Advertisement

Flower ಇಬ್ಬನಿ ತಬ್ಬಿದರೆ “ಹೆಮ್ಮಾಡಿ ಸೇವಂತಿಗೆ’ಗೆ ವರದಾನ

12:15 AM Nov 29, 2023 | Team Udayavani |

ಕುಂದಾಪುರ: ಭೌಗೋಳಿಕತೆ, ಹವಾಮಾನ ಹಾಗೂ ತಳಿ ಪ್ರಭೇದದ ಮೂಲಕ ಉಡುಪಿ ಜಿಲ್ಲೆಯಲ್ಲಿಯೇ ವಿಶಿಷ್ಟ ಪುಷ್ಪವಾಗಿ ಗುರುತಿಸಿಕೊಂಡಿರುವ ಹೆಮ್ಮಾಡಿ ಸೇವಂತಿಗೆಗೆ ಈ ಬಾರಿ ಚಳಿ ಹಾಗೂ ಮಂಜಿನ ವಾತಾವರಣ ಇಲ್ಲದಿರುವುದು ಸಮಸ್ಯೆಯಾಗುತ್ತಿದೆ.

Advertisement

ಈಗ ಮೊಗ್ಗು ಅರಳುವ ಸಮಯವಾಗಿದ್ದು, ಈ ವೇಳೆ ಇಬ್ಬನಿ ಇದ್ದರೆ ಅದಕ್ಕೆ ಪೂರಕವಾಗುತ್ತದೆ. ಆದರೆ ಮೋಡ ಕವಿದ ವಾತಾವರಣವೇ ಹೆಚ್ಚು ಇರುವುದು ಸ್ವಲ್ಪ ಮಟ್ಟಿಗೆ ತೊಡಕಾಗಿದೆ.

ಹೆಮ್ಮಾಡಿ ಭಾಗದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ಹೂವು ಸೇವಂತಿಗೆ. ಬ್ರಹ್ಮಲಿಂಗೇಶ್ವರನಿಗೆ ಪ್ರಿಯ. ಮಕರ ಸಂಕ್ರಮಣದ ಮಾರಣಕಟ್ಟೆ ಜಾತ್ರೆಗೆ ಸಮರ್ಪಿಸಲಾದ ಬಳಿಕ ಕುಂದಾಪುರ, ಬೈಂದೂರು ಭಾಗದ ಬಹುತೇಕ ಎಲ್ಲ ಜಾತ್ರೆ, ಹಬ್ಬ, ಕೆಂಡೋತ್ಸವಗಳಿಗೂ ಬೇಡಿಕೆ ಇರುತ್ತದೆ.

ಈ ಬಾರಿ ಚಳಿಗಾಲದಲ್ಲಿಯೂ ವಿಪರೀತ ಸೆಕೆ ಇರುವುದರಿಂದ ಸೇವಂತಿಗೆ ಗಿಡದ ಹಾಗೂ ಹೂವಿನ ಬೆಳವಣಿಗೆಗೆ ಹೊಡೆತ ಬಿದ್ದಿದೆ. ಮೋಡದಿಂದಾಗಿ ಎಲೆ ಕರಟುವ ಸಾಧ್ಯತೆಯೂ ಇರುತ್ತದೆ. ರೋಗ ಬಾಧೆಯೂ ಇರುತ್ತದೆ. ಹೂವು ಅರಳುವುದು ವಿಳಂಬ ಆಗಬಹುದು. ಈ ಬಾರಿ ಮಾರಣಕಟ್ಟೆ ಕೆಂಡೋತ್ಸವ ವೇಳೆಗೆ ಹೂವು ಸಿಗದಿದ್ದರೆ ಲಾಭ ಸಿಗುವುದು ಕಷ್ಟ ಎನ್ನುತ್ತಾರೆ ಕೃಷಿಕರು.

ವರ್ಷದಿಂದ ವರ್ಷಕ್ಕೆ ಕುಸಿತ
ಹೆಮ್ಮಾಡಿ ಸುತ್ತಮುತ್ತಲಿನ ಕಟ್ಟು, ಜಾಲಾಡಿ, ಹರೇಗೋಡು, ಕೆಂಚನೂರು ಸಹಿತ ಇನ್ನಿತರ ಪ್ರದೇಶಗಳ ಸುಮಾರು 50 – 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸೇವಂತಿಗೆ ಬೆಳೆಯುತ್ತಾರೆ. ಇಲ್ಲಿನ ರೈತರು ಮುಂಗಾರಿನಲ್ಲಿ ಭತ್ತದ ಕೃಷಿಯನ್ನು ಅವಲಂಬಿಸಿದ್ದರೆ ಹಿಂಗಾರಿನಲ್ಲಿ ಸೇವಂತಿಗೆಯನ್ನೇ ನಂಬಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರೋಗ ಬಾಧೆ, ಔಷಧ ದುಬಾರಿ, ಹೂವು ಕೊçಲಿನ ವೇಳೆ ಕಾರ್ಮಿಕರ ಕೊರತೆ, ಜನವರಿಯ ಅನಂತರ ಉಪ್ಪು ನೀರಿನ ಸಮಸ್ಯೆಯಿಂದಾಗಿ ವರ್ಷದಿಂದ ವರ್ಷಕ್ಕೆ ಸೇವಂತಿಗೆ ಬೆಳೆಯುವವರ ಸಂಖ್ಯೆ ಕುಸಿಯುತ್ತಿದೆ.

Advertisement

ಈ ಬಾರಿ ಮಳೆಯಿಂದ ಯಾವುದೇ ಸಮಸ್ಯೆ ಆಗಿಲ್ಲ. ಆರಂಭದಲ್ಲಿ ಉತ್ತಮ ವಾತಾವರಣವಿತ್ತು. ಈಗ ಮೊಗ್ಗು ಬಿಡುವ ವೇಳೆ ಚಳಿ, ಇಬ್ಬನಿ ಬೇಕು. ಆದರೆ ಸೆಖೆ ಜಾಸ್ತಿ ಇರುವುದರಿಂದ ಸಮಸ್ಯೆಯಾಗಬಹುದು. ಗಿಡಗಳಿಗೆ ರೋಗ ಕಾಣಿಸುವ ಸಾಧ್ಯತೆಯೂ ಇದೆ.
– ರಾಜೇಶ್‌ ದೇವಾಡಿಗ ಕಟ್ಟು,
ಹೆಮ್ಮಾಡಿ ಸೇವಂತಿಗೆ ಬೆಳೆಗಾರರು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next