ಬಾಗಲಕೋಟೆ: ಪುರುಷ ಪ್ರಧಾನವಾದ ಭಾರತ ದೇಶದಲ್ಲಿ ಐದನೂರು ವರ್ಷಗಳ ಹಿಂದೆ ಭಕ್ತಿ ಪರಾಕಾಷ್ಟೆ ತಲುಪಿದ ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲದ ತಿಲಕರಾಗಿದ್ದಾರೆ ಎಂದು ಬಾಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಹೇಳಿದರು.
ನವನಗರದ ಡಾ|ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾರತ ದೇಶ ಹಿಂದಿನಿಂದಲೂ ಪ್ಲೇಗ್, ಮಲೇರಿಯಾ, ದಡಾರದಂತ ಕಾಯಿಲೆಗಳು ಮತ್ತು ಮೊಘಲರು, ಸುಲ್ತಾನರು, ಬ್ರಿಟೀಷರು ಈ ದೇಶ ಮೇಲೆ ದಾಳಿ ಇಟ್ಟರೂ ಕೂಡಾ ದೇಶ ಸುಭದ್ರವಾಗಿರಲು ಮಲ್ಲಮ್ಮ ನಂತಹ ಶರಣೆಯರ ಪಾದಸ್ಪರ್ಶದಿಂದ ಎಂಬುದು ಸಾಬೀತಾಗಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಡಾ|ಟಿ.ಎಚ್.ಮಳಲಿ ಮಾತನಾಡಿ, ಯಾರು ಇತಿಹಾಸ ಮತ್ತು ಸಂಸ್ಕೃತಿಯನ್ನು ಮರೆಯುತ್ತಾರೋ ಅವರು ಇತಿಹಾಸವನ್ನು ಸೃಷ್ಟಿಸಲಾರರು. ಸಂತ, ಶಿವ ಶರಣ ಮತ್ತು ಶಿವಶರಣೆಯರ, ಸನ್ಯಾಸಿಗಳ ಮಹತ್ವ ತಿಳಿಯುವುದು ಇತಿಹಾಸದಿಂದ ಮಾತ್ರ ಸಾಧ್ಯ. ಅಂತಹ ಇತಿಹಾಸದಲ್ಲಿ ಹೇಮರಡ್ಡಿ ಮಲ್ಲಮ್ಮನ ಚರಿತ್ರೆ ಮತ್ತು ಚಾರಿತ್ರ್ಯದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಸಮುದಾಯದ ಮುಖಂಡರಾದ ಮಹೇಶ ಕಕರಡ್ಡಿ ಮಾತನಾಡಿ, ಮನಸ್ಸು ಸ್ವತ್ಛವಾಗಿಟ್ಟುಕೊಳ್ಳಲು ಇಂತಹ ಕಾರ್ಯಕ್ರಮ ನಡೆಸುವುದು ಅಗತ್ಯವಾಗಿದೆ. ಎಲ್ಲ ಸಮುದಾಯದವರು ಒಂದು ಎಂದು ನಂಬಿಕೆ ಇಡಬೇಕು. ಮೈಮುರಿಯುವಂತೆ ದುಡಿದು ಅಷ್ಟೇ ವಿನಂತಿಯಿಂದ ದಾನ ಮಾಡಬೇಕು ಎಂಬ ಹೇಮರೆಡ್ಡಿ ಮಲ್ಲಮ್ಮರವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಮಾತನಾಡಿ, ಮಹಿಳೆಯರ ಪಾಲಿನ ಆರಾದ್ಯ ದೈವರಾಗಿದ್ದ ಮಲ್ಲಮ್ಮಳ ಆರಾಧಕರಾದ ನಾವು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು. ಜಿಪಂ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ತೋಟಗಾರಿಕಾ ಉಪನಿರ್ದೇಶಕ ರಾಹುಲಕುಮಾರ ಬಾವಿದಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯದ ಮುಖಂಡರಾದ ಎಸ್.ಡಿ. ಕೋಮಾರ, ಎಂ.ಆರ್. ಪಾಟೀಲ, ರಾಜು ಪಾಟೀಲ, ಎ.ಎನ್.ಹಿರೇಗೌಡರ, ಆರ್.ಬಿ. ದ್ಯಾವನ್ನವರ, ಎನ್.ಬಿ. ಚಿತ್ತವಾಡಗಿ,ವಿ.ಟಿ. ಶೇಷಪ್ಪನವರ, ಮದುಸೂಧನ ಮೂದಲಗಿ, ಇಂದುಮತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಅದ್ಧೂರಿ ಮೆರವಣಿಗೆ
ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಹೇಮರಡ್ಡಿ ಮಲ್ಲಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗಳೊಂದಿಗೆ ಹೊರಟ ಅದ್ಧೂರಿ ಮೆರವಣಿಗೆ ನಗರದ ವಿವಿಧೆಡೆ ಸಂಚರಿಸಿ ಡಾ| ಬಿ.ಆರ್.ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಕುಂಬ ಹೊತ್ತ ಮಹಿಳೆಯರು ಆಕರ್ಷಣೀಯ ಬಿಂದು ಆಗಿದ್ದರು. ಮೆರವಣಿಗೆಯಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಅಪರ ಜಿಲ್ಲಾಧಿ ಕಾರಿ ಮಹಾದೇವ ಮುರಗಿ, ಜಿಪಂ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಭಾಂದವರು ಪಾಲ್ಗೊಂಡಿದ್ದರು.