Advertisement

ಗಾಯಾಳುಗಳ ಜೀವ ಉಳಿಸಲು ಸಹಕರಿಸಿ

05:51 AM Feb 08, 2019 | Team Udayavani |

ದಾವಣಗೆರೆ: ಅಪಘಾತ ಸಂಭವಿಸಿದಾಗ ಮೊದಲು ಗಾಯಗೊಂಡ ವ್ಯಕ್ತಿಯ ಜೀವ ಉಳಿಸುವುದಕ್ಕೆ ಸಹಾಯ ಮಾಡಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ ಉದೇಶ್‌ ಹೇಳಿದರು.

Advertisement

ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಅಪಘಾತವಾದರೆ ಕೂಡಲೇ ಆಸ್ಪತ್ರೆ ಅಥವಾ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಬೇಕು. ಪೊಲೀಸರು ರಕ್ಷಣೆ ಮಾಡಿದವರನ್ನು ಸಾಕ್ಷಿ ಮಾಡುತ್ತಾರೆಂಬ ಭಯ ಬೇಡ. ಅಪಘಾತಕ್ಕೀಡಾದವರ ರಕ್ಷಣೆಗೆ ಮುಂದಾದವರನ್ನು ಸಾಕ್ಷಿಯನ್ನಾಗಿಸಬಾರದೆಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ದೇಶದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನ ರಸ್ತೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಕುಟುಂಬಸ್ಥರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ ಎಂದರು.
 
ಹೆಲ್ಮೆಟ್‌ ಬಳಸದೆ ವಾಹನ ಚಾಲನೆ ಅತ್ಯಂತ ಅಪಾಯಕಾರಿ. ಮಾರ್ಕೆಟ್‌ನಲ್ಲಿ ಪ್ರಸ್ತುತ 500 ರಿಂದ 600 ರೂಗಳಲ್ಲಿ ಉತ್ತಮವಾದ ಐಎಸ್‌ಐ ಮಾರ್ಕ್‌ ಹೆಲ್ಮೆಟ್‌ಗಳು ಲಭ್ಯವಾಗುತ್ತಿವೆ. ಅವುಗಳನ್ನು ಬಳಸಿ ತಮ್ಮ ಪ್ರಾಣ ರಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಗ್ರಾಮೀಣ ಭಾಗಗಳಲ್ಲಿ ಡ್ರಿಂಕ್‌ ಆ್ಯಂಡ್‌ ಡ್ರೈವ್‌ ನಿಂದ ಹೆಚ್ಚು ಅಪಘಾತ ಪ್ರಕರಣ ದಾಖಲಾಗುತ್ತಿವೆ. ಹಾಗಾಗಿ ಕುಡಿದು ವಾಹನ ಚಲಾಯಿಸಬೇಡಿ. ಚಾಲನೆ ಮಾಡುವಾಗ ಮೊಬೈಲ್‌ ಬಳಸಬೇಡಿ. ಟ್ರ್ಯಾಕ್ಟರ್‌ ಮಾಲೀಕರು ಟ್ರೈಲರ್‌ ಹಿಂಭಾಗ ರೇಡಿಯಂ ಸ್ಟಿಕರ್ ಹಾಕಿಸಬೇಕು. ಇದರಿಂದ ನಿಮ್ಮ ವಾಹನದ ಹಿಂದೆ ಚಲಿಸುವವರಿಗೆ ಅನುಕೂಲವಾಗಲಿದೆ ಮತ್ತು ನಿಮ್ಮ ಜೀವಕ್ಕೂ ರಕ್ಷಣೆ ನೀಡಲಿದೆ ಎಂದು ನುಡಿದರು.

ಡಿವೈಎಸ್‌ಪಿ ಡಾ| ದೇವರಾಜ್‌ ಮಾತನಾಡಿ, ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಲೋಕಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಎ.ಎಸ್‌. ಮನು ಮಾತನಾಡಿ, ರೋಗ ಬರುವ ಮುನ್ನ ಮುನ್ನೆಚ್ಚರಿಕೆ ವಹಿಸುವಂತೆ, ಅಪಘಾತವಾದ ಮೇಲೆ ಪರಿತಪಿಸುವುದಕ್ಕಿಂತ ಮುಂಜಾಗ್ರತೆ ವಹಿಸುವುದು ಒಳಿತು ಎಂದರು.

Advertisement

ಜಿಲ್ಲಾ ಪಂಚಾಯತಿ ಸದಸ್ಯ ಓಬಳೇಶ್‌ ಮಾತನಾಡಿ, ಲೋಕಿಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಾವಣಗೆರೆಗೆ ಪದವಿ ವಿದ್ಯಾಭ್ಯಾಸಕ್ಕಾಗಿ ನಿತ್ಯ ಸಂಚಾರ ಮಾಡಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲೋಕಿಕೆರೆ ಗ್ರಾಮದಲ್ಲಿ ಒಂದು ಪದವಿ ಕಾಲೇಜ್‌ ಸ್ಥಾಪನೆ ಮಾಡಬೇಕಿದೆ ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಲೋಕೇಶಪ್ಪ ಮಾತನಾಡಿ, ಆಂಬ್ಯುಲೆನ್ಸ್‌ ಸರಿಯಾದ ಸಮಯಕ್ಕೆ ಬಾರದೇ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ.

ಹಾಗಾಗಿ ಲೋಕಿಕೆರೆ ಗ್ರಾಮದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಸ್ಥಾಪನೆ ಅಗತ್ಯತೆ ಇದೆ. ಗ್ರಾಮದಲ್ಲಿ 50 ರೌಡಿ ಶೀಟರ್‌ಗಳಿದ್ದು, ಅವರೆಲ್ಲರೂ ಪ್ರಸ್ತುತ ಬದಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ರೌಡಿ ಶೀಟರ್‌ನಿಂದ ವಿಮುಕ್ತರನ್ನಾಗಿ ಮಾಡಬೇಕು ಎಂದು ವೇದಿಕೆಯಲ್ಲಿ ಎಎಸ್ಪಿ ಅವರಿಗೆ ಮನವಿ ಮಾಡಿದರು.

ಡಿಎಸ್‌ಎಸ್‌ ಮುಖಂಡ ಬಲ್ಲೂರು ಹನುಮಂತಪ್ಪ ಮಾತನಾಡಿದರು. ಡಿವೈಎಸ್‌ಪಿ ಮಂಜುನಾಥ್‌ ಕೆ. ಗಂಗಲ್‌, ಲೋಕಿಕೆರೆ ಪಿಡಿಒ ಕೆ.ಎಂ ಪ್ರಕಾಶ್‌, ತಾಪಂ ಸದಸ್ಯ ಮುರುಗೇಂದ್ರಪ್ಪ, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ, ವೃತ್ತ ನಿರೀಕ್ಷಕ ಎಚ್‌. ಗುರುಬಸವರಾಜು, ಗ್ರಾಮದ ಮುಖಂಡರಾದ ರಾಮಜ್ಜರ ಓಬಳಪ್ಪ, ಭರಮೇಶಪ್ಪ, ಹದಡಿ ಪೊಲೀಸ್‌ಠಾಣೆ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಲೋಕಿಕೆರೆ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಂದ ರಸ್ತೆ ಸುರಕ್ಷತೆ ಕುರಿತು ಜಾಥಾ ನಡೆಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next