ಕಾರ್ಕಳ: ಸಂತ ಲಾರೆನ್ಸರು ಅಂಗವಿಕಲರು, ಅಶಕ್ತರು, ಬಡವರಿಗೆ ಆಸ್ತಿಯನ್ನು ದಾನ ನೀಡಿ, ಪ್ರೀತಿ ಹಂಚಿದ್ದರು. ಏಸು ಸ್ವಾಮಿಯವರು ಲೋಕದ ಒಳಿತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿ, ತನಗೆ ಜನತೆ ಮೇಲಿರುವ ಮಮತೆಯನ್ನು ಸಾದರಪಡಿಸಿದರು. ಹೀಗೆಯೇ ನಾವೆಲ್ಲರೂ ಪರರ ಒಳಿತನ್ನು ಬಯಸಬೇಕೆಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಬಿಷಪ್ ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಹೇಳಿದರು.
ಅವರು ರವಿವಾರ ಸಂಜೆ ಅತ್ತೂರು ಚರ್ಚ್‌ನಲ್ಲಿ ಮಕ್ಕಳಿಗಾಗಿ ನಡೆದ ಬಲಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪರರ ಸೇವೆಯೇ ಪರಮಾತ್ಮನ ಸೇವೆ. ನಮ್ಮ ಸುತ್ತಮುತ್ತಲಿರುವ ಜನರ ಏಳಿಗೆಗಾಗಿ ಯಾವುದೇ ರೀತಿಯ ತ್ಯಾಗ-ಸೇವೆ ನೀಡಲು ಹಿಂಜರಿಯಬಾರದು ಎಂದು ಹೇಳಿದರು.
ಶಿರ್ವ ಆರೋಗ್ಯ ಮಾತಾ ಚರ್ಚ್ ಹಾಗೂ ಶಿರ್ವ ವಲಯ ಪ್ರಧಾನ ಧರ್ಮಗುರು ಫಾ| ಡೇನಿಸ್ ಡೇಸಾ, ಉಡುಪಿ ಧರ್ಮಪ್ರಾಂತ ದಿವ್ಯಜ್ಯೋತಿ ಕೇಂದ್ರದ ನಿರ್ದೇಶಕ ಫಾ| ಸ್ಟೀವನ್ ಡಿ’ಸೋಜಾ, ಕಾರ್ಕಳ ವಲಯ ಪ್ರಧಾನ ಧರ್ಮಗುರು ಫಾ| ಜೊಸ್ವಿ ಫೆರ್ನಾಂಡಿಸ್ ಸಹಿತ 20 ಧರ್ಮಗುರುಗಳು ಉಪಸ್ಥಿತರಿದ್ದರು.
ಜನಸಾಗರ
ಜಾತ್ರೆಯ ಪ್ರಥಮ ದಿನದಂದೇ ಆಡಳಿತ ಸಮಿತಿಯವರ ನಿರೀಕ್ಷೆಗಿಂತ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಕರಾವಳಿ ಜಿಲ್ಲೆ ಮಾತ್ರವಲ್ಲದೆ ವಿವಿಧೆಡೆಗಳಿಂದ ಭೇಟಿ ನೀಡಿದ್ದರು. ದೂಪದ ಕಟ್ಟೆ, ಶಿಲುಬೆಗುಡ್ಡೆ, ಸಂತ ಲಾರೆನ್ಸ್‌ನ ಒಟ್ಟು 12 ಕಡೆ ಪಾರ್ಕಿಂಗ್‌ಗೆ ಅಣಿಗೊಳಿಸಿದ ಮೈದಾನಗಳಲ್ಲಿ ವಾಹನ ದಟ್ಟಣೆಯಿತ್ತು.