ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣರಿಂದ ಸಂತ್ರಸ್ತರಾಗಿರುವವರಿಗೆ ಅಗತ್ಯವಾದ ಎಲ್ಲ ನೆರವು ನೀಡಬೇಕೆಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಪ್ರಕರಣದಲ್ಲಿನ ಸಂತ್ರಸ್ತರು ನಮ್ಮ ಸಹಾನುಭೂತಿಗೆ ಅರ್ಹರಾಗಿದ್ದು, ನ್ಯಾಯಕ್ಕಾಗಿ ಹೋರಾಟಕ್ಕೆ ಧುಮುಕಿರುವ ಅವರಿಗೆ ನಮ್ಮ ಬೆಂಬಲ ಇರಬೇಕು. ಇಂತಹ ಭಯಾನಕ ಅಪರಾಧಕ್ಕೆ ಕಾರಣವಾಗಿರುವ ಎಲ್ಲ ವ್ಯಕ್ತಿಗಳನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸುವ ಸಂಘಟಿತ ಕರ್ತವ್ಯ ನಮಗಿದೆ ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಹಲವು ವರ್ಷಗಳಿಂದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ. ತಾಯಂದಿರು ಮತ್ತು ಸೋದರಿಯರ ಮೇಲೆ ನಡೆದಿರುವ ಅತ್ಯಾಚಾರಕ್ಕೆ ಕಠಿನ ಶಿಕ್ಷೆಯಾಗಬೇಕು ಎಂದು ರಾಹುಲ್ ಹೇಳಿದ್ದಾರೆ.
2023ರ ಡಿಸೆಂಬರ್‌ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜಿ.ದೇವರಾಜೇಗೌಡ ಅವರು ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಮತ್ತು ಈ ಬಗ್ಗೆಗಿರುವ ದೃಶ್ಯಾವಳಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂತಹ ಕ್ರೌರ್ಯಯುತ ದೌರ್ಜನ್ಯ ನಡೆಸಿದ ಆರೋಪಗಳಿದ್ದರೂ ಸಾಮಾಹಿಕ ಅತ್ಯಾಚಾರಿಯ ಪರ ಪ್ರಧಾನಮಂತ್ರಿ ಚುನಾವಣ ಪ್ರಚಾರ ನಡೆಸಿದ್ದರು. ಇದರ ಜತೆಗೆ ಅರ್ಥಪೂರ್ಣ ತನಿಖೆಯ ಹಳಿ ತಪ್ಪಿಸಲು ಕೇಂದ್ರ ಸರಕಾರ ಉದ್ದೇಶ ಪೂರ್ವಕವಾಗಿ ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಅಪರಾಧದಲ್ಲಿ ಅಡಕವಾಗಿರುವ ವಿಕೃತಿಯ ಗುಣ ಮತ್ತು ಪ್ರಧಾನಿ ಮತ್ತು ಗೃಹ ಸಚಿವರ ಆಶೀರ್ವಾದದಿಂದ ಪ್ರಜ್ವಲ್ ರೇವಣ್ಣವರಿಗೆ ಸಿಕ್ಕಿರುವ ವಿನಾಯಿತಿಯನ್ನು ಖಂಡಿಸಬೇಕಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನ್ಯಾಯದ ಜತೆ ನಿಲ್ಲುವ ವಾಗ್ಧಾನ
ರಾಹುಲ್ ಗಾಂಧಿ ಪತ್ರ ತಲುಪಿದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರ, ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗಳಿಗೆ ಒಪ್ಪಿಸಲಾಗುವುದು. ನೊಂದವರ ಕಣ್ಣೀರು ಒರೆಸುವ ಜತೆಗೆ ಅವರ ನ್ಯಾಯದ ಹೋರಾಟದಲ್ಲಿ ನಮ್ಮ ಸರಕಾರ ಜತೆ ನಿಲ್ಲಲಿದೆ ಎಂಬ ವಾಗ್ಧಾನವನ್ನು ಅವರು ಸಹಿತ ನಾಡಿನ ಪ್ರತಿಯೊಬ್ಬರಿಗೂ ನೀಡುತ್ತಿದ್ದೇನೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.