ಗದಗ: ಜಿಲ್ಲೆಯಲ್ಲಿ ಕೋವಿಡ್ ನಿರ್ನಾಮಕ್ಕೆ ಸರಕಾರದೊಂದಿಗೆ ಜಿಲ್ಲಾ ಕಾಂಗ್ರೆಸ್ ಪಣತೊಟ್ಟಿದೆ. ಸೋಂಕು ತಡೆಗಟ್ಟಲು ಸರಕಾರ 15 ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದವರ ನೆರವಿಗಾಗಿ ಜಿಲ್ಲಾ ಕಾಂಗ್ರೆಸ್‌ನಿಂದ ಕ್ಷೇತ್ರವಾರು ಸಹಾಯವಾಣಿ ಮತ್ತು ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ಆರಂಭಿಸಿರುವ ಸಹಾಯವಾಣಿ ಅಗತ್ಯವುಳ್ಳವರಿಗೆ ಆಸರೆಯಾಗಿದೆ. ಅದರಂತೆ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ, ಸಲಹೆ ಸೂಚನೆಯಂತೆ ವಿಧಾನಸಭಾ ಕ್ಷೇತ್ರವಾರು ಸಹಾಯವಾಣಿ ಆರಂಭಿಸಲಾಗಿದೆ.
ಪ್ರತೀ ಕ್ಷೇತ್ರದಲ್ಲಿ ನಾಲ್ವರು ಸಕ್ರಿಯ ಕಾರ್ಯಕರ್ತರು ಸ್ವಯಂ ಸೇವಕರಾಗಿದ್ದಾರೆ. ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಔಷಧಿ, ಮನೆಯಲ್ಲಿ ಒಬ್ಬರೇ ಇದ್ದರೆ ಊಟ ಹಾಗೂ ಓದುವ ಆಸಕ್ತಿ ಇದ್ದವರಿಗೆ ಪುಸ್ತಕಗಳನ್ನೂ ಮನೆಗೆ ತಲುಪಿಸಲಾಗುತ್ತದೆ. ಆಸ್ಪತ್ರೆಗೆ ತೆರಳುವವರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತದೆ. ತಕ್ಷಣಕ್ಕೆ ಗದಗ, ರೋಣ, ಗಜೇಂದ್ರಗಡ ಭಾಗದಲ್ಲಿ ಪಕ್ಷದಿಂದ ಆಂಬ್ಯುಲೆನ್ಸ್ ಉಚಿತ ಸೇವೆ ದೊರೆಯಲಿದೆ. ಮುಂದಿನ ದಿನಗಳಲ್ಲಿ ನರಗುಂದ ಮತ್ತು ರೋಣ ಭಾಗದಲ್ಲಿ ಒಂದು ಐಸಿಯು ಆಂಬ್ಯುಲೆನ್ಸ್ ಒದಗಿಸಲು ಚಿಂತನೆ ನಡೆಸಿದೆ ಎಂದು ಹೇಳಿದರು. ಅಲ್ಲದೇ, ಪಕ್ಷದ ಕಾರ್ಯಕರ್ತರ ಮೂಲಕ 18 ವರ್ಷ ಮೇಲ್ಪಟ್ಟವರನ್ನು ಕೋವಿಡ್ ವ್ಯಾಕ್ಸಿನೇಷನ್ ಗೆ ಪ್ರೇರೇಪಿಸಲಾಗುತ್ತದೆ ಎಂದರು.
ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಸರಕಾರದೊಂದಿಗೆ ಕಾಂಗ್ರೆಸ್ ಪಕ್ಷವೂ ಕೈಜೋಡಿಸಿದೆ. ಆಂಬ್ಯುಲೆನ್ಸ್ ಸೇವೆ, ಸಂತ್ರಸ್ತರಿಗೆ ಊಟ, ಔಷಧೋಪಚಾರ ನೀಡುವುದರೊಂದಿಗೆ ಅಗತ್ಯವಿದ್ದವರಿಗೆ ತಾತ್ಕಾಲಿಕ ವಸತಿಯನ್ನೂ ಕಲ್ಪಿಸಲಾಗುತ್ತದೆ ಎಂದರು. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಬೇಕಾದ ಕೆಲಸಗಳಲ್ಲಿ ಅಯೋಗ್ಯತೆ ತೋರುತ್ತಿವೆ. ಇತ್ತೀಚೆಗೆ ರಾಜ್ಯ ಹಾಗೂ ಜಿಲ್ಲಾಡಳಿತಗಳು ಸೋಂಕಿತರು, ಸಾವಿನ ಸಂಖ್ಯೆ ಹಾಗೂ ಸಾವಿನ ಕಾರಣವನ್ನು ಯಾವುದೇ ಕಾರಣಕ್ಕೂ ಮರೆಮಾಚಬಾರದು. ಸಾವಿನ ಪ್ರಕರಣಗಳ ಬಗ್ಗೆ ಸರಿಯಾಗಿ ಆಡಿಟ್ ಮಾಡಬೇಕು ಎಂದು ಆಗ್ರಹಿಸಿದರು.
ರೈಲ್ವೆ ಬೋಗಿಗಳ ಬಳಕೆಗೆ ಒತ್ತಾಯ: ಜೊತೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಬೆಡ್‌ಗಳ ಕೊರತೆಯಾಗಲಿದೆ. ಅದಕ್ಕಾಗಿ ತಾಲೂಕು ಮತ್ತು ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಡ್‌ಗಳ ಸಂಖ್ಯೆ ಹೆಚ್ಚಿಸಬೇಕು. ರೈಲ್ವೆ ಇಲಾಖೆಯ ಹುಬ್ಬಳ್ಳಿ ವಲಯದಲ್ಲಿ ಸಿದ್ಧವಾಗಿ 7 ತಿಂಗಳಾದರೂ ರೈಲ್ವೆ ಬೆಡ್ ಗಳು ಬಳಕೆಯಾಗಿಲ್ಲ. ಆ ಪೈಕಿ 4 -5 ಬೋಗಿಗಳನ್ನು ಗದುಗಿಗೆ ತರಿಸಿಕೊಳ್ಳಬೇಕು. ಇದರಿಂದ ಸುಮಾರು 90 ಬೆಡ್‌ಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದು, ಅಗತ್ಯವಾದರೆ ಸ್ವತಃ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಎಚ್. ಕೆ. ಪಾಟೀಲ ತಿಳಿಸಿದರು.
ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಶ್ರೀಶೈಲಪ್ಪ ಬಿದರೂರ, ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಎಸ್.ಪಿ. ಬಳಿಗಾರ, ಸಿದ್ದುಪಾಟೀಲ, ಈರಪ್ಪ ಈಶ್ವರಪ್ಪ ನಾಡಗೌಡ್ರ, ಪ್ರಮುಖರಾದ ಐ.ಎಸ್. ಪಾಟೀಲ, ಗುರಣ್ಣ ಬಳಗಾನೂರ, ಅಶೋಕ ಬಾರಮಾರ ಸೇರಿದಂತೆ ಅನೇಕರಿದ್ದರು.