ಕುಣಿಗಲ್: ಲೋಕಸಭಾ ಚುನಾವಣೆ ರಾಜಕೀಯ ಲಾಭ ಪಡೆಯಲು ಹೇಮಾವತಿ ನೀರಿನ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೀರಾ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಸಂಸದ ಡಿ.ಕೆ.ಸುರೇಶ್, ಮೊದಲು ನಿಮಗೆ ಬಿಜೆಪಿಯಿಂದ ಟಿಕೆಟ್ ಸಿಗುತ್ತಾ ಎಂಬುದರ ಬಗ್ಗೆ ಖಾತರಿ ಪಡಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
ತಾಲೂಕಿನ ಹೆಬ್ಬೂರು ಮತ್ತು ಎಡೆಯೂರು ವ್ಯಾಪ್ತಿಯ ಹೇಮಾವತಿ ಅಚ್ಚುಕಟ್ಟು ಪ್ರದೇಶದ 46 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಾಲೂಕಿನ ಅಮೃತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಆಗ ಏನ್ ಮಾಡುತ್ತಿದ್ದೀರಿ: ಕುಣಿಗಲ್ ತಾಲೂಕಿನ ಜನರ ಆಶೀರ್ವಾದದಿಂದ ನಾಲ್ಕು ಬಾರಿ ಸಂಸದರಾಗಿದ್ದೀರಾ, ಆದರೆ, ನಿಮ್ಮನ್ನು ಗೆಲ್ಲಿಸಿದ ತಾಲೂಕಿನ ಜನತೆಗೆ ನಿಮ್ಮ ಕೊಡುಗೆ ಏನು ಎಂದು ಜಿಎಸ್‌ಬಿ ವಿರುದ್ಧ ಹರಿಹಾಯ್ದರು. ನೀವು ಸಂಸದರಾಗಿದ್ದ ವೇಳೆ ಕಾವೇರಿ ಕೊಳ್ಳದ ನೀರನ್ನು ಕೃಷ್ಣ ಕೊಳ್ಳಕ್ಕೆ ತೆಗೆದುಕೊಂಡು ಹೋಗುವಾಗ ಏನು ಮಾಡುತ್ತಿದ್ದೀರಿ. ತುಮಕೂರು ಜಿಲ್ಲೆಗೆ ಹೇಮಾವತಿ 24 ಟಿಎಂಸಿ ನೀರು ನಿಗದಿಪಡಿಸಲಾಗಿದೆ.
ಈ ಪೈಕಿ ಕುಣಿಗಲ್ ತಾಲೂಕಿಗೆ 4 ಟಿಎಂಸಿ ನೀರು ಹರಿಯಬೇಕಾಗಿದೆ. ಆದರೆ. ನೀವು ಅಧಿಕಾರದಲ್ಲಿದ್ದ ವೇಳೆ ಹೇಮಾವತಿ ನಾಲೆಯ ಬಗ್ಗೆ ಎಚ್ಚರ ವಹಿಸಿ ಅಭಿವೃದ್ಧಿಪಡಿಸಿದ್ದರೆ, ಈ ಸಮಸ್ಯೆ ಎದುರಾಗುತ್ತಿರಲಿಲ್ಲ, ನಿಮ್ಮ ಬೇಜವಾಬ್ದಾರಿಯಿಂದ ಜಿಲ್ಲೆಯ ಜನರು ಸಮಸ್ಯೆ ಎದುರಿಸಬೇಕಾಗಿದೆ ಎಂದರು. ನಿಮಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಡಲ್ಲ. ಆ ಕಡೆ ಗಮನ ಹರಿಸಿ.
ಏಕೆ ಸುಮ್ಮನೆ ಕುಣಿಗಲ್ ತಾಲೂಕಿನ ವಿರುದ್ಧ ಮಾತನಾಡುತ್ತಿದೀªರಾ. ನಾವು ಎಲ್ಲಿಗೂ ನೀರು ತೆಗೆದುಕೊಂಡು ಹೋಗುತ್ತಿಲ್ಲ. ಕುಣಿಗಲ್‌ಗೆ ಮಾತ್ರ ನೀರು ಸರಾಗವಾಗಿ ಹರಿಯಲು ಪೈಪ್‌ಲೈನ್ ಲಿಂಕ್ ಮಾಡಿಕೊಳ್ಳುತ್ತಿದೇªವೆ. ಟಿಬಿಸಿ ನಾಲೆ ಅಗಲೀಕರಣಕ್ಕೆ 422 ಕೋಟಿ ರೂ.ಗಳನ್ನು ಸಮ್ಮಿಶ್ರ ಸರ್ಕಾರ ಮಂಜೂರಾತಿ ಮಾಡಿದೆ. ಇಲ್ಲಿ ನಾವು ತುಮಕೂರು ಜಿಲ್ಲೆಗೆ ಹರಿಸುವ ನೀರಿಗೆ ವಿರೋಧ ಮಾಡಿಲ್ಲ. ಆದರೆ ಕುಣಿಗಲ್‌ಗೆ ಮಾತ್ರ ನೀರು ಕೇಳುತ್ತಿದ್ದೇವೆ ಎಂದರು.
ಕಳಪೆ ಮಾಡಿದರೆ ಕಾಮಗಾರಿ ನಿಲ್ಲಿಸಿ: ನಮಗೆ ಗುತ್ತಿಗೆದಾರರು ಮುಖ್ಯ ಅಲ್ಲ ಜನ ಮುಖ್ಯ. ರಸ್ತೆ ಕಾಮಗಾರಿ ಕಳಪೆ ಮಾಡಿದರೆ ಮುಲಾಜಿಲ್ಲದೆ ತಡೆದು ನಿಲ್ಲಿಸಿ. ನಿಮ್ಮೂರ ರಸ್ತೆ ಶಾಶ್ವತವಾಗಿರಬೇಕು ಎಂದು ಸಾರ್ವಜನಿಕರಿಗೆ ಸಂಸದರು ಸಲಹೆ ನೀಡಿದರು.
ಶಾಸಕ ಡಾ.ರಂಗನಾಥ್, ಜಿ.ಪಂ ಸದಸ್ಯೆ ಅನುಸೂಯಮ್ಮ ವೈ.ಕೆ.ಆರ್, ಪುರಸಭಾ ಅಧ್ಯಕ್ಷೆ ನಳಿನಾ, ತಾಪಂ ಸದಸ್ಯರಾದ ವಿಶ್ವನಾಥ್, ಮುಖಂಡರಾದ ಕೆಂಪೀರೇಗೌಡ, ಕೆಂಪೇಗೌಡ, ಅಲ್ಲಾಬಕಾಶ್, ನಂಜೇಗೌಡ್ರು, ಆಡಿಟರ್ ನಾಗರಾಜ್, ಗೂಳಿಗೌಡ, ರೆಹಮಾನ್ ಷರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟರಾಮು, ರಂಗಣ್ಣಗೌಡ, ಪುರಸಭಾ ಸದಸ್ಯರಾದ ಚಂದ್ರಶೇಖರ್, ಪಾಪಣ್ಣ, ಗ್ರಾಪಂ ಅಧ್ಯಕ್ಷ ವೆಂಕಟರಾಮು, ಸದಸ್ಯರಾದ ಕಮಲಮ್ಮ, ಶ್ರೀನಿವಾಸ್ ಇದ್ದರು.