ಬೇಲೂರು: ರಸ್ತೆ ಸುರಕ್ಷಿತ ಸಪ್ತಾಹದ ಅಂಗವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಆಟೋ ಚಾಲಕರಿಗೆ ಹಾಗೂ ಬೈಕ್ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದ ಪಿಎಸ್‌ಐ ಎಸ್.ಜಿ.ಪಾಟೀಲ್, ಈಗಾಗಲೇ ರಸ್ತೆ ಸುರಕ್ಷತೆ ಅಂಗವಾಗಿ ಶಾಲಾ ಕಾಲೇಜಿನಲ್ಲಿ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದೇವೆ. ಶುಕ್ರವಾರದಿಂದ ಪಟ್ಟಣದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವುದರ ಜೊತೆಗೆ ದಂಡದ ಬದಲು ಹೆಲ್ಮೆಟ್ ನೀಡುವಂತಹ ಕೆಲಸವನ್ನು ನಮ್ಮ ವರಿಷ್ಠಾಧಿಕಾರಿಗಳು ಹಾಗೂ ವೃತ್ತನಿರೀಕ್ಷಕರ ಆದೇಶದ ಮೇರೆಗೆ ಚಾಲನೆ ನೀಡಲಾಗುತ್ತಿದೆ ಎಂದರು.
18 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆವಾಹನ ನೀಡಬಾರದು, ಅಂತಹ ಪ್ರಕರಣ ಕಂಡುಬಂದಲ್ಲಿ ವಾಹನವನ್ನು ವಶಪಡಿಸಿ ಕೊಳ್ಳಲಾಗುವುದು. ಅಲ್ಲದೆ, ಯಾವುದೇ ಕಾರಣಕ್ಕೂ ಡಿಎಲ್ ಹಾಗೂ ಇನ್ಶೂರೆನ್ಸ್, ದಾಖಲಾತಿ ಇಲ್ಲದೆ ವಾಹನ ಚಲಾಯಿಸ ಬಾರದು, ಆಟೋ ಚಾಲಕರಿಗೂ ವಿಶೇಷ ತರಬೇತಿ ನೀಡಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಿದರು.
ಇದನ್ನೂ ಓದಿ :ತೆರಿಗೆ ಸಂಗ್ರಹ ಗುರಿ ಸಾಧಿಸಲು ಗ್ರಾಪಂಗಳಿಗೆ ಡೆಡ್‌ಲೈನ್
ಈ ಸಂದರ್ಭದಲ್ಲಿ ದಂಡ ವಿಧಿಸುವ ಬದಲು ಅವರಿಗೆ ಹೆಲ್ಮೆಟ್ ವಿತರಿಸಿದರು. ಇದೇ ಸಮಯದಲ್ಲಿ ಎ.ಎಸ್.ಐ ಮೂಡಲಗಿರಿಯಪ್ಪ, ಸಿಬ್ಬಂದಿ ವಿರೂಪಾಕ್ಷ, ಮನು, ಕುಮಾರ್, ಉಮೇಶ್ ಇನ್ನು ಮುಂತಾದವರು ಹಾಜರಿದ್ದರು.