Advertisement

ಹೇಮೆ ಬಲ ಮೇಲ್ದಂಡೆ ನಾಲೆಗೆ ನೀರು ಬಿಡಲು ಆಗ್ರಹ

09:14 PM Aug 02, 2019 | Lakshmi GovindaRaj |

ಅರಕಲಗೂಡು: ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸಿ ಪ್ರಾಣಿ ಪಕ್ಷಿಗಳ ಜೀವ ರಕ್ಷಿಸುವಂತೆ ಒತ್ತಾಯಿಸಿ ಶಾಸಕ ಎ.ಟಿ.ರಾಮಸ್ವಾಮಿ ತಮ್ಮ ಕಾರ್ಯಕರ್ತರೊಂದಿಗೆ ಹೇಮಾವತಿ ಮುಖ್ಯ ಎಂಜಿನಿಯರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಗೊರೂರು ಹೇಮಾವತಿ ಮುಖ್ಯ ಎಂಜಿನಿಯರ್‌ ಕಚೇರಿ ಮುಂದೆ ನೂರಾರು ಕಾರ್ಯಕರ್ತರೊಂದಿಗೆ ಹೇಮಾವತಿ ಬಲ ಮೇಲ್ದಂಡೆ ನಾಲೆಗಳಿಗೆ ನೀರು ಬಿಡುವ ಮೂಲಕ ಆ ವ್ಯಾಪ್ತಿಯ ಕೆರೆಕಟ್ಟೆಗಳನ್ನು ತುಂಬಿಸಿ ಜಾನುವಾರುಗಳ ಜೀವ ಉಳಿಸುವಂತೆ ಒತ್ತಾಯಸಿದರು.

Advertisement

ನಂತರ ಮುಖ್ಯ ಎಂಜಿನಿಯರ್‌ ಅವರೊಂದಿಗೆ ಚರ್ಚಿಸಿದ ಶಾಸಕ ಎ.ಟಿ.ರಾಮಸ್ವಾಮಿ, ನೀರು ಬಿಡಲು ಅಧಿಕಾರಿಗಳು ಅಸಹಾಯಕರು ಎಂದು ತಿಳಿದಾಗ, ಕಚೇರಿಯಿಂದ ಹೊರಬಂದು ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಅಣೆಕಟ್ಟೆಯಿಂದ ನದಿಗೆ ಬಿಟ್ಟಿರುವ ನೀರನ್ನು ನಾವೇ ನಿಲ್ಲಿಸಿ ನಾಲೆಗಳ ಬಾಗಿಲನ್ನು ತೆರೆಯುವ ಮೂಲಕ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಮುಂದಾಗೋಣ. ಎಲ್ಲರೂ ನದಿಯ ತೀರಕ್ಕೆ ತೆರಳ್ಳೋಣ ಎಂದು ತಿಳಿಸಿ ಕಾರ್ಯಕರ್ತರೊಂದಿಗೆ ಪ್ರತಿಭಟನೆಯ ಮೂಲಕವೇ ತೆರಳಿದರು.

ಬಂಧನ: ಶಾಸಕರ ನಿಲುವನ್ನು ತಿಳಿದ ಪೊಲೀಸರು ಮುಂಜಾಗ್ರತೆಯಾಗಿ ನದಿಗೆ ಪ್ರವೇಶಿಸುವ ಬಾಗಿಲನ್ನು ಮುಚ್ಚಿ ಪೊಲೀಸ್‌ ಭದ್ರತೆ ಕಲ್ಪಿಸಿದರು. ಸ್ಥಳಕ್ಕೆ ಬಂದ ಪ್ರತಿಭಟನಾಕಾರರು, ದ್ವಾರದ ಮುಖ್ಯ ಬಾಗಿಲ ಬೀಗ ಮುರಿದು ಒಳನುಗ್ಗಲು ಪ್ರಯತ್ನಿಸಿದಾಗ, ಪ್ರತಿಭಟನಾಕಾರನ್ನು ಪೊಲೀಸರು ತಡೆದರು. ಪೊಲೀಸರ ವರ್ತನೆಯಿಂದ ಕೋಪಿತಗೊಂಡ ಶಾಸಕರು, ಪ್ರತಿಭಟನೆಗೆ ಮುಂದಾದರು. ಆಗ ಪೊಲೀಸರು ಶಾಸಕ ಎ.ಟಿ.ರಾಮಸ್ವಾಮಿ ಮತ್ತು ಕಾರ್ಯಕರ್ತರನ್ನು ಬಂಧಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸಂಕಷ್ಟ ತಪ್ಪಿಸಿ ರೈತರನ್ನು ಉಳಿಸಿ: ಹಾಸನ ಜಿಲ್ಲೆಯಲ್ಲಿ ವಾಡಿಕೆ ಮಳೆ 187 ಮಿ.ಮೀ. ಆಗಬೇಕಾಗಿತ್ತು. ಆದರೆ ಈ ಭಾರಿ ಕೇವಲ 67 ಮಿ.ಮೀ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆರೆಕಟ್ಟೆಗಳಲ್ಲಿ ನೀರು ಇಲ್ಲದೇ ಒಣಗಿವೆ. ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದೇ ಪರಿತಪಿಸುವ ಪರಿಸ್ಥಿತಿ ಈಗಲೇ ತಲೆದೋರಿದೆ. ಮುಂದೆ ಹೇಗೆ ಎಂಬ ಆತಂಕವಾಗುತ್ತಿದೆ. ಇದನ್ನು ಮನಗಂಡು ರಾಜ್ಯ ಸರ್ಕಾರ ಕೂಡಲೇ ನಮ್ಮ ನದಿಯ ನೀರನ್ನು ನಮಗೆ ನೀಡಿದ ನಂತರ ಬೇರೆಯವರಿಗೆ ಹರಿಸಲಿ ಎಂದು ಎಚ್ಚರಿಕೆ ನೀಡಿದರು.

ಒಳಹರಿವಿಗಿಂತ ಹೊರಹರಿವೇ ಹೆಚ್ಚು: ಹೇಮಾವತಿ ನದಿಯ ತಪ್ಪಲಿನಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕುಸಿದಿರುವ ಪರಿಣಾಮ ನದಿಗೆ 4000 ಕ್ಯೂಸೆಕ್‌ ಒಳಹರಿವು ಇದ್ದರೆ, ನದಿಯಿಂದ ಕೆಆರ್‌ಎಸ್‌ಗೆ 5000 ಕ್ಯೂಸೆಕ್‌ ನೀರನ್ನು 5 ದಿನಗಳಿಂದ ಬಿಡಲಾಗುತ್ತಿದೆ. ಈಗ ನದಿಯಲ್ಲಿ 15 ಟಿಎಂಸಿ ನೀರು ಇದ್ದು, ಉಪಯೋಗಕ್ಕೆ 11 ಟಿಎಂಸಿ ನೀರು ಮಾತ್ರ ಬಳಕೆಯಾಗಲಿದೆ. ಉಳಿದ 4 ಟಿಎಂಸಿ ಉಪಯೋಗಕ್ಕೆ ಬಾರದೇ ತಟಸ್ಥ ನೀರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

Advertisement

ಮುಖ್ಯಮಂತ್ರಿ ಒನ್‌ ಮ್ಯಾನ್‌ ಆರ್ಮಿ: ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದು ದಿನಗಳೇ ಕಳೆದರೂ ಮುಖ್ಯಮಂತ್ರಿಯನ್ನು ಹೊರತುಪಡಿಸಿ ಉಳಿದ ಯಾವುದೇ ಸಚಿವರ ನೇಮಕಾತಿ ಆಗದೇ ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದಿದೆ. ಎಲ್ಲಾ ಇಲಾಖಾ ಅಧಿಕಾರವನ್ನು ಮುಖ್ಯಮಂತ್ರಿಗಳೇ ನಿರ್ವಹಿಸುವ ಮೂಲಕ ಏಕ ಚಕ್ರಾಧಿಪತಿಯಂತೆ ವರ್ತಿಸುತ್ತಿದ್ದಾರೆ. ಇವರಿಗೆ ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಬಗ್ಗೆ ಚಿಂತೆಯೇ ಇಲ್ಲ ಎಂದು ಕಟುವಾಗಿ ಟೀಕಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್‌ ಮುಖಂಡ ದೊಡ್ಡಮಗ್ಗೆ ರಂಗಸ್ವಾಮಿ, ಜೆಡಿಎಸ್‌ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮುಖಂಡರಾದ ಮುತ್ತಿಗೆ ರಾಜೇಗೌಡ, ಯೋಗೇಶ್‌, ಶಶಿಕುಮಾರ್‌, ರವಿಕುಮಾರ್‌, ನರಸೇಗೌಡ, ಕಿಶೋರ್‌, ಚೌಡೇಗೌಡ, ಎಚ್‌.ಮಾದೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಹೊನ್ನರಸೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಪತ್ರ ಬರೆದ ಮಾರನೇ ದಿನ ನೀರು ಬಿಡುಗಡೆ: ರಾಜ್ಯ ಸರ್ಕಾರ ಹೇಮಾವತಿ ಬಲ ಮೇಲ್ದಂಡೆಗೆ ನೀರು ಹರಿಸುವಂತೆ ಕೋರಿ ಜು.28 ರಂದು ಪತ್ರ ಬರೆದ್ದೇನೆ. ನದಿಯಲ್ಲಿ 2892 ಅಡಿ ನೀರು ಇದ್ದು, ಈ ನೀರನ್ನು ನದಿಗೆ ಹರಿಸಿದರೆ, ನದಿ ಹಿನ್ನೀರಿನಲ್ಲಿರುವ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೊದಲು ನಾಲೆಗೆ ಆದ್ಯತೆ ಕೊಡುವಂತೆ ಪತ್ರದಲ್ಲಿ ಮನವಿ ಮಾಡಿದ್ದೆ.

ಆದರೆ, ನಾನು ಪತ್ರ ಬರೆದ ಮಾರನೇ ದಿನವೇ ನದಿಗೆ 3000 ಕ್ಯೂಸೆಕ್‌ ನೀರನ್ನು ಹರಿದು ಬಿಡಲಾಗುತ್ತಿದೆ. ಈ ನಿರ್ಧಾರ ಸರಿಯಲ್ಲ. ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ನಮ್ಮ ನಾಲಾ ವ್ಯಾಪ್ತಿಯ ರೈತರ ಸಂಕಷ್ಟಕ್ಕೆ ಕೈಜೋಡಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next