ಬನ್ನೂರು: ಸಮೀಪದ ಚಾಮನಹಳ್ಳಿಯಲ್ಲಿ ತಾಯಿ ಮಗಳು ನೇಣಿಗೆ ಶರಣಾಗಿದ್ದು, ಈ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತಿ ಶಿಕ್ಷಕ ದೇವರಾಜೇಗೌಡನನ್ನು ಬನ್ನೂರು ಠಾಣಾ ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಘಟನೆಯ ವಿವರ: ಮೂಲತಃ ಕೆ.ಆರ್.ನಗರದ ಮೇಲೂರಿನವರಾದ ಇವರು ಉದ್ಯೋಗ ನಿಮಿತ್ತ ಬನ್ನೂರಿನ ಚಾಮನಹಳ್ಳಿಯಲ್ಲಿ ವಾಸ ವಾಗಿದ್ದರು. ಮೃತಳ ಪತಿ ದೇವರಾಜೇಗೌಡ ಬನ್ನೂರಿನ ವಿವೇಕಾನಂದಾ ಸಂಸ್ಥೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿಯೇ ಪತ್ನಿ ಭವ್ಯ ಕೂಡ ಆಂಗ್ಲ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಮಂಗಳವಾರ ಸಹ ದೇವರಾಜೇಗೌಡ ಶಾಲೆಗೆ ಹೋಗಿದ್ದ ವೇಳೆಯಲ್ಲಿ ಇವರ ಪತ್ನಿ ಮತ್ತು ಮಗು ನೇಣಿಗೆ ಶರಣಾಗಿದ್ದು, ನೆರೆ ಹೊರೆಯ ಮನೆಯವರು ಶಾಲೆಗೆ ಸುದ್ದಿ ಮುಟ್ಟಿಸಿದ್ದಾರೆ.
ವರದಕ್ಷಿಣೆ ಕಿರುಕುಳ: ಸುಮಾರು 5 ವರ್ಷದ ಹಿಂದೆ ಇವರನ್ನು ಕೆ.ಆರ್.ಪೇಟೆ ಬಂಡಿಹೊಳೆಯಿಂದ ಕೆ.ಆರ್. ನಗರ ಮಾಲೂರಿನ ದೇವರಾಜೇಗೌಡ ಕೊಟ್ಟು ವಿವಾಹ ಮಾಡಲಾಗಿತ್ತು. ವಿವಾಹದ ಸಂದರ್ಭದಲ್ಲಿ 200 ಗ್ರಾಂ ಚಿನ್ನ, 5 ಲಕ್ಷ ರೂ. ವರದಕ್ಷಿಣೆ, ಒಂದು ಬೈಕ್ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು ಎನ್ನಲಾಗಿದೆ. ಆದರೆ, ಮದುವೆ ಸಂದರ್ಭದಲ್ಲಿ ಕೇವಲ 50 ಗ್ರಾಂ ಕಡಿಮೆ ಚಿನ್ನ ನೀಡಿದ್ದಾರೆ ಎಂದು ಪ್ರತಿದಿನ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಹಲವಾರು ಬಾರಿ ಈ ವಿಚಾರ ಕುರಿತಂತೆ ಪಂಚಾಯಿತಿಗಳು ನಡೆದು ಸಂಧಾರ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ತವರು ಮನೆಯವರ ಆರೋಪ: ತಮ್ಮ ಮಗಳ ಮೇಲೆ ದೇವರಾಜೇಗೌಡ ಹಲ್ಲೆ ನಡೆಸಿದ್ದು, ಮಂಗಳವಾರ ಬೆಳಗ್ಗೆ ನಡೆದ ಕಲಹದಲ್ಲಿ ಹೆಂಡತಿ ಮತ್ತು ಮಗಳನ್ನು ಮನೆಯಿಂದ ಹೊರ ದಬ್ಬಿ ಹಿಂಸಿಸಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಜೊತೆಗೆ ಗ್ಯಾಸ್ ಒಲೆಗೆ ತನ್ನ ಪತ್ನಿಯ ಮುಖವನ್ನು ಹಿಡಿದು ಸುಡಲೆತ್ನಿಸಿದ್ದಾನೆ . ನಂತರ ಈಕೆ ಚೀರಿದ ಶಬ್ದ ಹೊರಗೆ ಕೇಳಲಾಗಿ , ಆತನ ಕೈಯಿಂದ ತಪ್ಪಿಸಿಕೊಂಡು ಬಂದು ಹೊರಗೆ ಕುಳಿತ್ತಿದ್ದಾಳೆ .
ಈ ಎಲ್ಲಾ ವಿಚಾರವನ್ನು ಪೋನ್ ಮೂಲಕ ತಮಗೆ ತಿಳಿಸಿದ್ದು ತಾವು ಬರುವಷ್ಟರಲ್ಲಿ ಅನಾಹುತ ನಡೆದು ಹೋಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ತಮ್ಮ ಮಗಳಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದು, ಈತನೇ ಇಬ್ಬರನ್ನು ಕೊಲೆಗೈದಿದ್ದಾನೆ. ನೇಣಿನ ಕುಣಿಕೆಯಿಂದ ಕೆಳಗೆ ಇಳಿಸಿದ ವಿವೇಕಾನಂದ ಶಾಲೆಯ ಟ್ರಸ್ಟಿ ಎಂ.ಪ್ರಕಾಶ ಸ್ಥಳಕ್ಕೆ ಆಗಮಿಸಬೇಕು. ಇದರ ಸಂಬಂಧ ಸರಿಯಾದ ಮಾಹಿತಿ ನೀಡಬೇಕು ಇಲ್ಲವಾದಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜನರು ದೇವರಾಜೇಗೌಡನ ಮೇಲೆ ಹಲ್ಲೆ ನಡೆಸಿದ್ದು, ನಂತರ ಆತ ಪೊಲೀಸ್ ರಕ್ಷಣೆಯಲ್ಲಿ ಠಾಣೆ ಸೇರಿದ್ದಾರೆ. ವಿದ್ಯಾರ್ಥಿಗಳು ಗುಂಪು ಗುಂಪಾಗಿ ಬಂದು ತಮ್ಮ ನೆಚ್ಚಿನ ಶಿಕ್ಷಕಿಯನ್ನು ಕಂಡು ಮರುಗಿದ್ದಾರೆ. ತವರು ಮನೆಯವರು ತಂಡೋಪತಂಡವಾಗಿ ಬಂದು ಸ್ಥಳದಲ್ಲಿ ಜಮಾಯಿಸಿದ್ದು ಹಿಡಿಶಾಪ ಹಾಕುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ತಾಲೂಕು ವೃತ್ತ ನಿರೀಕ್ಷಕ ಮನೋಜ್ ಕುಮಾರ್ ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಬನ್ನೂರು ಪಿಎಸ್‌ಐ ಲತೇಶ ಕುಮಾರ್, ಮಹೇಶ್ ಸೇರಿದಂತೆ ಹಲವರು ಸ್ಥಳದಲ್ಲಿ ಇದ್ದರು.