ಆ ಸುಸಂಸ್ಕೃತ ಮನೆಯಲ್ಲಿ ಇದ್ದಿದ್ದು, ತಾಯಿ- ಮಗ ಮಾತ್ರ. ತಾಯಿ ಸದ್ಗುಣಶಿರೋಮಣಿ. ಮಗನಿಗೆ ಬದುಕಿನ ಕುರಿತಾದ ಅತ್ಯಮೂಲ್ಯ ಸಂಸ್ಕಾರವನ್ನು ಕಲಿಸಿದ್ದಳು. ಮಗ ದೊಡ್ಡವನಾದರೂ ತಾಯಿಯ ಮಾತನ್ನು ಮೀರುತ್ತಿರಲಿಲ್ಲ. ತಾಯಿ- ಮಕ್ಕಳಿಬ್ಬರೂ ಸುಖದಿಂದ ಬಾಳುತ್ತಿದ್ದರು. ಮನೆಯಲ್ಲಿ ಧನ- ಧಾನ್ಯದ ಸಂಗ್ರಹವೂ ಇತ್ತು. ಇದನ್ನರಿತ ಕಳ್ಳನೊಬ್ಬ ಅವರ ಮನೆಗೆ ಕನ್ನಹಾಕಲು ಸಂಚು ರೂಪಿಸಿದ. ಕಳ್ಳಹೆಜ್ಜೆಯನ್ನಿಟ್ಟು, ಆ ಮನೆಯ ಹಿತ್ತಲನ್ನು ಪ್ರವೇಶಿಸಿದ್ದ.
ರಾತ್ರಿಯ ಸುಮಾರು. ಮಗ, ತಾಯಿಗೆ ಹೇಳುತ್ತಿದ್ದ: “ಅವ್ವಾ! ನಾಳೆ ಬೀಗರ ಊರಿಗೆ ಹೋಗಿಬರುವೆ. ದೂರದ ಹಾದಿ. ಆದ್ದರಿಂದ, ನನ್ನ ಪಾಲಿನ ಹಾಗೂ ಮಣ್ಣಿನ ಪಾಲಿನ ಬುತ್ತಿಯನ್ನು ಕಟ್ಟಿಕೊಡು, ನಸುಕಿನಲ್ಲಿ ಹೊರಡುವೆ’ ಎಂದ. ತಾಯಿ, “ಹಾಗೆಯೇ ಆಗಲಿ’ ಎಂದಳು. “ನನ್ನ ಪಾಲಿನ, ಮಣ್ಣಿನ ಪಾಲಿನ ಬುತ್ತಿ’ ಎಂದಿದ್ದು ಕಳ್ಳನಿಗೆ ಯೋಚನೆಗೆ ಹಚ್ಚಿತು. ಅದರ ಅರ್ಥ ತಿಳಿಯುವ ತವಕದಲ್ಲಿ, ಕಳ್ಳತನಕ್ಕಾಗಿ ಬಂದ ಉದ್ದೇಶವನ್ನೇ ಮರೆತ. ಕಳ್ಳ, ರಾತ್ರಿಯೆಲ್ಲ ಹಿತ್ತಲಿನಲ್ಲಿಯೇ ಕಳೆದ.
ಬೆಳ್ಳಿಚುಕ್ಕಿ ಮೂಡುತ್ತಿದ್ದಂತೆ ಮಗನು ಎದ್ದು ಸ್ನಾನಮಾಡಿ, ಶಿವಪೂಜೆ ಮುಗಿಸಿ ಅಲೊಪಾಹಾರ ಪೂರೈಸಿದ. ತಾಯಿ ಎರಡು ಬುತ್ತಿಗಳನ್ನು ಅವನ ಕೈಗಿಟ್ಟು, “ಜೋಪಾನವಾಗಿ ಊರು ಸೇರು’ ಎಂದು ಬೀಳ್ಕೊಟ್ಟಳು. ಕಳ್ಳ, ಆ ಮಗನನ್ನೇ ಹಿಂಬಾಲಿಸಿದ. ಮಧ್ಯಾಹ್ನದ ತನಕ ನಡೆದು ಸುಸ್ತಾಗಿ, ಕೆರೆ ದಂಡೆಯ ನೆರಳಿನಲ್ಲಿ ಮಗ ವಿರಮಿಸಲು ಕುಳಿತ. ಅಷ್ಟರಲ್ಲೇ ಅವನ ಕಣ್ಣಿಗೆ ಕಳ್ಳ ಬಿದ್ದ. ಕೂಡಲೇ ಮಗ, ಕಳ್ಳನಿಗೆ “ಅಯ್ಯಾ ಬಾ… ಕೂಡಿ ಊಟ ಮಾಡೋಣ’ ಎಂದು ಪ್ರೀತಿಯಿಂದ ಆಹ್ವಾನಿಸಿದ.
ಆಗ ಕಳ್ಳ, “ನನ್ನೊಳಗೆ ಕಗ್ಗಂಟಾಗಿ ಕುಳಿತಿರುವ ಪ್ರಶ್ನೆ ಬಿಡಿಸಿದರಷ್ಟೇ ನಾನು ನಿನ್ನೊಂದಿಗೆ ಊಟ ಮಾಡುತ್ತೇನೆ’ ಎಂದ. ಮಗ ಅದಕ್ಕೆ ಸಮ್ಮತಿಸಿದ. “ನನ್ನ ಪಾಲಿನ ಮತ್ತು ಮಣ್ಣಿನ ಪಾಲಿನ ಬುತ್ತಿ ಎಂದರೇನು?’- ಕಳ್ಳನ ಪ್ರಶ್ನೆ. “ಅಯ್ಯೋ, ಅದಕ್ಕೆ ಏಕೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದೀ? ನಾನು ನಿನಗೆ ಕೊಡುತ್ತಿರುವುದು, ನನ್ನ ಪಾಲಿನ ಬುತ್ತಿ. ನಾನೇ ಊಟ ಮಾಡುವುದು, ಮಣ್ಣಿನ ಪಾಲಿನದು.
ನಾನು ಉಂಡದ್ದು ನಾಳೆ ಮಣ್ಣಾಗುವುದಿಲ್ಲವೇ? ಅನ್ಯರಿಗೆ ದಾನವಿತ್ತಿದ್ದೇ, ಶಾಶ್ವತವಾದ ಪಾಲು’ ಎಂದ ಮಗ. ಅವನ ಮಾತನ್ನು ಕೇಳಿದ, ಕಳ್ಳನ ಮನಸ್ಸು ಹಗುರಾಯಿತು. ಮನುಷ್ಯನು ಲೋಭಿಯಾಗದೆ, ದೀನದಲಿತರಿಗೆ ನೆರವಾಗಿ, ತನ್ನ ಪಾಲನ್ನು ಸಂಪಾದಿಸಬೇಕು. ಸ್ವಾರ್ಥಕ್ಕಾಗಿ ಸಂಪಾದಿಸಿ, ಅದನ್ನು ಮಣ್ಣುಪಾಲು ಮಾಡಬಾರದು ಎಂಬ ಸತ್ಯ ಅವನಿಗೆ ಗೋಚರವಾಯಿತು.
* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ