Advertisement

ಹೆಮ್ಮಾಡಿ: ಗ್ರಾಮ ಕರಣಿಕರಿಗೇ ಸೂಕ್ತ ನೆಲೆಯಿಲ್ಲ

02:35 AM Apr 10, 2021 | Team Udayavani |

ಹೆಮ್ಮಾಡಿ: ಜಾಗದ ಸರ್ವೇ, ಮನೆ ತೆರಿಗೆ, ಇನ್ನಿತರ ತೆರಿಗೆ ವಸೂಲಿ, ನಿವೇಶನ ಗುರುತಿಸುವಿಕೆಯಂತಹ ಮಹತ್ತರ ಹೊಣೆಗಾರಿಕೆಯನ್ನು ನಿರ್ವಹಿಸುವ ಗ್ರಾಮ ಕರಣಿಕರಿಗೆ ಹೆಮ್ಮಾಡಿ ಗ್ರಾಮದಲ್ಲಿ ಸೂಕ್ತ ನೆಲೆಯಿಲ್ಲದ ಪರಿಸ್ಥಿತಿ. ಹೆಮ್ಮಾಡಿಯ ಗ್ರಾಮ ಕರಣಿಕರ ಕಚೇರಿ ಕಳೆದ 3 ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ, ಶಾಲೆಯ ಕೋಣೆಯೊಂದರಲ್ಲಿ ಕಾರ್ಯಾಚರಿಸುವಂತಾಗಿದೆ.

Advertisement

ಕಂದಾಯ ಇಲಾಖೆಯ ಅಧೀನದಲ್ಲಿ ಬರುವ ಹೆಮ್ಮಾಡಿಯ ಗ್ರಾಮಕರಣಿಕರ ಕಚೇರಿಯು ಹೆಮ್ಮಾಡಿಯ ಸರಕಾರಿ ಹಿರಿಯ ಪ್ರಾಥಮಿ ಕ ಶಾಲೆಯ ಅಕ್ಷರ ದಾಸೋಹದ ಕೊಠಡಿಯಲ್ಲಿ ಕಳೆದ ವರ್ಷಗಳಿಂದ ಕಾರ್ಯ ನಿರ್ವಹಣೆ ಮಾಡುತ್ತಿದೆ.

ಜನರಿಗೆ ಸಮಸ್ಯೆ
ಪಂಚಾಯತ್‌ ಕಟ್ಟಡದಲ್ಲೇ ಗ್ರಾಮಕರಣಿಕರ ಕಚೇರಿಯಿದ್ದರೆ ಅಲ್ಲಿಗೆ ಕೆಲಸ- ಕಾರ್ಯಕ್ಕೆ ಬರುವ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದರೆ ಮಳೆಗಾದಲ್ಲಿ ಈಗಿರುವ ಗ್ರಾಮ ಕರಣಿಕರ ಕಚೇರಿ ಎದುರಿನ ಮೈದಾನದಲ್ಲಿ ನೀರು ನಿಂತು ಇಲ್ಲಿಗೆ ಬರುವ ವೃದ್ಧರು, ಮಹಿಳೆಯರು, ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎನ್ನುವುದಾಗಿ ಇಲ್ಲಿನ ಗ್ರಾಮಸ್ಥರು ದೂರಿದ್ದಾರೆ.

ವಿದ್ಯುತ್‌ ಸೌಲಭ್ಯವಿಲ್ಲ
ಶಾಲೆಯ ಕಟ್ಟಡದಲ್ಲೇ ಗ್ರಾಮ ಕರಣಿಕರ ಕಚೇರಿ ಇರುವುದರಿಂದ, ಶಾಲೆಯವರು ವಿದ್ಯುತ್‌ ಬಿಲ್‌ ವಿಚಾರವಾಗಿ ಈ ಕಚೇರಿಗೆ ಕಲ್ಪಿಸಿರುವ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಆದರೆ ಈಗ ಪರ್ಯಾಯ ವಿದ್ಯುತ್‌ ಸೌಕರ್ಯ ಕಲ್ಪಿಸಲು ಸಹ ಸಾಧ್ಯವಿಲ್ಲದಂತಾಗಿದೆ.

ಸ್ಥಳಾಂತರಕ್ಕೆ ಮನವಿ
ಹೆಮ್ಮಾಡಿ ಶಾಲೆಯ ಅಕ್ಷರ ದಾಸೋಹದ ಕೊಠಡಿಯಲ್ಲಿ ಈ ಕಚೇರಿಯಿರುವುದರಿಂದ ಶಾಲೆಯ ಕಾರ್ಯ ಚಟುವಟಿಕೆಗಳಿಗೆ ತೊಡಕಾಗು ತ್ತಿದ್ದು, ಈ ಕಾರಣದಿಂದ ಇಲ್ಲಿಂದ ಗ್ರಾಮ ಕರಣಿಕರ ಕಚೇರಿಯನ್ನು ಸ್ಥಳಾಂತರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಹಳೆ ಕಟ್ಟಡ ತೆರವು
ಹಿಂದೆ ಇಲ್ಲಿನ ಗ್ರಾಮ ಕರಣಿಕರ ಕಚೇರಿಯು ಹೆಮ್ಮಾಡಿ ಗ್ರಾ.ಪಂ. ಕಚೇರಿಯ ಪಕ್ಕದಲ್ಲೇ ಇದ್ದ, ಸುಮಾರು 50 ವರ್ಷಗಳಿಗೂ ಹಳೆಯದಾದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಆದರೆ ಆ ಕಟ್ಟಡ ಶಿಥಿಲಗೊಂಡ ಕಾರಣ 3 ವರ್ಷಗಳ ಹಿಂದೆ ಕೆಡವಲಾಗಿದ್ದು, ಅಲ್ಲಿಂದ ಈವರೆಗೆ ಈ ಶಾಲೆಯ ಅಕ್ಷರ ದಾಸೋಹ ಕೊಠಡಿಯಲ್ಲೇ ಗ್ರಾಮ ಕರಣಿಕರ ಕಚೇರಿಯಿದೆ. ಹಳೆಯ ಕಟ್ಟಡ ತೆರವಾದ ಕೂಡಲೇ ಪಂಚಾಯತ್‌ನವರು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಿತ್ತು. ಆದರೆ ಆಗ ತಾತ್ಕಾಲಿಕವಾಗಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಈ ವರೆಗೂ ಗ್ರಾಮ ಕರಣಿಕರ ಕಚೇರಿ ಅಲ್ಲೇ ಶಾಶ್ವತವಾಗಿ ಉಳಿದುಕೊಳ್ಳುವಂತಾಗಿದೆ.

ಮನವಿ ಸಲ್ಲಿಸಲಾಗಿದೆ
ನಾವು ಹೆಮ್ಮಾಡಿ ಗ್ರಾ.ಪಂ.ಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತುಂಬಾ ಹಿಂದೆಯೇ ಅನೇಕ ಬಾರಿ ಸ್ವಂತ ಕಟ್ಟಡಕ್ಕಾಗಿ ಮನವಿ ಸಲ್ಲಿಸಿದ್ದೇ ವೆ. ಈ ಬಗ್ಗೆ ಗ್ರಾಮಸಭೆಯಲ್ಲಿಯೂ ಚರ್ಚೆಯಾಗಿ, ನಿರ್ಣಯ ಸಹ ಮಾಡಲಾಗಿದೆ.
– ಹರೀಶ್‌, ಗ್ರಾಮ ಕರಣಿಕರು ಹೆಮ್ಮಾಡಿ

ಡಿಸಿಗೆ ಪ್ರಸ್ತಾವನೆ ಸಲ್ಲಿಕೆ
ಹೆಮ್ಮಾಡಿಯಲ್ಲಿ ಗ್ರಾಮ ಕರಣಿಕರಿಗೆ ಸ್ವಂತ ಕಟ್ಟಡವಿಲ್ಲದ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸರಕಾರಿ ಜಾಗವನ್ನು ಗುರುತಿಸಿ, ಆದಷ್ಟು ಬೇಗ ಅನುದಾನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಆನಂದಪ್ಪ ನಾಯ್ಕ, ಕುಂದಾಪುರ ತಹಶೀಲ್ದಾರ್

Advertisement

Udayavani is now on Telegram. Click here to join our channel and stay updated with the latest news.

Next