ಹುಬ್ಬಳ್ಳಿ: ನಗರದಲ್ಲಿ ಬುಧವಾರ ಮಧ್ಯಾಹ್ನ ರಭಸದ ಮಳೆ ಬಿದ್ದಿದೆ. ತಾಲೂಕಿನ ಕೆಲವು ಕಡೆ ಸುಮಾರು 75 ಮಿಲಿಮೀಟರ್‌ನಷ್ಟು ಮಳೆ ಬಿದ್ದ ಬಗ್ಗೆ ವರದಿಯಾಗಿದೆ. ಕಳೆದ ಎರಡು ದಿನದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬುಧವಾರ ಮಧ್ಯಾಹ್ನ 2:30ಗಂಟೆ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಮಳೆ 45 ನಿಮಿಷ ರಭಸವಾಗಿ ಸುರಿಯಿತು.
ಅನೇಕ ಕಡೆಗಳಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುವಂತಾಯಿತು. ಹಳೇ ಹುಬ್ಬಳ್ಳಿ, ಗದಗ ರಸ್ತೆ, ಕಾಟನ್ ಮಾರ್ಕೇಟ್ ರಸ್ತೆ, ಉಣಕಲ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಚರಂಡಿಗೆ ಹರಿಯದೆ ರಸ್ತೆ ಮೇಲೆಯೇ ಸಂಗ್ರಹವಾಗಿದ್ದರಿಂದ ಬೈಕ್ ಸವಾರರು ಅನಿವಾರ್ಯವಾಗಿ ಮಳೆ ನೀರಿನಲ್ಲೇ ವಾಹನ ಚಲಾಯಿಸಿಕೊಂಡು ಹೋದರು.
ಇನ್ನೂ ಕೆಲವೆಡೆ ಒಳ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂತು. ರಸ್ತೆ ಮೇಲೆ ನೀರು ನಿಲ್ಲುತ್ತಿದ್ದಂತೆ ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು. ಈಜುಕೊಳ ಕಾಂಪ್ಲೆಕ್ಸ್ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು.
ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಮೇಲಿನ ಮಳೆ ನೀರು ಅಕ್ಕಪಕ್ಕದ ಚರಂಡಿಗೆ ಮಳೆ ನೀರು ಸರಾಗವಾಗಿ ಹರಿಯಲು ಇದ್ದ ವ್ಯವಸ್ಥೆ ಮುಚ್ಚಿರುವ ಕಾರಣಕ್ಕೆ ಈ ಅವಾಂತರ ಸೃಷ್ಟಿಯಾಗಿತ್ತು. ಪಾದಚಾರಿ ಮಾರ್ಗ ದಾಟಿ ಮಳಿಗೆಯತ್ತ ನೀರು ಹರಿಯಲು ಆರಂಭವಾಗುತ್ತಿದ್ದಂತೆ ಆತಂಕಗೊಂಡ ವ್ಯಾಪಾರಿಗಳು ಸ್ವತಃ ಪಿಕಾಸಿ, ಹಾರಿ ಹಿಡಿದು ಚರಂಡಿಗೆ ನೀರು ಹರಿಸುವ ಕಾರ್ಯದಲ್ಲಿ ತೊಡಗಿದ್ದರು.
ಸಕಾಲಕ್ಕೆ ಅಭಿವೃದ್ಧಿ ಕಾಮಗಾರಿಗಳ ಮುಗಿಯದ ಕಾರಣ ಇಂತಹ ಅವಾಂತರ ಸೃಷ್ಟಿಯಾಗುತ್ತಿವೆ. ಕಾಮಗಾರಿಗಳು ವೈಜ್ಞಾನಿಕವಾಗಿ ನಡೆಯದ ಕಾರಣ ನಾವು ಸಮಸ್ಯೆ ಅನುಭವಿಸುವಂತಾಗಿದೆ ಎಂದು ವ್ಯಾಪಾರಿಗಳು ಹಿಡಿಶಾಪ ಹಾಕಿದರು. ಬಿಆರ್‌ಟಿಎಸ್ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಂತೂ ವಾಹನ ಸವಾರರ ಪರಿಸ್ಥಿತಿ ಹೇಳತೀರದು. ವಿದ್ಯಾನಗರ, ಶ್ರೀನಗರ ವೃತ್ತ ಸೇರಿದಂತೆ ವಿವಿಧೆಡೆ ರಸ್ತೆ ಮೇಲೆ ನೀರು ಸಂಗ್ರಹವಾಗಿ ವಾಹನಗಳ ಓಡಾಡಕ್ಕೆ ದೊಡ್ಡ ಸಮಸ್ಯೆಯಾಗಿತ್ತು.
ಸುಮಾರು ಮೂರ್‍ನಾಲ್ಕು ಗಂಟೆಗಳ ಕಾಲ ನೀರು ರಸ್ತೆ ಮೇಲೆಯೇ ನಿಂತಿತ್ತು. ತಾಲೂಕು ವ್ಯಾಪ್ತಿಯಲ್ಲೂ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, ಮಂಟೂರು ಮಳೆ ಮಾಪನ ಕೇಂದ್ರದಲ್ಲಿ 75 ಮಿ.ಮೀ. ಹಾಗೂ ಶಿರಗುಪ್ಪಿ ಹೋಬಳಿಯಲ್ಲಿ 68 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ ಎಂದು ತಾಲೂಕು ಆಡಳಿತ ಮಳೆ ವರದಿಯಲ್ಲಿ ತಿಳಿಸಿದೆ.