Advertisement

ಹೆಮ್ಮಾಡಿ-ಕೊಲ್ಲೂರು ನಡುವಿನ ಅಪಘಾತ ಸೂಕ್ಷ್ಮ ಪ್ರದೇಶಗಳಿಗೆ ಮುಕ್ತಿ

01:00 AM Mar 20, 2019 | Team Udayavani |

ಕೊಲ್ಲೂರು: ಹೆಮ್ಮಾಡಿ-ಕೊಲ್ಲೂರು ನಡುವೆ ಪ್ರತಿದಿನ ಎಂಬಂತೆ ನಡೆಯುತ್ತಿದ್ದ ವಾಹನಗಳ ಅಪಘಾತ, ಸರಣಿ ಅವಘಡಗಳಿಗೆ ಶೀಘ್ರ ಮುಕ್ತಿ ಸಿಗಲಿದೆ.  

Advertisement

ನೆಂಪುವಿನಲ್ಲಿ ರಾಜ್ಯ ರಸ್ತೆಯನ್ನು ಸಂಪರ್ಕಿಸುವ ಹೆಮ್ಮಾಡಿ ನೆಂಪು ಜಿಲ್ಲಾ ಮುಖ್ಯರಸ್ತೆಯನ್ನು ಅಪಘಾತ ರಹಿತ ರಸ್ತೆಯಾಗಿಸುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರಮುಖ ಧಾರ್ಮಿಕ ಕೇಂದ್ರ ಕೊಲ್ಲೂರಿಗೆ ಹೋಗುವ ಈ ರಸ್ತೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯದ ನೂರಾರು ವಾಹನಗಳು ಓಡಾಟ ನಡೆಸುತ್ತವೆ. ಅಪರಿಚಿತ ರಸ್ತೆಯಲ್ಲಿ ಚಾಲಕರು ವಾಹನ ಚಲಾಯಿಸುವಾಗ ತಿರುವುಗಳ ಅರಿವಿಲ್ಲದೇ ಅಪಘಾತಗಳು ನಿರಂತರವಾಗಿದ್ದವು. ಈ ಬಗ್ಗೆ ಉದಯವಾಣಿ ಅನೇಕ ಬಾರಿ ವರದಿ ಮಾಡಿತ್ತು.  

ಅಪಘಾತ ವಲಯ ಗುರುತು
ಲೋಕೋಪಯೋಗಿ ಇಲಾಖೆ ಹೆಮ್ಮಾಡಿಯಿಂದ ನೆಂಪು ತಿರುವಿನ ವರೆಗೆ ಅಪಘಾತ ವಲಯಗಳನ್ನು ಗುರುತಿಸಿದೆ. 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾರ್ಯವು ಬಹುತೇಕ ಪೂರ್ಣಗೊಂಡಿದ್ದು ಸುಗಮ ವಾಹನ ಸಂಚಾರಕ್ಕೆ ಅಣಿಯಾಗುತ್ತಿದೆ.

ಏನೇನು ಕಾಮಗಾರಿ?
ತಿರುವುಗಳಲ್ಲಿ ರಸ್ತೆ ಅಗಲೀಕರಣ, ರಸ್ತೆಯಲ್ಲಿ ಮಣ್ಣು ಹಾಕಿ ಜೆಲ್ಲಿಯೊಡನೆ ಡಾಮರೀಕರಣ ಮಾಡಲಾಗುತ್ತಿದೆ. ನೇರ ಮಾರ್ಗ ರಚನೆಗೆ ಖಾಸಗಿ ಸ್ವಾಯತ್ತ ಜಾಗವನ್ನು ಬಳಸಲಾಗುತ್ತಿದೆ. ರಸ್ತೆಯ ಬದಿಯಲ್ಲಿರುವ ಬೃಹತ್‌ ಮರಗಳನ್ನು ಅರಣ್ಯ ಇಲಾಖೆಯ ಅನುಮತಿಯೊಡನೆ ಕಡಿದು ಹಾಕಲಾಗಿದೆ. ಪ್ರಮುಖ ಪ್ರದೇಶಗಳಲ್ಲಿ ಹೈ ಮಾಸ್ಕ್ ದೀಪವನ್ನು ಅಳವಡಿಸುವುದರೊಡನೆ ಅಗತ್ಯವಿರುವಲ್ಲಿ ವಿದ್ಯುತ್‌ ಕಂಬಗಳ ಜೋಡಣೆಗೆ ವ್ಯವಸ್ಥೆಗೊಳಿಸಲಾಗುತ್ತಿದೆ.

ವಂಡ್ಸೆಯ ನೆಂಪು ತಿರುವಲ್ಲದೇ ಹಾಲ್ಕಲ್‌ ಜಂಕ್ಷನ್‌ ಬಳಿ ರಸ್ತೆ ಅಗಲೀಕರಣಗೊಳಿಸಲಾಗಿದೆ. ಶಂಕರ ನಾರಾಯಣ ಹಾಲಾಡಿ, ಬಿದ್ಕಲ್‌ಕಟ್ಟೆ ಜಂಕ್ಷನ್‌, ಗೋಳಿಯಂಗಡಿ ಜಂಕ್ಷನ್‌ ಸಹಿತ ಕುಂದಾಪುರ ತಾಲೂಕಿನ 8 ಅಪಘಾತ ವಲಯಗಳನ್ನು ಗುರುತಿ ಸಲಾಗಿದೆ.

Advertisement

165 ಅಪಘಾತ ವಲಯಗಳ ಗುರುತು
ಕುಂದಾಪುರ ತಾಲೂಕಿನ 8 ವಲಯ ಸಹಿತ ಉಡುಪಿ ತಾಲೂಕಿನ 5 ವಲಯ ಅಲ್ಲದೇ ಕಾರ್ಕಳದ 3 ವಲಯಗಳನ್ನು ಗುರುತಿಸಲಾಗಿದ್ದು 20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಲೆವೂರು ರಾಮಾಪುರ ರಸ್ತೆ, ಕಲ್ಯಾಣಪುರ-ಕುಕ್ಕೆಹಳ್ಳಿ-ಪೆರ್ಡೂರು ರಸ್ತೆ, ಸೀತಾನದಿ ಬ್ರಹ್ಮಾವರ ನಡುವಿನ ರಸ್ತೆ ಯಲ್ಲದೇ, ಶಿರೂರು-ಕೊಕ್ಕರ್ಣೆ-ಸಂತೆಕಟ್ಟೆ ತಿರುವು, ಸುಬ್ರಹ್ಮಣ್ಯ-ಉಡುಪಿ ತಿರುವು, ಪಡುಬಿದ್ರಿ-ಚಿಕ್ಕಲ್‌ಗ‌ುಡ್ಡೆ ರಸ್ತೆಯನ್ನು ಆಯ್ಕೆ ಮಾಡಲಾಗಿದೆ. ಅಂಪಾರಿನ ತಿರುವು ಸಹಿತ ಸಿದ್ಧಾಪುರ ತಿರುವಲ್ಲದೇ ಬ್ರಹ್ಮಾವರ- ಜನ್ನಾಡಿ ರಸ್ತೆಯ ಗಾವಳಿಯನ್ನು ಈ ಯೋಜನೆಯಡಿ ಗುರುತಿಸಲಾಗಿದೆ.

ಕೋರ್ಟ್‌ಗೆ ಮಾಹಿತಿ
ಪದೇ ಪದೇ ಅಪಘಾತ ನಡೆಯುತ್ತಿರುವ ಪ್ರದೇಶವನ್ನು ಪೊಲೀಸ್‌ ಇಲಾಖೆ ಗುರುತಿಸಿ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತಂದಲ್ಲಿ ಅವುಗಳನ್ನು ಅಪಘಾತ ವಲಯಗಳಾಗಿ ಪರಿಗಣಿಸಿ ಅಗಲೀಕರಣಗೊಳಿಸಲಾಗುವುದು. ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಬಗ್ಗೆ ಪ್ರತಿ ತಿಂಗಳು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತಿದ್ದು, ಕೋರ್ಟ್‌ಗೆ ಮಾಹಿತಿ ನೀಡಲಾಗುತ್ತಿದೆ.  
-ಚಂದ್ರಶೇಖರ್‌,  ಮುಖ್ಯ ಇಂಜಿನಿಯರ್‌ ಲೋಕೋಪಯೋಗಿ ಇಲಾಖೆ, ಉಡುಪಿ

ಭಕ್ತರ ಪಾಲಿಗೆ ವರದಾನ
ಭಾರೀ ತಿರುವಿನ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಗಲೀಕರಣ ಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಹೆಮ್ಮಾಡಿಯಿಂದ ಕೊಲ್ಲೂರು ಕ್ಷೇತ್ರಕ್ಕೆ ಸಾಗುವ ಭಕ್ತರ ಪಾಲಿಗೆ ವರದಾನವಾಗಿದೆ.
-ದಿವಾಕರ್‌ ವಂಡ್ಸೆ, ನಿತ್ಯ ಪ್ರಯಾಣಿಕ

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next