“ಬಿಗ್ ಬಾಸ್’ ಮನೆಯಿಂದ ವಾಪಸ್ಸು ಬಂದ ನಂತರ ಮೋಹನ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇನ್ನು ಅವರು ಯಾವುದೇ ಸಿನಿಮಾ ಮಾಡುತ್ತಿರುವ ಸುದ್ದಿಯೂ ಇರಲಿಲ್ಲ. ಹೀಗಿರುವಾಗಲೇ ಮೋಹನ್, “ಹಲೋ ಮಾಮ’ ಎನ್ನುವ
ಚಿತ್ರವನ್ನು ಸದ್ದಿಲ್ಲದೆ ಆಷಾಢಕ್ಕೆ ಮುನ್ನವೇ ಶುರು ಮಾಡಿದ್ದಾರೆ. ಸದ್ಯದಲ್ಲೇ ತಮ್ಮ ತಂಡವನ್ನು ಕಟ್ಟಿಕೊಂಡು ಚಿತ್ರೀಕರಣಕ್ಕೂ ಹೊರಡಲಿದ್ದಾರೆ.
ಎಲ್ಲಾ ಸರಿ, “ಬಿಗ್ ಬಾಸ್’ ಮನೆಯಿಂದ ಬಂದ ನಂತರ ಮಾಯವಾಗಿದ್ದಾದರೂ ಎಲ್ಲಿಗೆ ಎಂದರೆ, “ಅಲ್ಲಿಂದ ಬರುತ್ತಿದ್ದಂತೆ ಸ್ಕ್ರಿಪ್ಟ್ ಕೆಲಸದಲ್ಲಿ ಕೂತೆ. ಎಲ್ಲಾ ಸರಿ ಹೋಗಿದ್ದರೆ, ಬಿ.ಎನ್. ಗಂಗಾಧರ್ ಅವರ ನಿರ್ಮಾಣದಲ್ಲಿ “ಮನೆಗೊಬ್ಬ ಮನೆಹಾಳ’ ಎಂಬ ಚಿತ್ರ ನಿರ್ದೇಶಿಸಬೇಕಿತ್ತು. ಸೆಪ್ಟೆಂಬರ್‌ನಲ್ಲಿ ಅವರ ಮಗನ ಮದುವೆ ಇರುವುದರಿಂದ, ಮದುವೆ ಮುಗಿದ ನಂತರ ಚಿತ್ರ ಶುರು ಮಾಡುವುದಾಗಿ ಹೇಳಿದರು. ಈ ಮಧ್ಯೆ “ಹಲೋ ಮಾಮ’ ಕಥೆ ಬರೆದೆ. ಅರವಿಂದ್ ಚಂದ್ರಶೇಖರ್ ಅಂತ ನಿರ್ಮಾಪಕರನ್ನು ಕರೆದುಕೊಂಡು ಬಂದರು. ಈ ಕಥೆ ಅವರಿಗೆ ಬಹಳ ಇಷ್ಟವಾಯಿತು. ಸರಿ, ಚಿತ್ರ ಶುರುವಾಗಿದೆ’ ಎಂದರು ಮೋಹನ್.
“ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ತಮ್ಮ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು ಎನ್ನುತ್ತಾರೆ ಮೋಹನ್. “ಇತ್ತೀಚೆಗೆ ಕೆಲವು ಸೋಲುಗಳು ಮತ್ತು ಗ್ಯಾಪ್‌ನ ನಂತರ ಜನಪ್ರಿಯತೆ ಕಡಿಮೆಯಾಗಿತ್ತು. “ಬಿಗ್ ಬಾಸ್’ ಮನೆಗೆ ಹೋಗಿ ಬಂದಿದ್ದೇ ಬಂದಿದ್ದು, ಸ್ಕೂಲ್ ಮಕ್ಕಳು ಸಹ ಗುರುತಿಸುತ್ತಾರೆ. ಎಷ್ಟೋ ಮಕ್ಕಳು ಮನೆಗೆ ಬಂದು ಫೋಟೋ ತೆಗೆಸಿಕೊಂಡು ಹೋಗಿದ್ದಾರೆ. ಇದುವರೆಗೂ ಚೆನ್ನಾಗಿ ಬರೀತೀರಿ, ಚೆನ್ನಾಗಿ ನಟನೆ ಮಾಡ್ತೀರಿ ಅಂತ ಎಷ್ಟೋ ಜನ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಆದರೆ, ಅನಾಗರಿಕರ ಜೊತೆಗೆ ನಾಗರಿಕರ ತರಹ ಇದ್ದು ಬಂದಿದ್ದೀರಿ ಎಂಬ ದೊಡ್ಡ ಪ್ರಶಂಸೆ ಸಿಕ್ಕಿದೆ. “ಬಿಗ್ ಬಾಸ್’ ಮನೆಯಲ್ಲಿ ಇರುವುದು ಅಷ್ಟು ಸುಲಭವಲ್ಲ. ಮನೆಯವರ ಜೊತೆಗೇ ಒಂದಿಷ್ಟು ಸಮಯ ಕಳೆಯೋದು ಕಷ್ಟ. ಹಾಗಿರುವಾಗ ಅಪರಿಚಿತರ ಜೊತೆಗೆ ನೂರು ದಿನಗಳ ಕಾಲ ನಡೆಯೋದು ಎಷ್ಟು ಕಷ್ಟ ಯೋಚಿಸಿ. ಸಂಯಮ, ಎನರ್ಜಿ ಎಲ್ಲಾ ಪರೀಕ್ಷೆ ಆಗುತ್ತೆ ಅಲ್ಲಿ. ಅಂತಹ ಕಡೆ ಮರ್ಯಾದೆ ಹೆಚ್ಚಿಸಿಕೊಂಡು ಬರುವುದು ಅಷ್ಟು ಸುಲಭವಲ್ಲ. ಆ ಕೆಲಸ ಮಾಡಿದ್ದೀನಿ ಅಂತ ಖುಷಿ ನನಗೆ ಇದೆ’ ಎನ್ನುತ್ತಾರೆ ಮೋಹನ್.
“ಬಿಗ್ ಬಾಸ್’ ಮುಗಿದ ಮೇಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವರೆಲ್ಲರೂ, ಚಾನಲ್‌ನಲ್ಲೇ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬಿಝಿಯಾದರು. ಮೋಹನ್ ಮಾತ್ರ ಆಗಲಿಲ್ಲ. ಏನು ಕಾರಣ? “ಅದು ಕೆಲವರಿಗೆ ಅವಶ್ಯಕತೆ ಇತ್ತು. ನನಗೆ ಇಲ್ಲ. ನಾನು ಕಾರ್ಯಕ್ರಮಕ್ಕೆ ಹೋಗುವಾಗಲೇ ಮೋಹನ್ ಆಗಿಯೇ ಹೋಗಿದ್ದೆ. ನನಗೆ ಆ್ಯಂಕರಿಂಗ್ ಮಾಡುವುದಕ್ಕೆ ಇಷ್ಟವಿಲ್ಲ. ಸಿನಿಮಾ ನಿರ್ದೇಶನ ಮಾಡಬಹುದು,ಸೀರಿಯಲ್ ನಿರ್ದೇಶನ ಮಾಡುವುದು ಹಿಂಸೆ.
ಹಾಗಾಗಿ ನಾನು ಆ ಕಡೆ ಹೋಗಲಿಲ್ಲ ಸ್ಕ್ರಿಪ್ಟ್ ಕೆಲಸದಲ್ಲಿ ಕೂತೆ. ಈಗ ನನ್ನ ಬಳಿ ಮೂರ್‍ನಾಲ್ಕು ಕಥೆಗಳಿವೆ. ಬೇರೆ ಬೇರೆ ಜಾನರ್‌ಗಳ ಕಥೆ. ಇನ್ನು ಒಂದರ ಹಿಂದೊಂದು ಚಿತ್ರ ಮಾಡ್ತಾ ಇರೋದೇ. ಈ “ಹಲೋ ಮಾಮ’ ಚಿತ್ರದಿಂದ ಡಿಫರೆಂಟ್ ಮೋಹನ್ ಸಿಗುತ್ತಾರೆ ಎಂದು ಮಾತ್ರ ಹೇಳಬಲ್ಲೆ. ಇದುವರೆಗೂ ಸ್ವಲ್ಪ ಮೈಚಳಿ ಇತ್ತು. ಇದೀಗ ಚಳಿ ಬಿಟ್ಟಿದ್ದೀನಿ. ಸ್ವಲ್ಪ ನಾಟಿಯಾಗಿದ್ದೀನಿ. ಮಡಿ ಮೈಲಿಗೆ ಎಲ್ಲಾ ಬಿಟ್ಟು ಪೆನ್‌ಗೆ ಸ್ವತಂತ್ರ ಕೊಡೋಣ ಅಂತಿದ್ದೀನಿ. ಇದಕ್ಕೆ ವಿಜಯಪ್ರಸಾದ್ ಅವರೇ ಸ್ಫೂರ್ತಿ. “ನೀರ್ ದೋಸೆ’ ಚಿತ್ರವನ್ನ ನೋಡಿ ನನಗೆ ಈ ನಂಬಿಕೆ ಬಂತು. ಹಾಗಾಗಿ ಅವರಿಗೊಂದು ವಿಶೇಷ ಥ್ಯಾಂಕ್ಸ್’ ಎಂದು ಧನ್ಯವಾದ ಸಲ್ಲಿಸುತ್ತಾರೆ ಅವರು. ಇನ್ನು “ಹಲೋ ಮಾಮ’ ಚಿತ್ರದಲ್ಲಿ ಅವರು ಮಾಮಾಗಿರಿಯ ಬಗ್ಗೆ ಹೇಳುವುದಕ್ಕೆ ಹೊರಟಿದ್ದಾರಂತೆ. “ಸರಳವಾಗಿ ಹೇಳಬೇಕು ಎಂದರೆ, ಶಾಸೊOಉàಕ್ತವಾಗಿ ಹೆಣ್ಣು ಕೊಟ್ಟರೆ ಅವನು ಮಾವ, ಶಾಸೊOಉàಕ್ತವಾಗಿ ಹೆಣ್ಣು ಕೊಡದಿದ್ದರೆ ಅವನು ಮಾಮ ಅಂತ ಅರ್ಥ. ಚಿತ್ರದಲ್ಲಿ ಯಾವ್ಯಾವ ತರಹ ಮಾಮಾಗಿರಿ ಇದೆ ಎನ್ನುವುದನ್ನು ಹೇಳುವುದಕ್ಕೆ ಹೊರಟಿದ್ದೀನಿ. ಇಲ್ಲಿ ನಾನೇ ಮಾಮ ಪಾತ್ರವನ್ನೂ ಮಾಡುತ್ತಿದ್ದೀನಿ. ಮಾಮಗಿರಿಯ ಕುರಿತು ತಮಾಷೆಯಾಗಿ ಹೇಳುವುದರ ಜೊತೆಗೆ, ಇಲ್ಲಿ ಅಂತಹವರ ನೋವನ್ನೂ ಹೇಳುವ ಪ್ರಯತ್ನ ಮಾಡುತ್ತಿದ್ದೀನಿ. ಮಾಮಗಳು ಎಲ್ಲರಿಗೂ ಬೇಕು. ಆದರೆ, ಯಾರಿಗೂ ಅವರೊಂದಿಗೆ ಗುರುತಿಸಿಕೊಳ್ಳುವುದಕ್ಕೆ ಇಷ್ಟವಿರುವುದಿಲ್ಲ. ಚಿತ್ರದ ಪೂರಾ ನಗು ಇರುತ್ತದೆ. ಕೊನೆಯಲ್ಲಿ ಒಂದು ಒಳ್ಳೆಯ ಸಂದೇಶವಿರುತ್ತದೆ’ ಎನ್ನುತ್ತಾರೆ.
ಚಿತ್ರದಲ್ಲಿ ಅರವಿಂದ್ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಾಂಪ್ರತ, ಭೂಮಿಕಾ,
ಸೌಜನ್ಯ ಮುಂತಾದವರು ನಟಿಸುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಪ್ರಸಾದ್ ಬಾಬು ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತರೆ, ಧರಂದೀಪ್ ಎನ್ನುವವರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರವನ್ನು ಒಂದೇ
ಹಂತದಲ್ಲಿ ಮುಗಿಸಿ, ಮೂರು ತಿಂಗಳೊಳಗೆ ಚಿತ್ರ ಮಾಡಬೇಕೆಂಬ ಯೋಚನೆ ಮೋಹನ್‌ಗಿದೆ.
– ಚೇತನ್ ನಾಡಿಗೇರ್