Advertisement

ಹೆಲ್ಪ್ ಮಾಡ್ತೀನಿ ಅಂದವ ಕಾಪಿ ಚೀಟಿ ಕೊಟ್ಟ!

03:45 AM Apr 25, 2017 | |

ನಾನು ಏಳನೆಯ ತರಗತಿಯಲ್ಲಿದ್ದೆ. ಅನಾರೋಗ್ಯದ ನಿಮಿತ್ತ ಮೊದಲ ಆರು ತಿಂಗಳು ಶಾಲೆಗೆ ಹೋಗದೆ, ನೇರವಾಗಿ ಅರ್ಧ ವಾರ್ಷಿಕ ಪರೀಕ್ಷೆಗೆ ಹಾಜರಾದೆ. ಪರೀಕ್ಷೆಗೆ ಇನ್ನು ಕೆಲದಿನಗಳಿರುವಾಗಲೇ ಸ್ನೇಹಿತನೊಬ್ಬನ ಮುಂದೆ ಅನಾರೋಗ್ಯದ ಕಾರಣ ಹೇಳಿ- “ಪರೀಕ್ಷೆಗೆ ತಯಾರಿ ಮಾಡ್ಕೊಂಡಿಲ್ಲ. ಹೇಗೆ ಪರೀಕ್ಷೆ ಬರೆಯಲಿ? ನನಗೆ ಭಯವಾಗುತ್ತಿದೆ’ ಎಂದೆ. ಅವನು “ಹೆದರಬೇಡ. ನನ್ನ ನಂಬರ್‌ ನಿನ್ನ ಅಕ್ಕಪಕ್ಕದಲ್ಲೇ ಬರುತ್ತದೆ. ನೀನು ಪಾಸ್‌ ಆಗುವಷ್ಟು ನಾನು ತೋರಿಸುತ್ತೇನೆ’ ಎಂದು ಹೇಳಿ ನನಗೆ ಸ್ವಲ್ಪ ಧೈರ್ಯ ನೀಡಿದ. ನನಗೂ ಸ್ವಲ್ಪ ಧೈರ್ಯ ಬಂದಂತಾಯ್ತು. 

Advertisement

ಅಂದು ಗಣಿತ ಪರೀಕ್ಷೆ ಇತ್ತು. ಪರೀಕ್ಷಾ ಕೇಂದ್ರಕ್ಕೆ ಹೋದೆ. ನನ್ನ ಗೆಳೆಯ ಹೇಳಿದ ಹಾಗೆ ನನ್ನ ಮತ್ತು ಅವನ ನಂಬರ್‌ ಒಂದೇ ಕೊಠಡಿಯಲ್ಲಿ ಅಕ್ಕಪಕ್ಕವೇ ಬಂದಿತ್ತು. ನನಗೆ ಮತ್ತಷ್ಟು ಧೈರ್ಯ ಬಂದಂತಾಯ್ತು. ಪ್ರಶ್ನೆಪತ್ರಿಕೆ ಕೊಟ್ಟ ನಂತರ ಎಲ್ಲರೂ ಉತ್ತರ ಬರೆಯಲು ಪ್ರಾರಂಭಿಸಿದರು. ನಾನು ಸಹ ನನಗೆ ಬರುವಷ್ಟು ಬರೆದು, ನನ್ನ ಗೆಳೆಯನಿಗೆ ಉತ್ತರ ತೋರಿಸುವಂತೆ ಕೇಳಿದೆ. ಅವನು ತನ್ನ ಹತ್ತಿರವಿದ್ದ ಕಾಪಿ ಚೀಟಿ ಕೊಟ್ಟು, ಅದನ್ನು ನೋಡಿ ಬರೆಯಲು ಹೇಳಿದ. ಕಾಪಿ ಚೀಟಿ  ಕೈಗೆ ಬಂದ ಮೇಲೆ ಹೆದರಿಕೆ, ಆತಂಕ ಶುರುವಾಯ್ತು. ನಾನು ಅವನಿಂದ ಕಾಪಿ ಚೀಟಿಯ ಸಹಾಯವನ್ನು ನಿರೀಕ್ಷಿಸಿರಲಿಲ್ಲ. ಕೈ ನಡುಗಲು ಪ್ರಾರಂಭವಾಯ್ತು. ಸ್ನೇಹಿತನಿಗೆ- “ನಾನೆಂದೂ ಕಾಪಿ ಮಾಡಿ ಬರೆದವನಲ್ಲ. ಹೆದರಿಕೆಯಾಗುತ್ತಿದೆ. ಇಪ್ಪತ್ತು ಅಂಕದ್ದು ತೋರಿಸಿಬಿಡು ಸಾಕು. ಕಾಪಿ ಚೀಟಿ ಬೇಡ’ ಎಂದೆ. ಅವನು “ಸುಮ್ಮನೆ ಬರೀ’ ಎಂದು ಗದರಿ ಮತ್ತೂಂದು ಕಾಪಿ ಚೀಟಿಯನ್ನು ನನ್ನ ಕೈಗಿಟ್ಟ! 

ನನ್ನ ಭಯ ಮುಗಿಲಿನಷ್ಟಾಯಿತು. ಅಷ್ಟರಲ್ಲಿಯೇ ಪರೀಕ್ಷಾ ಸೂಪರ್‌ವೈಸರ್‌ ಬಂದ್ರು. ಕಾಪಿ ಚೀಟಿಯನ್ನು ಕಿಸೆಯೊಳಗೆ ಬಚ್ಚಿಟ್ಟೆ. ಸಿಕ್ಕಿ ಬೀಳುತ್ತೇನೆಂಬ ಭಯ ಇಮ್ಮಡಿಯಾಯ್ತು. ಮೂರು ಗಂಟೆಗಳ ಕಾಲ ಏನನ್ನೂ ಬರೆಯದೆ ಕಾಪಿ ಚೀಟಿ ಸಹ ಹೊರಗೆ ತೆಗೆಯಲಿಲ್ಲ. ಸುಮ್ಮನೆಯೇ ಕಾಲಹರಣ ಮಾಡಿದೆ. ಕಡೆಗೆ ಪರೀಕ್ಷಾ ಅವಧಿ ಮುಗಿದಾಗ ಖಾಲಿ ಉತ್ತರ ಪತ್ರಿಕೆಯನ್ನು ಕೊಟ್ಟು ಹೊರಗಡೆ ಬಂದೆ. ಆಚೆ ನಿಂತಿದ್ದ ಸ್ನೇಹಿತರು ಪರೀಕ್ಷೆ ಹೇಗಾಯ್ತು ಅಂತಾ ಕೇಳಿದರು. ನಾನು ನಡೆದ ಸಂಗತಿ ವಿವರಿಸಿದೆ. ಎಲ್ಲರೂ “ಕಾಪಿ ಮಾಡಲೂ ಬರಲ್ವಲ್ವೋ’ ಅಂತ ಗೇಲಿ ಮಾಡಿದರು. ಇತ್ತ ಖಾಲಿ ಪೇಪರ್‌ ಕೊಟ್ಟಿದ್ದಕ್ಕೆ ಶಿಕ್ಷಕರೂ ಬೈದರು. ಅವರಿಗೆ ನನ್ನ ಅನಾರೋಗ್ಯ ಕುರಿತು ಗೊತ್ತಿದ್ದರಿಂದ ಫೇಲ… ಮಾಡಲಿಲ್ಲ. ನಾನು ಕಾಪಿ ಮಾಡದೇ ಇದ್ದುದೇ ಒಳ್ಳೆಯದಾಯೆನನ್ನ ಒಳಮನಸ್ಸು ಹೇಳುತ್ತಿತ್ತು. ಬದುಕಿನಲ್ಲಿ ಅಂದು ನಾನು ಪಾಠ ಕಲಿತಿದ್ದೆ. ಇನ್ಯಾವತ್ತೂ ಕಾಪಿ ಮಾಡಬಾರದು ಎಂದು ನಿಶ್ಚಯಿಸಿದೆ.

-ಶ್ರೀರಂಗ ಪುರಾಣಿಕ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next