Advertisement
ಚಳಿ ಕಡಿಮೆ, ಮೋಡ, ನುಸಿ, ರೋಗ ಬಾಧೆಯಿಂದಾಗಿ ಮಕರ ಸಂಕ್ರಮಣದಂದು ನಡೆಯುವ ಮಾರಣಕಟ್ಟೆ ಜಾತ್ರೆಗೆ ನಿರೀಕ್ಷೆಯಷ್ಟು ಹೂವು ಅರಳಿಲ್ಲ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಸೇವಂತಿಗೆ ಹೂವಿನ ಬೆಲೆಯೇರಿಕೆಯಾಗಿದೆ. ಮಾರಣಕಟ್ಟೆಯಲ್ಲಿ ವ್ಯಾಪಾರಿಗಳು 1 ಸಾವಿರ ಹೂವಿಗೆ 700 ರೂ. ಯಂತೆ ಮಾರಾಟ ಮಾಡುತ್ತಿದ್ದುದ್ದಲ್ಲದೆ, ಕೆಲವು ಕಡೆಗಳಲ್ಲಿ ಬೇರೆ ಬೇರೆ ರೀತಿಯ ದರವನ್ನು ನಿಗದಿಪಡಿಸಿ, ಮಾರುತ್ತಿರುವುದು ಕಂಡು ಬಂತು.
ಈ ಬಾರಿ ಸೇವಂತಿಗೆ ಹೂವು ಬೆಳೆದಿರುವುದೇ ಕಡಿಮೆ ಆಗಿದ್ದರಿಂದ ಬೆಳೆಗಾರರಿಗೂ ಬಂಪರ್ ಬೆಲೆ ಸಿಕ್ಕಿದೆ. 1 ಸಾವಿರ ಸೇವಂತಿಗೆ ಹೂವಿಗೆ ವ್ಯಾಪಾರಿಗಳು 400 ರಿಂದ ಒಳ್ಳೆಯ ಹೂವಿಗೆ 450 ರೂ. ವರೆಗೂ ಕೊಟ್ಟು ಖರೀದಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ
ಹೆಚ್ಚು ಹೂವು ಅರಳುವ ಸಾಧ್ಯತೆ ಇದ್ದುದರಿಂದ ಈ ಮಟ್ಟಿಗೆ ಬೆಲೆ ಇರುವುದು ಕಷ್ಟ. ಕಡಿಮೆಯಾಗುವ ಸಾಧ್ಯತೆಗಳು ಸಹ ಇದೆ. ಕಳೆದ ಬಾರಿ 300 ರಿಂದ 350 ರೂ. ವರೆಗೆ ಬೆಳೆಗಾರರಿಗೆ ಸಿಕ್ಕಿತ್ತು. ಆದರೆ ಹಿಂದಿನ ವರ್ಷಗಳಲ್ಲಿ 3 ರಿಂದ 4 ಲಕ್ಷದಷ್ಟು ಹೂವು
ಕೊಡುತ್ತಿದ್ದವರು ಈ ಬಾರಿ 50 ಸಾವಿರದಿಂದ 1 ಲಕ್ಷದವರೆಗೆ ಅಷ್ಟೇ ಹೂವು ಕೊಟ್ಟಿರುವುದಾಗಿ ಸೇವಂತಿಗೆ ಬೆಳೆಗಾರ ರಾಜೇಶ ದೇವಾಡಿಗ ಹೇಳಿಕೊಳ್ಳುತ್ತಾರೆ.