ರೈತಾಪಿ ವರ್ಗದ ಕುರಿತು ಅನೇಕ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಈಗ ಆ ಸಾಲಿಗೆ “ಕೂಗು’ ಸೇರಿಕೊಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಅವರ ಅನೇಕ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇದೆ ಎಂಬ ಸಂದೇಶದೊಂದಿಗೆ “ಕೂಗು’ ಮಾಡಿದ್ದಾರೆ ನಿರ್ದೇಶಕ ರಂಗನಾಥ್. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. ನಿರ್ಮಾಪಕ ಪದ್ಮನಾಭ್ ಅವರು ಆಡಿಯೋ ಸಿಡಿ ಬಿಡುಗಡೆ ಮಾಡಿ ಮಾತಿಗಿಳಿದರು.
“ಸಮಾಜದಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ರೈತರಿಂದಲೇ ಇಂದು ದೇಶದ ಜನ ಬದುಕುತ್ತಿದ್ದಾರೆ. ಅಂತಹ ಶ್ರಮಿಕ ವರ್ಗದ ದನಿ ಯಾರಿಗೂ ಕೇಳಿಸುತ್ತಿಲ್ಲ. ಮುಖ್ಯವಾಗಿ, ಅವರ ಬೆಳೆಗೆ ಬೆಂಬಲ ಬೆಲೆ ಇಲ್ಲ. ಇನ್ನೂ ಅನೇಕ ಕಷ್ಟಗಳಿಗೆ ಪರಿಹಾರವಿಲ್ಲ. ಅಂತಹ ಸೂಕ್ಷ್ಮ ವಿಷಯಗಳನ್ನು ಇಲ್ಲಿ ಹೇಳಲಾಗಿದೆ. “ಕೂಗು’ ಕನ್ನಡಕ್ಕೆ ಒಂದು ವಿಶೇಷ ಚಿತ್ರ ಅಂತ ಹೇಳಿಕೊಂಡರು ಪದ್ಮನಾಭ್.
ನಿರ್ದೇಶಕ ರಂಗನಾಥ್ ಅವರು ಈ “ಕೂಗು’ ಮಾಡಲು ಕಾರಣ, ಕೆ.ವಿ.ರಾಜು ಅವರಂತೆ. ಈ ಹಿಂದೆ ದೇವರಾಜ್ ಅವರಿಗೆ “ಕೂಗು’ ಚಿತ್ರ ಕೈಗೆತ್ತಿಕೊಂಡಿದ್ದರಂತೆ. ಕೊನೆಗೆ ಆ ಚಿತ್ರ ಕಾರಣಾಂತರದಿಂದ ಆಗಲಿಲ್ಲವಂತೆ. ಒಮ್ಮೆ ಒಂದು ಟ್ರೇಲರ್ ಮಾಡಿ, ನಿರ್ಮಾಪಕರನ್ನು ಹುಡುಕಬೇಕು ಅಂತ ಯೋಚಿಸಿದ್ದರಂತೆ ನಿರ್ದೇಶಕರು. ಆ ಸಮಯದಲ್ಲಿ ಇನ್ನೊಂದು ಚಿತ್ರ ಮಾಡುವ ಬಿಜಿ ಇರುವಾಗಲೇ, ಕಥೆಗಾರ ಸೋಸಲೆ ಗಂಗಾಧರ್ “ಕೂಗು’ ಕಥೆ ತಂದರಂತೆ. ಅದು ಚೆನ್ನಾಗಿದ್ದ ಕಾರಣ, ಅದನ್ನೇ ಮಾಡಿದ್ದಾಗಿ ಹೇಳಿಕೊಂಡ ರಂಗನಾಥ್, ಇದೊಂದು ರೈತ ವರ್ಗದ ಕುರಿತ ಸಿನಿಮಾ. ಈಗಿನ ಸಮಾಜದಲ್ಲಿ ರೈತರಿಗೆ ಏನೆಲ್ಲಾ ಆಗುತ್ತೆ ಎಂಬುದನ್ನಿಲ್ಲಿ ಹೇಳಲಾಗಿದೆ. ಈಗ ಚಿತ್ರ ರೆಡಿಯಾಗಿದೆ, ಇಷ್ಟರಲ್ಲೇ ತೆರೆಗೆ ಬರಲಿದೆ ಎಂದರು ಅವರು.
ಸೋಸಲೆ ಗಂಗಾಧರ್ ಅವರು ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. ಅವರಿಗೆ “ಕೂಗು’ ಒಂದು ವಿಶೇಷ ಚಿತ್ರ ಆಗುತ್ತೆ ಎಂಬ ನಂಬಿಕೆ. “ದೇಶದ ಅಡಿಪಾಯದಲ್ಲಿರುವ ರೈತ ಎಲ್ಲಾ ಕಾಲಮಾನಗಳಲ್ಲೂ ತೊಂದರೆಗೆ ಸಿಕ್ಕವನು. ಇಡೀ ಸಮಾಜದ ತಳಪಾಯವೇ ರೈತ. ಒಂದು ಬೆಂಕಿಪಟ್ನಕ್ಕೆ ಎಂಆರ್‌ಪಿ ಬೆಲೆ ಇದೆ. ಆದರೆ, ರೈತ ಬೆಳೆದ ಬೆಲೆಗೆ ಇಲ್ಲ. ಅದೇ ಚಿತ್ರದ ಹೈಲೆಟ್. ಇಲ್ಲಿ ಅನೇಕ ಸೂಕ್ಷ್ಮ ವಿಷಯಗಳೂ ಇವೆ’ ಎಂದರು.
ದತ್ತ ನಾಯಕರಾದರೆ, ವರ್ಷಾ ನಾಯಕಿಯಾಗಿ ನಟಿಸಿದ್ದಾರೆ. ದತ್ತ ಇಲ್ಲಿ ಸಾಫ್ಟ್ವೇರ್ ಎಂಜಿನಿಯರ್. ವರ್ಷ ಒಬ್ಬ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರಂತೆ. ಇಬ್ಬರ ಮೇಲೆಯೇ ಚಿತ್ರ ಸಾಗುತ್ತೆ ಎಂಬುದು ಅವರ ಮಾತು. ಸಹ ನಿರ್ಮಾಪಕ ಹರೀಶ್ ಮಂಚೇನಹಳ್ಳಿ ಅವರಿಗೆ ಒಳ್ಳೆಯ ಚಿತ್ರದಲ್ಲಿ ಕೆಲಸ ಮಾಡಿದ ಖುಷಿ. ಛಾಯಾಗ್ರಾಹಕ ಚಂದ್ರಣ್ಣ ಅವರು ಕೊನೆಯ ಕ್ಷಣದಲ್ಲಿ ಈ ಚಿತ್ರಕ್ಕೆ ಆಯ್ಕೆಯಾದರಂತೆ. ಎ.ಟಿ.ರವೀಶ್ ಇಲ್ಲಿ ಕಥೆಗೆ ಪೂರಕವಾದ ಹಾಡುಗಳನ್ನು ಕೊಟ್ಟಿದ್ದಾರಂತೆ. ಚಿತ್ರದಲ್ಲಿ ಅಶೋಕ್, ಧನಂಜಯ್ ಇತರರು ನಟಿಸಿದ್ದಾರೆ.