ತುಮಕೂರು: ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಬಿಡಲು ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರ ನಮ್ಮ ಪಾಲಿನ ನೀರನ್ನು ರಾಮನಗರ ಮತ್ತು ಚನ್ನಪಟ್ಟಣಕ್ಕೆ ಹರಿಸಲು ಯತ್ನಿಸುತ್ತಿರುವುದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ನಗರದ ರಾಷ್ಟ್ರೀಯ ಹೆದ್ದಾರಿ 48ರ ಬಟವಾಡಿ ಬಳಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ಚಳವಳಿ ನಡೆಸಿದರು. ಜಿಲ್ಲೆಗೆ ನಿಗದಿಯಾಗಿರುವ ನೀರಿನ್ನು ಗುಬ್ಬಿ ತಾಲೂಕು, ಕಡಬ ಬಳಿಯಿಂದ ಪೈಪ್‌ಲೈನ್ ಮೂಲಕ ಚನ್ನಪಟ್ಟಣ ಹಾಗೂ ರಾಮನಗರಕ್ಕೆ ತೆಗೆದುಕೊಂಡು ಹೋಗುವ ಯೋಜನೆ ಮಾಡಲು ಹೊರಟು, ಸರ್ಕಾರ ಸಿದ್ಧಪಡಿಸಿ ಸಂಪುಟ ಸಭೆಯಲ್ಲಿ ಅನುಮೋದನೆಗೆ ಇಡುವ ಮಾಹಿತಿ ಇದ್ದು, ತಕ್ಷಣ ಈ ಆ ಯೋಜನೆ ಕೈ ಬಿಡಬೇಕು ಆಗ್ರಹಿಸಿದರು.
ಮರಣ ಶಾಸನ: ಈ ಪ್ರತಿಭಟನೆ ಉದ್ದೇಶಿಸಿ ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಜಿಲ್ಲೆಯ ನೀರಾವರಿಗೆ ಮರಣ ಶಾಸನ ಬರೆಯುವುದಕ್ಕೆ ಸಮ್ಮಿಶ್ರ ಸರ್ಕಾರ ಹೊರಟಿದ್ದು, ಹಾಸನದ ಗೋರೂರು ಡ್ಯಾಂನಿಂದ ತುಮಕೂರಿಗೆ ಬರಬೇಕಾದ ಹೇಮಾವತಿಯ 25 ಟಿಎಂಸಿ ನೀರನ್ನು ನ್ಯಾಯೋಚಿತವಾಗಿ ನೀಡದೆ, ಬರುವಂಥ ನೀರನ್ನು ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ನ ಮೂಲಕ ಕುಣಿಗಲ್ ಮಾರ್ಗವಾಗಿ ರಾಮನಗರ, ಚನ್ನಪಟ್ಟಣಕ್ಕೆ ಹೆಚ್ಚುವರಿಯಾಗಿ ತೆಗೆದುಕೊಂಡು ಹೋಗಲು ದೊಡ್ಡ ಹುನ್ನಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಡಾ.ರಂಗನಾಥ ಮಾಡುತ್ತಿದ್ದು, ಇವರು ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲತಾಯಿ ಧೋರಣೆ: ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿ, ಹಲವು ದಶಕಗಳಿಂದ ಹಾಸನ ರಾಜಕಾರಣದ ಕುತಂತ್ರದಿಂದ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದು, ಈಗಲೂ ಸಮ್ಮಿಶ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹರಿಹಾಯ್ದರು. ಪ್ರತಿಭಟನೆ ವೇಳೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ತಡೆದಿದ್ದರಿಂದ ಸಂಚಾರಕ್ಕೆ ತೊಂದರೆ ಆಗಿತ್ತು. ರಸ್ತೆ ತಡೆ ನಿಲ್ಲಿಸುವಂತೆ ಪೊಲೀಸರು ಕೇಳಿದರೂ ಪ್ರತಿಭಟನಾಕಾರರು ರಸ್ತೆ ತಡೆ ಮುಂದುವರಿಸಿದರು. ಈ ವೇಳೆಗೆ ಹೋರಾಟಗಾರರು ಮತ್ತು ಪೋಲೀಸರ ಮಧ್ಯೆ ಮಾತಿನ ಚಕಮಕಿ ನಡೆದು, ರಸ್ತೆ ತಡೆಯಲು ಹೋದ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ಟಿ.ಎಚ್.ಹನುಮಂತರಾಜು, ಜಿಪಂ ಸದಸ್ಯ ಹುಚ್ಚಯ್ಯ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ರುದ್ರೇಶ್, ಸುರೇಶ್, ಶರತ್, ರಾಕೇಶ್, ರಮೇಶ್ ಮಗದೂರು, ವಿನಯ್ ಹಿರೇಹಳ್ಳಿ, ರಕ್ಷಿತ್, ತರಕಾರಿ ಮಹೇಶ್, ಬಂಬೂ ಮೋಹನ್, ಪುರುಷೋತ್ತಮ, ಪಾಲಿಕೆ ಸದಸ್ಯರಾದ ರಮೇಶ್, ಮಂಜುಳಾ, ದೀಪಾ, ಬಿ.ಜಿ.ಕೃಷ್ಣಪ್ಪ, ನವೀನ ಅರುಣ ಮುಂತಾದವರು ಇದ್ದರು.