ಪೊಚೆಫ್ಸೂಮ್: ಸೀಮರ್ ಹೆನ್ರಿಟ್ ಐಶಿಮ್ವೆ ಅವರ ಅಮೋಘ ದಾಳಿಯಿಂದಾಗಿ ರುವಾಂಡ ತಂಡವು ಅಂಡರ್ 19 ವನಿತಾ ಟಿ20 ವಿಶ್ವಕಪ್ ಕೂಟದಲ್ಲಿ ಐತಿಹಾಸಿಕ ಮೊದಲ ಗೆಲುವು ದಾಖಲಿಸಿದೆ.
ಮಂಗಳವಾರ ನಡೆದ “ಬಿ’ ಬಣದ ಪಂದ್ಯದಲ್ಲಿ ರುವಾಂಡ ತಂಡವು ಜಿಂಬಾಬ್ವೆ ತಂಡವನ್ನು 39 ರನ್ನುಗಳಿಂದ ಸೋಲಿಸಿ ಈ ಸಾಧನೆ ಮಾಡಿದೆ.ಮೊದಲು ಬ್ಯಾಟಿಂಗ್ ಮಾಡಿದ ರುವಾಂಡ ತಂಡವು ಅಗ್ರ ಆಟಗಾರ್ತಿಯರ ಉತ್ತಮ ಆಟ ದಿಂದಾಗಿ 8 ವಿಕೆಟಿಗೆ 119 ರನ್ ಗಳಿಸಿತ್ತು.
ಇದಕ್ಕುತ್ತವಾಗಿ ಜಿಂಬಾಬ್ವೆ ತಂಡವು 18.4 ಓವರ್‌ಗಳಲ್ಲಿ 80 ರನ್ನಿಗೆ ಆಲೌಟಾಗಿ ಶರಣಾಯಿತು. ರುವಾಂಡ ತಂಡವು ಜಿಂಬಾಬ್ವೆಯ ಕೊನೆಯ ಐದು ವಿಕೆಟ್‌ಗಳನ್ನು ಆರು ಎಸೆತಗಳ ಅಂತರದಲ್ಲಿ ಉರುಳಿಸಿತ್ತು. ಇದರಲ್ಲಿ ಸೀಮರ್ ಹೆನ್ರಿಟ್ ಐಶಿಮ್ವೆ ಸತತ ನಾಲ್ಕು ಎಸೆತಗಳಲ್ಲಿ ವಿಕೆಟ್ ಹಾರಿಸಿದ ಸಾಧನೆಯೂ ಸೇರಿದೆ. ಇದು ಈ ವಿಶ್ವಕಪ್‌ನಲ್ಲಿ ದಾಖಲಾದ ಎರಡನೇ ಹ್ಯಾಟ್ರಿಕ್ ಸಾಧನೆ. ಈ ಮೊದಲು ದಕ್ಷಿಣ ಆಫ್ರಿಕಾದ ಲ್ಯಾಂಡ್ಸ್‌ಮನ್ ಹ್ಯಾಟ್ರಿಕ್ ಸಾಧಿಸಿದ್ದರು.
ನ್ಯೂಜಿಲ್ಯಾಂಡಿಗೆ ಜಯ
ಈ ಮೊದಲು ನಡೆದ “ಸಿ’ ಬಣದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವು ಐರ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ, ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ತಂಡವು 18.1 ಓವರ್‌ಗಳಲ್ಲಿ ಕೇವಲ 74 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ ತಂಡವು ಕೇವಲ 6.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 75 ರನ್ ಗಳಿಸಿ ಜಯ ಸಾಧಿಸಿತು.
Related Articles
ಲ್ಯಾಂಡ್ಸ್‌ಮನ್ ಗೆ ಹ್ಯಾಟ್ರಿಕ್ ವಿಕೆಟ್
ಬೆನೋನಿ: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮ್ಯಾಡಿಸನ್ ಲ್ಯಾಂಡ್ಸ್ ಮನ್ ಅವರು “ಡಿ’ ಬಣದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದರು. ಇದು ಅಂಡರ್ 19 ವನಿತಾ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಆಗಿದೆ.
ಲ್ಯಾಂಡ್ಸ್‌ಮನ್ ತನ್ನ ಮೂರನೇ ಓವರಿನಲ್ಲಿ ಅನುಕ್ರಮವಾಗಿ ಮರ್ಯಮ್ ಫೈಸಲ್, ನಿಯಮ್ ಮತ್ತು ಒರ್ಲಾ ಮೊಂಟಗೊಮೆರಿ ಅವರ ವಿಕೆಟನ್ನು ಕಿತ್ತು ಹ್ಯಾಟ್ರಿಕ್ ಸಾಧಿಸಿದರು. ಲ್ಯಾಂಡ್ಸ್‌ಮನ್ ಈ ಪಂದ್ಯದಲ್ಲಿ 16 ರನ್ನಿಗೆ 4 ವಿಕೆಟ್ ಕಿತ್ತರು. ಇದರಿಂದಾಗಿ ಸ್ಕಾಟ್ಲೆಂಡ್ 68 ರನ್ನಿಗೆ ಆಲೌಟಾಗಿ 44 ರನ್ನಿನಿಂದ ಸೋತಿತ್ತು. ಈ ಮೊದಲು ದಕ್ಷಿಣ ಆಫ್ರಿಕಾ 7 ವಿಕೆಟಿಗೆ 112 ರನ್ ಗಳಿಸಿತ್ತು.
ಇಂದು ಭಾರತಕ್ಕೆ ಸ್ಕಾಟ್ಲೆಂಡ್ ಎದುರಾಳಿ
ಬೆನೋನಿ: ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸುವ ಶಫಾಲಿ ವರ್ಮ ನಾಯಕತ್ವದ ಭಾರತೀಯ ವನಿತಾ ತಂಡವು ಬುಧವಾರ ನಡೆಯುವ “ಡಿ’ ಬಣದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.
ಆರಂಭಿಕ ಆಟಗಾರ್ತಿಯರಾದ ಶ್ವೇತಾ ಸೆಹ್ರಾವತ್ ಮತ್ತು ಶಫಾಲಿ ವರ್ಮ ಅವರ ಅಮೋಘ ಆಟದಿಂದಾಗಿ ಭಾರತ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸಿದೆ.
ಸ್ಕಾಟ್ಲೆಂಡ್ ವಿರುದ್ಧವೂ ಶ್ವೇತಾ ಮತ್ತು ಶಫಾಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಇದೇ ವೇಳೆ ಸ್ಕಾಟ್ಲೆಂಡ್ ಈ ಮೊದಲು ಆಡಿದ ಎರಡು ಪಂದ್ಯಗಳಲಿ ಸೋತಿದೆ.
ದಿನದ ಇನ್ನೊಂದು “ಡಿ’ ಬಣದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಯುಎಇ ತಂಡವನ್ನು ಎದುರಿಸಲಿದೆ.