Advertisement
ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ದೇಶದ ರಾಜಧಾನಿ ದಿಲ್ಲಿ ಸೇರಿ ಬಹುತೇಕ ರಾಜ್ಯಗಳಲ್ಲಿ ಅಧಿಕೃತವಾಗಿ ಲಾಕ್‌ಡೌನ್ ಘೋಷಿಸಿ ಬಡವರ್ಗಕ್ಕೆ ಆಹಾರ ಧಾನ್ಯಗಳ ಕಿಟ್ ಸೇರಿದಂತೆ ಆರ್ಥಿಕ ನೆರವು ಸಹ ಘೋಷಿಸಲಾಗಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಬಡವರ್ಗದ ನೆರವಿಗೆ ನಿಲ್ಲಬೇಕಾಗಿರುವುದು ಯಾವುದೇ ಒಂದು ರಾಜ್ಯ ಸರಕಾರದ ಕರ್ತವ್ಯ ಸಹ. ಆರ್ಥಿಕ ಪರಿಸ್ಥಿತಿ ಏನೇ ಇದ್ದರೂ ದೊಡ್ಡ ಪ್ರಮಾ ಣದ ಯೋಜನೆ ಒಂದು ಅಥವಾ ಎರಡು ವರ್ಷದ ಮಟ್ಟಿಗೆ ಸ್ಥಗಿತಗೊಳಿಸಿ ತತ್‌ಕ್ಷಣದ ಆದ್ಯತೆಯಾಗಿ ಆರೋಗ್ಯ ಸೇವೆ ಹಾಗೂ ಬಡಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಮುಂದಡಿ ಇಡಬೇಕಾಗಿದೆ.
Related Articles
Advertisement
ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಪಡಿತರ ಹೆಚ್ಚಳ, ಆರ್ಥಿಕ ನೆರವಿನ ಪ್ಯಾಕೇಜ್‌ನಿಂದ ಸ್ವಲ್ಪ ಮಟ್ಟಿಗೆ ಬಡವರ್ಗ ನಿರಾಳವಾಗಿತ್ತು. ಈ ಬಾರಿ ಪ್ಯಾಕೇಜ್ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಬಹುತೇಕ ಒಂದು ತಿಂಗಳು ವಾರಾಂತ್ಯ ಕರ್ಫ್ಯೂ, ಸಂಪೂರ್ಣ ಕರ್ಫ್ಯೂ, ಲಾಕ್‌ಡೌನ್ ಮಾದರಿ ಕರ್ಫ್ಯೂ ಜಾರಿಯಾದಂತಾಗುತ್ತದೆ. ಒಂದು ತಿಂಗಳು ದುಡಿಮೆ ಇಲ್ಲದೆ ಶ್ರಮಿಕವರ್ಗ, ಬಡವರ್ಗ ಜೀವನ ನಡೆಸುವುದು ಕಷ್ಟ. ಮನೆ ಬಾಡಿಗೆ, ದೈನಂದಿನ ಮನೆಯ ವೆಚ್ಚಕ್ಕೆ ದಾರಿ ಕಾಣದಂತಾಗಿದೆ. ಹೀಗಾಗಿ ರಾಜ್ಯ ಸರಕಾರ ಬಡವರ್ಗ ಹಾಗೂ ಶ್ರಮಿಕ ವರ್ಗದ ಹಿತಾಸಕ್ತಿ ಗಮನ ದಲ್ಲಿಟ್ಟುಕೊಂಡು ಆ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಹಾಗೂ ಮುಕ್ತ ಮನಸ್ಸಿನಿಂದ ಯೋಚಿಸಬೇಕಾಗಿದೆ. ಆದಷ್ಟು ಶೀಘ್ರ, ಅಂದರೆ ಇಂದು ನಾಳೆಯೊಳಗೆ ತೀರ್ಮಾನ ತೆಗೆದುಕೊಂಡಷ್ಟು ಈ ದುಡಿಯುವ ವರ್ಗಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.