ಬನ್ನೂರು: ಬನ್ನೂರಿನ ಪ್ರಧಾನ ದೇವತೆ ಹೇಮಾದ್ರಂಬ ದೇವಿಯ ತೆಪ್ಪೋತ್ಸವ ಮಾಕನಹಳ್ಳಿ ಗ್ರಾಮದ ಹೆಗ್ಗೆರೆಯಲ್ಲಿ ಸೋಮವಾರ ಸಾವಿರಾರು ಜನ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.
ರಥೋತ್ಸವದ ಮಾರನೇಯ ದಿನ ನಡೆಯುವ ತೆಪ್ಪೋತ್ಸವಕ್ಕಾಗಿ ದೋಣಿಗಳನ್ನು ತಂದು ಪೂರ್ವಸಿದ್ಧತೆ ನಡೆಸಲಾಗಿತ್ತು. ಜೊತೆಗೆ ತೆಪ್ಪೋತ್ಸವ ದೇವರೊಟ್ಟಿಗೆ ಇತರರು ಹೋಗಲು ಬೇರೆ ಬೇರೆ ತೆಪ್ಪಗಳನ್ನು ತಯಾರಿಗೊಳಿಸಲಾಗಿತ್ತು.
ಮಾಕನಹಳ್ಳಿಯ ಹೆಗ್ಗರೆಗೆ ದೇವಿಯನ್ನು ತರುತ್ತಿದ್ದಂತೆ ಇಲ್ಲಿನ ಯುವಕರು ಬಣ್ಣವನ್ನು ಹಚ್ಚುವ ಮೂಲಕ ಓಕುಳಿಯಾಟವನ್ನು ಆಡಿದರು. ದೇವಿಗೆ ಹೆಗ್ಗೆರೆಯ ಬಳಿಯಲ್ಲಿ ಪೂಜೆ ನಡೆಸಲಾಯಿತು. ದೇವಿಯನ್ನು ಹೊರುವ ತೆಪ್ಪಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಹೇಮಾದ್ರಂಬ ದೇವಿಯ ಅರ್ಚಕರು ಪೂಜೆಯನ್ನು ಸಲ್ಲಿಸುತ್ತಿದ್ದಂತೆ ಅಲಂಕೃತಗೊಂಡ ಚಿನ್ನದ ಹೇಮಾದ್ರಂಬ ದೇವಿಯನ್ನು ದೋಣಿಯ ಮೇಲೆ ಕುಳ್ಳಿರಿಸಿ ಭಕ್ತರ ಜೈಕಾರದೊಂದಿಗೆ ಹೆಗ್ಗೆರಯಲ್ಲಿ ಚಲಿಸಲು ಪ್ರಾರಂಭಿಸಿತು.
ಪುರಾತನ ಪದ್ಧತಿಯಂತೆ ಹೇಮಾದ್ರಂಬ ದೇವಿಯ ತೆಪ್ಪವು ಹನುಮನಾಳು ಬೀಡನಹಳ್ಳಿ, ಭುಗತಹಳ್ಳಿ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರಿಂದ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ನಾಲ್ಕು ದಿಕ್ಕಿನ ಕಡೆಗೂ ಸಾಗಿ ತನ್ನ ಸ್ವಸ್ಥಾನಕ್ಕೆ ಹಿಂದಿರುಗಿತು. ದೇವಿಯ ತೆಪ್ಪವೂ ಹೆಗ್ಗೆರೆಯಲ್ಲಿ ತೇಲುತ್ತಿದ್ದ ದೃಶ್ಯವನ್ನು ನೋಡಲು ಸಾವಿರಾರು ಜನರು ಸುತ್ತಮುತ್ತಲಿನ ಗ್ರಾಮಗಳಿಂದ ಜಮಾಯಿಸಿ ಕಣ್ತುಂಬಿಕೊಂಡರು. ಪ್ರಸಾದ ವಿನಿಯೋಗಿಸಲಾಯಿತು.
ನಂತರ ಮಾಕನಹಳ್ಳಿ ಹೆಗ್ಗೆರಯ ದೇವಿಯ ಮಂಟಪದಲ್ಲಿ ದೇವಿಯನ್ನಿಟ್ಟು ಮಾಕನಹಳ್ಳಿ ಗ್ರಾಮಸ್ಥರಿಂದ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ವಿದ್ಯುತ್ ದೀಪಾಲಂಕಾರದೊಂದಿಗೆ ಅಲಂಕಾರಗೊಂಡಿದ್ದ ಮಾಕನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಾತ್ರಿ ಬನ್ನೂರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.