Advertisement

ಇನ್ನೊಬ್ಬರಿಗೆ ನೆರವಾದರೆ ಜೀವನದಲ್ಲಿ ನೆಮ್ಮದಿ

09:37 PM Mar 23, 2019 | |

ದಾವಣಗೆರೆ: ಜೀವನದಲ್ಲಿ ನೆಮ್ಮದಿಯ ಬದುಕು ನಮ್ಮದಾಗಬೇಕಾದರೆ ಇನ್ನೊಬ್ಬರಿಗೆ ನೆರವಾಗಬೇಕು ಮತ್ತು ಪರರ ಕಷ್ಟಗಳಿಗೆ ಸ್ಪಂದಿಸಿ, ನಿವಾರಣೆಗೆ ಶ್ರಮಿಸಬೇಕು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

Advertisement

ಗುರುವಾರ ಮೌಲಾನ್‌ ಆಜಾದ್‌ ಸಂಸ್ಥೆ ವತಿಯಿಂದ ಅರಳಿ ಮರದ ವೃತ್ತದ ಬಳಿಯ ಸರ್ಕಾರಿ ಉರ್ದು ಶಾಲೆಯಲ್ಲಿ ದಾವಣಗೆರೆ ತಾಲೂಕಿನ 51 ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ 5 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಿಸ್ವಾರ್ಥ ಸಮಾಜ ಸೇವೆಯಿಂದ ಜೀವನವೇ ಆನಂದದ ನಂದನವನವಾಗುತ್ತದೆ ಎಂದರು.
 
ಕೆಲವರು ಜೀವನದಲ್ಲಿ ಸಂತೋಷ ಅನುಭವಿಸಬೇಕು ಎಂದು ಕುಡಿತದೊಂದಿಗೆ ಮೋಜು, ಮಸ್ತಿ ಮಾಡುತ್ತಾರೆ. ಆದರೆ, ಆ ಸುಖ ಕ್ಷಣಿಕವಾದದ್ದು. ಕುಡಿತದಿಂದ ಹಣ, ಆರೋಗ್ಯ ಎರಡೂ ಹಾಳಾಗುತ್ತದೆ. ಜೊತೆಗೆ ನೆಮ್ಮದಿಯೂ ಸಿಗುವುದಿಲ್ಲ. ನಮ್ಮಲ್ಲಿರುವುದರಲ್ಲೇ ಇನ್ನೊಬ್ಬರಿಗೆ ನೆರವು ನೀಡಬೇಕು ಎಂದು ತಿಳಿಸಿದರು.

ಬಸವಣ್ಣ, ಗೌತಮ ಬುದ್ಧ, ಅಂಬೇಡ್ಕರ್‌ ಸೇರಿದಂತೆ ಮೊದಲಾದವರು ಸಮಾಜ ಸೇವೆಯಿಂದ ಬದುಕಿನ ಸುಖ ಕಂಡುಕೊಂಡಿದ್ದಾರೆ. ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿ ತ್ಯಾಗಮೂರ್ತಿಯಾಗಿ ಇಂದಿಗೂ ಲೋಕಪೂಜಿತರಾಗಿದ್ದಾರೆ ಎಂದು ಸ್ಮರಿಸಿದರು. 

ನಿಸ್ವಾರ್ಥ ಸೇವೆ ನಮ್ಮದಾಗಬೇಕು. ಅನಾಥ, ಬಡವ, ಶೋಷಿತರ ಸೇವೆ ಮಾಡುವುದು ಪರಮಾನಂದ ತಂದು ಕೊಡುತ್ತದೆ. ಇಂತಹ ಕಾರ್ಯ ಮಾಡುತ್ತಿರುವ ನಸೀರ್‌ ಅಹ್ಮದ್‌ ಅವರ ಕಾರ್ಯ ಶ್ಲಾಘನೀಯವಾದದು ಎಂದರು.

ಮೌಲಾನಾ ಇಬ್ರಾಹಿಂ ಸಖಾಫಿ ಮಾತನಾಡಿ, ಶಾಲೆಯಲ್ಲಿನ ಮುಖ್ಯೋಪಾಧ್ಯಾಯರ ಕರ್ತವ್ಯ ದೊಡ್ಡದು. ಉತ್ತಮ ಸಂಸ್ಕಾರ ಇದ್ದರೆ, ಮಕ್ಕಳು ಉತ್ತಮವಾಗಿ ಕಲಿಯುತ್ತಾರೆ ಎಂಬುದನ್ನು ಅರಿತುಕೊಂಡು ನಡೆಯಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಅವರಲ್ಲಿ ಬಸವತತ್ವ, ಭಾವೈಕ್ಯತೆ ತತ್ವ, ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೆಳೆಸಬೇಕು ಎಂದು ತಿಳಿಸಿದರು.

Advertisement

ಸಂಸ್ಥೆಯ ಅಧ್ಯಕ್ಷ ಡಾ| ಸಿ.ಆರ್‌. ನಸೀರ್‌ ಅಹ್ಮದ್‌ ಅಧ್ಯಕ್ಷತೆ ವಹಿಸಿದ್ದರು. ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಅಸದ್‌ ಷರೀಫ್‌ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಿದರು. ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ಮುಸ್ಲಿಂ ಹಾಸ್ಟೆಲ್‌ ಕಾರ್ಯದರ್ಶಿ ಶಮೀರ್‌, ಶಫಿ ಅಹಮ್ಮದ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next