Advertisement
ಹೊರಗೆ ಧೋ ಎಂದು ಸುರಿವ ಮಳೆ. ಒಳಗೆ ಚಳಿಯ ತಲ್ಲಣ. ಡಬ್ಬದಲ್ಲಿ ಬೆಚ್ಚಗೆ ಇರಿಸಿದ ಹಪ್ಪಳ ತೆಗೆದು, ಹುರಿದು ಕುರುಕುರನೆ ತಿನ್ನುವ ತವಕ.. ಮುಂಗಾರು ಮಳೆ ಹಾಡಿನ ಗುನುಗುವಿಕೆಯೊಂದಿಗೆ ಅವಳದೇ ಕತೆಗಳು ನೆನಪಾಗುತ್ತಿವೆ, ಮತ್ತೆ ಮತ್ತೆ ಬಾಲ್ಯದ ಪಾಡುಗಳು ನೆನಪಾಗುತ್ತಿವೆ..
Related Articles
Advertisement
ಮನೆಯ ಹುಲ್ಲಿನ ಮಾಡಿನಿಂದ ಕೈ ತುಂಬ ಬಳೆ ಹಾಕಿದ್ದ ಮುಂಗೈಯನ್ನು ಮಳೆಹನಿಗಳಿಗೆ ಹಿಡಿದಾಗ ಒಂಥರಾ ಕಚಗುಳಿಯಿಡುವ ಅನುಭವದ ಅನುಭೂತಿಯನ್ನು ವಿವರಿಸಲಾಗದು. ಅರೆ ಕ್ಷಣ ಕಣ್ಣುಮುಚ್ಚಿ ಆ ಅನುಭೂತಿಯನ್ನು ಅಸ್ವಾದಿಸುವಾಗ, ಮೈಗೊಮ್ಮೆ ಕುಳಿರ್ಗಾಳಿ ಸೋಕಿದಂಥ ರೋಮಾಂಚನ.. ಕೈ ಹೊರಗೆಯೇ ಇರಿಸಿ, ಮಳೆ ಹನಿಗಳ ಲಾಸ್ಯವನ್ನು ಸವಿಯುತ್ತಲೇ ಇರುವುದೆಂದರೆ ಒಂಥರಾ ಖುಷಿ ಅವಳಿಗೆ..
ಸ್ಟೀಲ್ ಗ್ಲಾಸನ್ನು ತಂದು ಹುಲ್ಲಿನ ಕಡ್ಡಿಗಳಿಂದ ಇಳಿಯುವ ಧಾರೆ ನೀರಿಗೆ ಹಿಡಿದರೆ, ಹುಲ್ಲಿನ ಕಂದು ಮಿಶ್ರಿತ ಬಣ್ಣವೂ ಸೇರಿದ ಆ ನೀರು ಅವಳ ಪಾಲಿನ ಆಟಕ್ಕೆ ಹಾಲು ಹಾಕದ ಕಾಫಿಯಿದ್ದಂತೆ. ಅಪ್ಪ ಅಮ್ಮನಿಗೆ ಅದನ್ನೇ “ಕಾಫಿ ಕುಡಿಯಿರಿ’ ಅಂತ ಕೊಡುತ್ತಿದ್ದದ್ದು, ಅವರೂ ಸಂಭ್ರಮದಿಂದ ಅದನ್ನು ಕುಡಿದಂತೆ ಮಾಡುತ್ತಿದ್ದುದೆಲ್ಲವೂ ಅವಳ ಪಾಲಿಗೆ ಮರೆಯಲಾಗದ ನೆನಪುಗಳು…
ಜತೆಯವರೊಂದಿಗೆ ಮಳೆಯಲ್ಲಿ ನಡೆಯುವಾಗ ಕೊಡೆ ತಿರುಗಿಸುತ್ತಾ ಅದರ ನೀರನ್ನು ಬೇರೆಯವರಿಗೆ ಸಿಡಿಸಿ, ಅವರಿಂದ ಗದರಿಸಿಕೊಂಡರೂ ಸುಮ್ಮನಾಗದೆ ಮತ್ತೆ ನೀರು ಚಿಮುಕಿಸುವುದು, ಗುಡ್ಡ ಬೆಟ್ಟದಿಂದ ನೀರು ಸಣ್ಣ ಸಣ್ಣ ಝರಿಗಳಾಗಿ ಬರುವಲ್ಲಿ ಪುಟ್ಟ ಪಾದಗಳನ್ನು ಹಿಡಿದು ಚಪ್ಪಲಿ ಅದರಲ್ಲಿ ಹೋಗುವಂತೆ ಮಾಡುವುದು, ಒಂಟಿ ಚಪ್ಪಲಿಯಲ್ಲೇ ನಡೆ ಇನ್ನು ಅಂತ ಕೇಳಿಸಿಕೊಳ್ಳುವುದು… ಅವಳ ಕಿತಾಪತಿಗಳು ಒಂದೇ ಎರಡೇ?
ತೋಟದ ಬದಿಯಲ್ಲಿ ಹಬ್ಬಿದ ಹಸಿರು ಹುಲ್ಲಿನ ಬುಡದಲ್ಲಿ ಇಳಿದು ನಿಂತ ಕಡ್ಡಿಗಳಲ್ಲಿ ಕಾಣುವ ಸ್ಪಟಿಕದಂತೆ ಶುಭ್ರವಾಗಿರುವ ಕಣ್ ಕಡ್ಡಿ. ಅದನ್ನು ಕಿತ್ತು ಕಣ್ಣಿಗಿರಿಸುವಾಗ ಸಿಗುವ ಆ ಕ್ಷಣದ ಸುಖ… ಉಫ್, ಪದಗಳಲ್ಲಿ ಹೇಗೆ ಹೇಳುವುದು?.. ಸ್ಲೇಟು ಉಜ್ಜಲು ನೀರುಕಡ್ಡಿಗಳನ್ನು ಶೇಖರಿಸುತ್ತಿದ್ದುದು, ಗುಡ್ಡ ಗುಡ್ಡ ಓಡಿ ಮಳೆಗಾಲದಲ್ಲಿ ಬಿಡುವ ಕುಂಟಂಗಲಿ (ನೇರಳೆ) ಹಣ್ಣುಗಳನ್ನು ಊಟದ ಬಾಕ್ಸ್‌ನಲ್ಲಿ ತುಂಬಿಸಿ ತರುತ್ತಿದ್ದುದು, “ಕುಂಟಂಗಿಲ ಹಣ್ಣು ತಿಂದ್ಯಾ? ನಾಳೆ ಜ್ವರ ಹಿಡ್ಕೊಳ್ಳುತ್ತೆ’ ಅಂತ ಅಮ್ಮ ರೇಗಿದ್ರೆ, ಆ ಅಂತ ಬಾಯಿ ತೆರೆದು, ನೇರಳೆ ಬಣ್ಣದ ನಾಲಿಗೆ ಹೊರಚಾಚಿ ತೋರಿಸುತ್ತಿದ್ದುದು…
ಈಗ, ಅದೇ ಹುಡುಗಿ ಬೆಳೆದು, ದೊಡ್ಡವಳಾಗಿದ್ದಾಳೆ. ಮದುವೆಯಾಗಿ, ಮಕ್ಕಳಾಗಿವೆ. ಮಳೆಗಾಲದಲ್ಲಿ ಮಗನ ಕೈ ಹಿಡಿದು, ಶಾಲೆಗೆ ತಂದು ಬಿಡುತ್ತಾಳೆ. ಅವನೇನಾದರೂ ನೀರಿಗಿಳಿದ್ರೆ ಭಯಪಡ್ತಾಳೆ, ಗಾಳಿಗೆ ಕೊಡೆ ಹಾರಿ ಹೋಗಿ ಮಗನ ಮೈ ಒದ್ದೆಯಾದರೆ ಅಂತ ರೇನ್‌ಕೋಟ್ ಕೊಡಿಸಿದ್ದಾಳೆ… ತನ್ನ ಮಕ್ಕಳ ಬಗ್ಗೆ ಅತಿ ಜಾಗ್ರತೆ ಮಾಡುತ್ತಾಳೆ. ಕಂಡು ಕೇಳದ ಜ್ವರಕ್ಕೆ ಭಯಪಡುತ್ತಾಳೆ, ಮುಂಜಾಗ್ರತೆ ವಹಿಸುತ್ತಾಳೆ… ಕೊನೆಗೆ, ತನಗೆ ಸಿಕ್ಕಿದ್ಯಾವುದೂ ಈ ಕಾಲದವರಿಗೆ ಸಿಗುವುದಿಲ್ಲ ಅಂತ ವ್ಯಥೆಯನ್ನೂ ಪಡ್ತಾಳೆ. ಬದಲಾಗಿದ್ದು ತಾನಾ, ಕಾಲವಾ ಅಂತ ಅರ್ಥವಾಗದೆ, ತಾರಸಿಯಲ್ಲಿ ಮೈ ನೆನೆಯದಂತೆ ನಿಂತು ಸುರಿವ ಮಳೆಯನ್ನು ದಿಟ್ಟಿಸುತ್ತಾಳೆ.
– ರಜನಿ ಭಟ್