Advertisement

ಹಕ್ಕು ಪತ್ರಕ್ಕಾಗಿ ಹೇಮಾವತಿ ಮುಳುಗಡೆ ಸಂತ್ರಸ್ತರ ಪರದಾಟ

09:27 PM Mar 08, 2020 | Lakshmi GovindaRaj |

ಸಕಲೇಶಪುರ/ಆಲೂರು: ಹೇಮಾವತಿ ಅಣೆಕಟ್ಟಿನಿಂದ ಮುಳುಗಡೆಯಾದ ಸಂತ್ರಸ್ತರಿಗೆ ಸರ್ಕಾರ ಬ್ಯಾಬ ಅರಣ್ಯದಲ್ಲಿ ಜಮೀನು ನೀಡಿದ್ದು, ಹಲವು ವರ್ಷಗಳು ಕಳೆದರು ಜಮೀನಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಕೊಡದಿರುವುದರಿಂದ ಹಲವು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ.

Advertisement

148 ಗ್ರಾಮಗಳ ಮುಳುಗಡೆ ಸಂತ್ರಸ್ತರು: 47 ವರ್ಷಗಳ ಹಿಂದೆ ಗೊರೂರಿನಲ್ಲಿ ಹೇಮಾವತಿ ಜಲಾಶಯ ನಿರ್ಮಾಣ ಮಾಡಲು ಪೊನ್ನಾಥಪುರ, ಬಂಡಿ ಮಲ್ಲೇನಹಳ್ಳಿ, ಮಂದಿರಾ, ಕಾಕನಹಳ್ಳಿ, ಸಿದ್ದಾಪುರ, ಹೊಳೆಮಾರನಹಳ್ಳಿ, ಅಪ್ಪಗೊಡನಹಳ್ಳಿ,ಗಂಜಿಗೆರೆ, ಬಸವನಹಳ್ಳಿ, ಅಜ್ಜಗೊಡನಹಳ್ಳಿ,ಸೇರಿದಂತೆ ಸುಮಾರು 148 ಗ್ರಾಮಗಳು ಮುಳುಗಡೆಯಾಗಿದ್ದರಿಂದ ಅಲ್ಲಿದ ಜನರನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿತ್ತು.

ಆ ಸಂದರ್ಭದಲ್ಲಿ ಕೆಲವು ಸಂತ್ರಸ್ತರಿಗೆ ಬ್ಯಾಬ ಅರಣ್ಯ, ಧರ್ಮಾಪುರಿ,ಮಣಿಪುರ, ಶಿವಸಾಗರ, ಮಲ್ಲೇಶ್ವರ ಸೇರಿದಂತೆ ಇತರ ಭಾಗಗಳಲ್ಲಿ ಸುಮಾರು 1,558 ಎಕರೆ ಜಮೀನಿನಲ್ಲಿ ಒಂದು ಸರ್ಟಿಫಿಕೇಟಿಗೆ 4 ಎಕರೆಯಂತೆ ಜಮೀನು ನೀಡಲಾಗಿತ್ತು. ಅದರೆ ಜಮೀನು ನೀಡಿ 5 ದಶಕ ಕಳೆದರೂ ಇದುವರೆಗೂ ಯಾವುದೇ ಹಕ್ಕು ಬಾಧ್ಯತೆ ನೀಡದಿರುವುದರಿಂದ ಜಮೀನಿಗೆ ಸೂಕ್ತ ದಾಖಲೆಗಳನ್ನು ಕೊಡುವಂತೆ ತಾಲೂಕು ಕಚೇರಿಗೆ ಸಂತ್ರಸ್ತರು ದಿನಂಪ್ರತಿ ಅಲೆದಾಡುವುದು ಬಿಟ್ಟರೆ ಯಾವುದೆ ಪ್ರಯೋಜನವಾಗಿಲ್ಲ.

ಸಾಗುವಳಿ ಚೀಟಿ ಬಿಟ್ಟರೆ ಬೇರೇನೂ ಇಲ್ಲ: ಐದು ದಶಕ ಕಳೆದರೂ ಜಮೀನಿನ ಪಕ್ಕಾ ಪೋಡಿ ಆಗದ ಕಾರಣ ಹಲವು ಕುಟುಂಬಗಳು ಜಮೀನಿನ ಆಸೆಯನ್ನು ಬಿಟ್ಟು ಬೇರೆಡೆಗೆ ವಲಸೆ ಹೋಗಿವೆ. ಹಲವು ಸಂತ್ರಸ್ತರ ಬಳಿ ಜಮೀನಿಗೆ ಸಂಬಂಧಪಟ್ಟಂತೆ ಸಾಗುವಳಿ ಚೀಟಿ ಬಿಟ್ಟರೆ ಬೇರೆ ಯಾವ ದಾಖಲೆಗಳು ದೊರೆಯುವುದಿಲ್ಲ. ಕೆಲವು ಅಧಿಕಾರಿಗಳು ಜಮೀನು ದಾಖಲೆಗಳನ್ನು ಮಾಡಿಕೊಡುವುದಾಗಿ ಹಣ ಪಡೆದು ಕೆಲಸ ಮಾಡಿಕೊಡದೇ ದಿನಂಪ್ರತಿ ಕಚೇರಿಗೆ ಅಲೆಸುತ್ತಾ ಸಂತ್ರಸ್ತರನ್ನು ಕತ್ತಲೆ ಕೋಣೆಯಲ್ಲಿ ಇಟ್ಟಿದ್ದರೆಂಬ ಆರೋಪಗಳು ಕೇಳಿ ಬಂದಿದೆ.

ದಶಕಗಳ ಹಿಂದೆ ಹೇಮಾವತಿ ಅಣೆಕಟ್ಟೆ ಕಟ್ಟಲು ಕೆಲವು ಕುಟುಂಬಗಳು ಜಮೀನು ನೀಡಿ ತ್ಯಾಗ ಮಾಡಿದ್ದರಿಂದ ಇಂದು ಕೋಟ್ಯಂತರ ಜನ ನೆಮ್ಮದಿಯಿಂದ ಅನ್ನ ತಿನ್ನುತಿದ್ದಾರೆ. ಆದರೆ ಇಂದು ಜಮೀನಿನ ಸಾಗುವಳಿ ಪತ್ರ ಇದ್ದರೂ ಭೂಮಿ ತಮಗೆ ಸೇರಿದ್ದು ಎಂಬುದರ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆ ನೀಡದೇ ಇರುವುದರಿಂದ ಮುಳುಗಡೆ ಪ್ರದೇಶದ ಸಂತ್ರಸ್ತರು ಕಂಗಾಲಾಗಿದ್ದಾರೆ. ಕೂಡಲೇ ತಾಲೂಕು ಆಡಳಿತದಿಂದ ಮುಳುಗಡೆ ಸಂತ್ರಸ್ತರಿಗೆ ಸರ್ಕಾರದಿಂದ ನೀಡಿದ್ದ ಭೂಮಿಗೆ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಅವರ ಸಮಸ್ಯೆ ಪರಿಹರಿಸುವುದು ಅಗತ್ಯವಾಗಿದೆ.

Advertisement

ಗೊರೂರು ಡ್ಯಾಂ ನಿರ್ಮಾಣಕ್ಕೆ ಭೂಮಿ ನೀಡಿರುವ ಸಂತ್ರಸ್ತರಿಗೆ ಸರ್ಕಾರದಿಂದ ನೀಡಿರುವ ಭೂಮಿಗೆ ಹಕ್ಕು ಪತ್ರ ನೀಡಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು
-ಶಿರೀನ್‌ತಾಜ್‌, ತಹಶೀಲ್ದಾರ್‌

ಜಮೀನು ಮಾರಾಟ ಅಥವಾ ಮಕ್ಕಳಿಗೆ ಪಾಲು ಮಾಡಿಕೊಡುವಂತಹ ಸಂದರ್ಭದಲ್ಲಿ ಹಕ್ಕುಪತ್ರವಿಲ್ಲದೇ ಜಮೀನನ್ನು ಪರಭಾರೆ ಮಾಡುವಂತಿಲ್ಲ. ಸಂಬಂಧ ಪಟ್ಟವರು ಕೂಡಲೇ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ.
-ಕೃಷ್ಣೇಗೌಡ, ಮಾಜಿ ಗ್ರಾಪ ಸದಸ್ಯರು

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next