ಮೈಸೂರು: ಸಮಾಜದ ಏಳಿಗೆಗೆ ಶ್ರಮಿಸಿದ ಮಹನೀಯರನ್ನು ಜನರಿಗೆ ಪರಿಚಯಿಸುವ ಸಲುವಾಗಿ ಸಿದ್ದರಾಮಯ್ಯ ಸರ್ಕಾರ ಅನೇಕ ಮಹನೀಯರ ಜನ್ಮ ದಿನಾಚರಣೆಯನ್ನು ಸರ್ಕಾರದವತಿಯಿಂದಲೇ ಆಚರಿಸುತ್ತಿದೆ ಎಂದು ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು, ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಸಮಿತಿ ಹಾಗೂ ಬಡಗನಾಡು ಹೇಮರೆಡ್ಡಿ ಮಲ್ಲಮ್ಮ ಬಳಗಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನ ವಿಚಾರ ಹೆಚ್ಚು ಜನರಿಗೆ ತಿಳಿಯುವಂತಾಗಿ, ಸಮಾಜದಲ್ಲಿ ಜಡ್ಡುಗಟ್ಟಿರುವ ಮೌಡ್ಯತೆ ನಿವಾರಣೆ ಸಾಧ್ಯವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಜನತೆ ವಿದ್ಯಾವಂತೆ, ಬುದ್ಧಿವಂತರಾದರೂ ಅವರ ನಡವಳಿಕೆಗಳಲ್ಲಿ ವ್ಯತ್ಯಾಸ ಕಾಣುತ್ತೇವೆ. ಹೀಗಾಗಿ ಅರಿವಿಗಿಂತ ಆಚರಣೆ ಮುಖ್ಯವಾಗಬೇಕು. ಇಂತಹ ಸಮಾಜಕ್ಕೆ ಹೇಮರೆಡ್ಡಿ ಮಲ್ಲಮ್ಮನ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಮೇಲೆ ಮೊದಲಿನಿಂದಲೂ ದಬ್ಟಾಳಿಕೆ ನಡೆದೇ ಇದೆ. ಅದರ ನಡುವೆಯೂ ಹೇಮರೆಡ್ಡಿ ಮಲ್ಲಮ್ಮ ಸಾಧನೆ ಮಾಡಿರುವುದು ಮಹತ್ವದ ಸಂಗತಿ ಎಂದು ಹೇಳಿದರು.
ಯಾವುದೇ ಜಯಂತಿಗಳ ಆಚರಣೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ. ಬದಲಿಗೆ ನಮ್ಮ ಚಿಂತನೆಗಳು ಬದಲಾದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಆಗ ಜಾತಿಯ ಗೋಡೆಗಳು ಕಳಚಿ ಬೀಳುತ್ತವೆ ಎಂದರು. ಸಾಹಿತಿ ಪೊ›.ಮೊರಬದ ಮಲ್ಲಿಕಾರ್ಜುನ, ಹೇಮರೆಡ್ಡಿ ಮಲ್ಲಮ್ಮ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ್ದು ಇಂದಿನ ಅಗತ್ಯ. ಕರ್ನಾಟಕದ ಮಹಾ ಶರಣೆ ಶಿವಸಾಧ್ವಿ ಎಂದು ಸ್ವೀಕರಿಸಿರುವ ಮಲ್ಲಮ್ಮ ಜೈ ಭಾರತ ಜನನಿಯ ತನುಜಾತೆ ಇದ್ದಂತೆ ಎಂದು ತಿಳಿಸಿದರು.
ಗಾವಡಗೆರೆಯ ಗುರುಲಿಂಗ ಜಂಗಮ ದೇವರಮಠದ ನಟರಾಜ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಾಸಕ ವಾಸು ಅಧ್ಯಕ್ಷತೆವಹಿಸಿದ್ದರು. ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಗೊ.ರು.ಪರಮೇಶ್ವರಪ್ಪ, ಡಾ.ತಿಪ್ಪೇಸ್ವಾಮಿ, ಶಿವಲಿಂಗಸ್ವಾಮಿ, ಶಿವಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ ಇದ್ದರು.