ್ತ ಕುಳಿತ ತಾಯಂದಿರ ಕಿವಿಗೇನಾದರೂ “ಪಾವ್ ಪಾವ್ ಪಾವ್’ ಎಂಬ ಹಕ್ಕಿಯ ದನಿ ಕೇಳಿದರೆ ಅವರು ಅರೆಕ್ಷಣ ಜಡೆ ಹೆಣೆಯುವುದನ್ನು ನಿಲ್ಲಿಸಿ, “ಅವಳು ಬಂದು ನೋಡು’ ಎನ್ನುತ್ತಿದ್ದರು. ಕಣ್ಣೆದುರು ಯಾರನ್ನೂ ಕಾಣದೇ, “ಯಾರು ಬಂದದ್ದು?’ ಎಂದು ಕೇಳುವ ತಮ್ಮ ಹೆಣ್ಣುಮಕ್ಕಳಿಗೆ ಬಾವನೆದುರು ನಾಚಿ ಹಕ್ಕಿಯಾಗಿ ಹಾರಿಹೋದ ನಾದಿನಿಯೊಬ್ಬಳ ಕಥೆ ಹೇಳುತ್ತಿದ್ದರು. ಹೊಸದಾಗಿ ಮದುವೆಯಾದ ಅಕ್ಕನ ಗಂಡ ಬಾವನೊಂದಿಗೆ ಹೊಲದಲ್ಲಿ ವಿಹಾರ ಹೊರಟ ಹೆಣ್ಣುಮಗಳೊಬ್ಬಳು ಹೊಲದ ಭತ್ತದ ಹಸಿಹುಲ್ಲನ್ನು ಎರಡು ಬೆರಳುಗಳ ನಡುವಿಟ್ಟು ಎಳೆದಾಗ “ಪೀಂ…’ ಎಂಬ ಶಬ್ದ ಬಂತಂತೆ. ಅದನ್ನು ಕೇಳಿದ ಬಾವ ಬೇರೆನೋ ಶಬ್ದ ಎಂದು ಎಣಿಸಿ ನಕ್ಕುಬಿಟ್ಟನಂತೆ. ಬಾವನ ಮುಖ ನೋಡಲು ನಾಚಿದ ನಾದಿನಿ ಹಕ್ಕಿಯಾಗಿ ಹಾರಿಹೋದಳಂತೆ. ಅಂದಿನಿಂದ ಇಂದಿನವರೆಗೂ ಬಾವ ಕೇಳ್‌ದಾ ಎಂದು ಜಗತ್ತಿಗೆಲ್ಲ ಸಾರಿ ಹೇಳುತ್ತಳಿರುವಳಂತೆ. ಇದು ಅಮ್ಮಂದಿರು ಹೇಳುವ ಕಥೆಯಾದರೆ, ಹದಿಹರೆಯದ ಹೆಣ್ಣುಗಳು ಇದನ್ನು ಬೇರೆಯೇ ಕಥೆಯಾಗಿ ಹೇಳುತ್ತಾರೆ. ಬಾವ ಒಂಟಿಯಾಗಿ ಸಿಕ್ಕಿದ ನಾದಿನಿಯಲ್ಲಿ ಕೇಳಬಾರದ್ದನ್ನೇನೋ ಕೇಳಿದ. ಕಕ್ಕಾಬಿಕ್ಕಿಯಾದ ಹುಡುಗಿ ಹಕ್ಕಿಯಾಗಿ ಹಾರಿಹೋದಳು! ಅಂತೂ ಆ ಹಕ್ಕಿಗಳೆಲ್ಲ ಇಹದ ಬಂಧನವ ಮೀರಿ ಹಾರಿದ ಹೆಣ್ಣುಗಳೆ.
ಮಳೆಗಾಲ ಬಂತೆಂದರೆ ಊರಿನ ಹೆಣ್ಣು ಮಕ್ಕಳಿಗೆಲ್ಲ ಸಿತಾಳೆ ದಂಡೆ ಮುಡಿಯುವ ಆಸೆ. ಬೇಸಿಗೆಯಲ್ಲಿ ಒಣಗಿ ತನ್ನ ರೂಹೇ ತೋರಿಸದ ಈ ಗಿಡ ಮಳೆಯ ಹನಿಯೊಂದಿಗೆ ಮರದ ಮೇಲೆ ಚಿಗಿತು ಹೂವಿನ ಬದಲು ಹೂ ದಂಡೆಯನ್ನೇ ನೀಡುತ್ತಿತ್ತು. ಅಂಥಾದ್ದೊಂದು ದಂಡೆಯನ್ನು ತನ್ನ ಮಗಳ ಮುಡಿಗೆ ಮುಡಿಸುವ ಅಮ್ಮ, ಆ ಹೂವಿನ ಕಥೆಯನ್ನೂ ಮಗಳಿಗೆ ದಾಟಿಸುತ್ತಾಳೆ. ಸೀತಾದೇವಿ ರಾಮನೊಂದಿಗೆ ಅಡವಿ ಸೇರಿದ ಹೊಸತು. ಕಾಡಿನಲ್ಲಿ ಹೂವುಗಳಿಗೇನೂ ಬರವಿರಲಿಲ್ಲ; ಆದರೆ ಅವುಗಳನ್ನು ಪೋಣಿಸಲು ರಾಜಕುಮಾರಿಯಾದ ಸೀತೆಗೆ ಬರಬೇಕಲ್ಲ. ಸಖೀಯರೇ ಹೂಮಾಲೆಯನ್ನು ಕಟ್ಟುವುದು ಅಂದಿನ ರೂಢಿ. ಸೀತೆಯ ಕಷ್ಟವನ್ನು ನೋಡಲಾಗದ ಈ ಹೂಗಿಡ ಹೂಗಳ ಬದಲು ಹೂದಂಡೆಯನ್ನೇ ಅರಳಿಸಿ ಸೀತೆಯ ಮುಡಿಯೇರಿತಂತೆ. ಹಾಗಾಗಿ, ಅದು ಸೀತೆಯ ದಂಡೆ. ಅದನ್ನು ಮುಡಿಯುವಾಗೆಲ್ಲ ಸೀತೆಯ ಕಷ್ಟವನ್ನು ನೆನೆಯದ ಹೆಣ್ಣುಗಳಿರಲಿಲ್ಲ.
ಬಾವಿಯಿಂದ ನೀರು ಸೇದಲೆಂದು ಹಗ್ಗವನ್ನಿಳಿಸುವಾಗ ಖಾಲಿ ಕೊಡ ಸರಸರನೆ ಕೆಳಗಿಳಿಯುವುದು. ಆದರೆ, ನೀರು ತುಂಬಿಸಿ ಮೇಲೆಳೆಯುವಾಗ ಮೆಲ್ಲನೆ ಮೇಲೇರುವುದು. ಇದನ್ನು ಕಂಡ ಹೆಂಗಸರು ತವರಿನ ನೆನಪಿನಲ್ಲೇ ಕಾಲ ಕಳೆಯುವ ಕೆಂಚಿಯ ಕಾಲೆಳೆಯುವುದುಂಟು. ಕೊಡ ಬಾವಿಗೆ ಹೋಗುವುದೆಂದರೆ ಕೆಂಚಿ ತವರಿಗೆ ಹೋಗುವಂತೆ. ಖುಶಿಯಿಂದ ಕುಣಿಯುತ್ತ ಇಳಿದುಬಿಡುವುದು. ಗಂಡನ ಮನೆಗೆ ಮರಳುವ ಕೆಂಚಿಯ ಹೆಜ್ಜೆಗಳಂತೆ ತುಂಬಿದ ಕೊಡವೂ ಭಾರವಾದ ಹೆಜ್ಜೆಗಳನ್ನಿಡುತ್ತಾ ಮೇಲೇರುವುದು. ತವರೆಂದರೆ ಹೆಣ್ಣಿಗೆ ಅದೆಂತಹ ತಹತಹಿಕೆ ! ನೀರನೆಳೆವ ಕಾಯಕಕ್ಕೂ ತವರೇ ಹೋಲಿಕೆ.
ಕಾಡಿನಲ್ಲಿ ಸೊಪ್ಪು ಸವರುವಾಗಲೂ ಬಸುರಿ ಮರದ ಸೊಪ್ಪು ಕತ್ತಿಯಿಂದ ಹೊರಗು ! ಬಸುರಿ ಮರ ಕಾಡಿನಲ್ಲಿಯೇ ಬಹಳ ವಿಶೇಷವಾದ ಮರ. ಇನ್ನೊಂದು ಮರದೊಂದಿಗೆ ಹಾಸುಹೊಕ್ಕಾಗಿ ಸೇರಿಕೊಂಡು ಬೆಳೆಯುವ ಈ ಮರ, ಮೇಲೇರಿದಾಗ ಮಾತ್ರ ತನ್ನದೇ ಕೊಂಬೆ, ರೆಂಬೆ, ಎಲೆಗಳೊಂದಿಗೆ ಪ್ರತ್ಯೇಕವಾಗಿ ಗೋಚರಿಸುತ್ತದೆ. ಇದರ ಹಿಂದೆಯೂ ಹೆಣ್ಣೊಬ್ಬಳ ಕಥೆಯಿದೆ. ಬಸಿರು-ಬಾಣಂತನವೆಂದರೆ ಹೆಣ್ಣಿಗೆ ತಾಯಿಯ ಆಸರೆ ಬೇಕು. ತಾಯಿಯಿಲ್ಲದ ತಬ್ಬಲಿಯೊಬ್ಬಳು ಗಂಡನ ಮನೆಯಲ್ಲಿ ಬಸುರಿಯಾದಾಗ ಪಡಬಾರದ ಕಷ್ಟ ಪಟ್ಟಳಂತೆ. ಇನ್ನು ಸಹಿಸಲಾಗದೇ ತನ್ನ ತಾಯಿಯನ್ನು ಮಣ್ಣುಮಾಡಿದ ಜಾಗಕ್ಕೆ ಬಂದು ಅತ್ತಳಂತೆ. ಅಲ್ಲಿಯೇ ಮರವಾಗಿ ಬೆಳೆದಿದ್ದ ಅವಳ ತಾಯಿ ತನ್ನ ಮಗಳನ್ನು ತಬ್ಬಿಕೊಂಡು ತನ್ನೊಡಲೊಳಗೆ ಬಚ್ಚಿಟ್ಟು ಇನ್ನೊಂದು ಮರವಾಗಿಸಿಬಿಟ್ಟಳಂತೆ. ಅಮ್ಮನ ಮಡಿಲಲ್ಲಿ ಚಿಗುರಿ, ಬೆಳೆದು ಫಲನೀಡುವ ಮರವನ್ನು ಅನ್ಯರು ತಮ್ಮ ಪಶುಗಳಿಗೆ ತಿನಿಸಾಗಿಯೂ ಕಡಿಯದಿರಲೆಂದು, ಬಸುರಿ ಮರದ ಎಲೆಯ ತಿಂದ ಪಶುಗಳು ಬಸುರಿಯಾಗದಿರಲಿ ಎಂದು ಶಾಪ ಕೊಟ್ಟಳಂತೆ. ಹಾಗಾಗಿ, ತಪ್ಪಿಯೂ ಯಾರೊಬ್ಬರೂ ಗೊಬ್ಬರಕ್ಕೆಂದಾದರೂ ಬಸುರಿ ಮರದ ಸೊಪ್ಪನ್ನು ಕೊಯ್ಯುತ್ತಿರಲಿಲ್ಲ. ತಾಯ ಮಮತೆಗೆ ಸಾವೇ ಇಲ್ಲದ ಕಥೆಯಿದು.
ಮುಸ್ಸಂಜೆಯಲಿ ತನ್ನ ಎಲೆಗಳನ್ನು ಒಂದಕ್ಕೊಂದು ಜೋಡಿಸಿಕೊಂಡ ಮೇಲೆ ಚಗತೆ ಎಲೆಗಳನ್ನು ಕೊಯ್ಯಬಾರದು. ಕೊಯ್ಯುವುದೆಂದರೆ ಹೆಣ್ಣೊಬ್ಬಳನ್ನು ಮನೆಯ ಬಾಗಿಲು ಮುಚ್ಚಿ, ಹಿಂಸಿಸಿದಂತೆ. ಗಿಡಗಳಿಗೆ ಆಹಾರ ತಯಾರಿಸುವ ಎಲೆಗಳೇ ತಾಯಿ ಎಂದು ಅವರಿಗೆ ತಿಳಿಹೇಳಿದವರ್ಯಾರೊ? ಊರಿನಲ್ಲಿರುವ ಆಕಾಶದೆತ್ತರಕೆ ಚಾಚಿದ ಸಂಪಿಗೆಯ ಮರದ ಹೂವನ್ನು ಯಾರಿಂದಲೂ ಕೊಯ್ಯಲಾಗದೆಂದು ತಿಳಿದಿದ್ದರೂ, ಆ ಮರವನ್ನು ಕಡಿಯುವಂತಿಲ್ಲ. ಏಕೆಂದರೆ ಕೊಯ್ಯಲಾರದ ಹೂವು ಎಂದಿದ್ದರೂ ದೇವರ ಮುಡಿಗೆ. ತಪ್ಪಿಯೆಲ್ಲಾದರೂ ಕಡಿದರೆ ಆ ರಾತ್ರಿ ಬೆಳಗಿನ ಜಾವದಲ್ಲಿ ಬಳ್ಳು ಕೂಗುತ್ತದೆ. (ನಾಯಿಗಳು ಅಪರಾತ್ರಿಯಲ್ಲಿ ಅಪಸ್ವರದಲ್ಲಿ ಅರಚುತ್ತಾ ಹೋಗುವುದನ್ನು ಬಳ್ಳು ಕೂಗುವುದು ಎನ್ನುತ್ತಾರೆ.) ಇದರಿಂದ ಊರಿಗೆ ಕೇಡಾಗುವುದಂತೂ ಖಂಡಿತ. ನೇಗಿಲಿನಿಂದ ಊಳುವುದು, ಕೃಷಿಗಾಗಿ ನೆಲವನ್ನು ಹದಮಾಡುವುದನ್ನು ಬಿಟ್ಟು ಸುಖಾಸುಮ್ಮನೆ ಕೋಲಿನಿಂದ ನೆಲವನ್ನು ಗೀರುವಂತಿಲ್ಲ. ಅದು ಭೂಮಿತಾಯಿಯ ಎದೆಯನ್ನು ಗೀರಿದಂತೆ. ತಮಾಷೆಗಾದರೂ ಹೆಣ್ಣೊಬ್ಬಳ ಮೇಲೆ ಕತ್ತಿಯೆತ್ತಬಾರದು. ರಾತ್ರಿ ಹುಲಿಯ ಕನಸು ಬೀಳುವುದು.
ಹೀಗೆ ಚಾಚಿಕೊಳ್ಳುವ ಕಥೆಗಳು ಮನೆಯ ನಾಲ್ಕು ಗೋಡೆಗಳನ್ನು ದಾಟಿ ಊರ ತುಂಬ ಹರಡಿರುವ ಹಸಿರು, ಹುಲ್ಲು, ಕಾಡು-ಮೇಡುಗಳಾಚೆ ಸಾಗಿ, ದಿಗಂತದವರೆಗೂ ಹರಡಿ, ಹೆಣ್ಣಿನ ಮನದೊಳಗೆ ಮಿಡಿಯುವ ಬಿಡುಗಡೆಯ ಹಾಡಾಗಿ ಹರಿಯುತ್ತಿದ್ದವು. ಹೆಣ್ಣು ಕಣ್ಣೀರು ಹಾಕಿದ ಮನೆಯು ಎಂದಿಗೂ ಉದ್ಧಾರವಾಗದೆಂಬ ಕಥೆಯನ್ನು ಸಾರುವ ಭತ್ತ ಕುಟ್ಟುವ ಹಾಡುಗಳು ಅಣ್ಣಂದಿರ ಅಹಂಮಿಗೆ ಕಡಿವಾಣ ಹಾಕುತ್ತಿದ್ದವು. ಭವದ ಬಂಧನದಲ್ಲಿ ಬಂಧಿಯಾದ ಆ ಊರಿನ ಹೆಣ್ಣುಗಳೆಲ್ಲರ ಬಿಡುಗಡೆಯ ಭಾವವೋ ಎಂಬಂತೆ ಹೆಣ್ಣುಗಳ ಪರಮಾಪ್ತ ದೇವತೆ ಚೌಡಿ ಯಾರ ಜಪ್ತಿಗೂ ಸಿಗದೇ, ಮಳೆ-ಗಾಳಿ-ಚಳಿಯ ಹಂಗಿರದೇ ಮನೆಯಾಚೆಗೆ ನಿಂತು ಹೆಣ್ಣು ಸಂಕುಲವನ್ನು ಕಾಯುತ್ತಿದ್ದಳು.
– ಸುಧಾ ಆಡುಕಳ