ನಮಗಾಗಿ ಏನೇನನ್ನೆಲ್ಲಾ ಮಾಡಿ, ಏನನ್ನೂ ಮಾಡಿಲ್ಲವೆಂಬಂತೆ ಸರಳವಾಗಿಯೇ ಬದುಕುವ ಅಧ್ಯಾಪಕರ ವೃಂದವನ್ನು ಟೀಚರ್ಸ್ ಡೇ ದಿನ ಮಾತ್ರ ಸ್ಮರಿಸಿ, ಮತ್ತೆ ಮರೆತುಬಿಟ್ಟರೆ ಆದೀತೆ? ಅವರು ನಿತ್ಯವೂ ನೆನಪಾಗಬೇಕು.
ಟೀಚರ್, ಮೇಡಂ, ಮಿಸ್, ಸರ್, ಉಸ್ತಾದ್, ಮಾಸ್ಟರ್, ಮೇಷ್ಟ್ರು, ಮ್ಯಾಮ…,ಟೀಚಾ,…ಹೀಗೆ ದಕ್ಕುವ ಭಾವದಿಂದೆಲ್ಲಾ ನಿಮ್ಮನ್ನು ಕರೆದಿದ್ದೇವೆ. ನೀವು ದಿಕ್ಕು ತೋರಿದ್ದೀರಿ. ಅದಕ್ಕಾಗಿ ಧನ್ಯವಾದ. ನೀವು ನಕ್ಕಾಗ ಜೊತೆಗೆ ನಕ್ಕು, ಕುಣಿದಾಗ ಕುಣಿದು, ಗದರಿ ಹೊಡೆದಾಗ ಮುಖ ಸಿಂಡರಿಸಿ, ತರಗತಿ ಮುಗಿಯುತ್ತಲೇ ನಿಮ್ಮನ್ನೇ ಇಮಿಟೇಟ್ ಮಾಡಿ ನಗುವಾಗಿದ್ದೇವೆ. ತಪ್ಪುಗಳನ್ನು ತಿದ್ದುವ ಒಪ್ಪಂದಕ್ಕೆ ಸಹಿ ಹಾಕಿದ ತಾವುಗಳಲ್ಲಿ ಕ್ಷಮೆಗೂ ಮೀರಿದ ಕ್ಷಮತೆಯಿದೆ, ಆದ್ರì ಭಾವವಿದೆ. ಮಗುವಾಗುವ, ನಗು ಹುಟ್ಟಿಸುವ ಕಲೆಯಿದೆ, ಅಮ್ಮನ ಅನುಕಂಪ, ಅಪ್ಪನ ಕಾಳಜಿ ತುಂಬಿರುವ ಸಂತರು ನೀವು. ಕ್ಷಮೆ ಕೇಳದವರ ಕ್ಷೇಮ ಬಯಸುವ ಪವಿತ್ರ ಮನಸ್ಸಿನವರು ನೀವು.
ಆದರೂ ಮಕ್ಕಳು ಅಮ್ಮನಲ್ಲಿ ಕ್ಷಮೆ ಕೇಳುವ ಪ್ರಸಂಗ ಇದೆಯೇ? ಕೆಲವೊಂದು ಸಂಬಂಧಗಳೇ ಹಾಗೆ, ಮುಂದೆ ನಿಂತು, ಕ್ಷಮಿಸಿ ಎಂದರೆ – ಸಂಬಂಧ ಬಿರುಕು ಬಿಡುವ ಸೂಚನೆಯದು. ಮಕ್ಕಳು ಹೆಚ್ಚು ಮನಸ್ಸು ಬಿಚ್ಚಿ ಮಾತಾಗುವುದು ಅಮ್ಮನ ಮಡಿಲಲ್ಲಿ, ಅಲ್ಲಿ ತರಲೆ ಹಠ, ಕೋಪ, ವಿನಂತಿ ಎಲ್ಲವೂ ಇರುತ್ತವೆ. ಅದು ಶಾಲೆಯಲ್ಲೂ ಮುಂದೆ ಸಾಗುತ್ತದೆ. ಅದಕ್ಕೆಂದೇ ಇರಬೇಕು; ಅಮ್ಮಂದಿರ ಮಡಿಲಾಚೆ ಜಿಗಿದ ಪುಟ್ಟ ಮಕ್ಕಳು ಶಾಲೆಗೆ ಬರುವುದು. ಅಲ್ಲಿ ಅವರಿಗಾಗಿ ಕಾದಿರುತ್ತಾರೆ ಅಮ್ಮನಂಥ ಶಿಕ್ಷಕರು!
ಬದುಕಿನುದ್ದಕ್ಕೂ ಶಿಕ್ಷಕರು ಜೊತೆಯಾಗಿ ಬರುತ್ತಾರೆ. ನಡೆಯಾಗಿ, ನುಡಿಯಾಗಿ, ನೆನಪಾಗಿ. ನನಗೆ ಕಲಿಸಿದ ಅಧ್ಯಾಪಕ ವೃಂದ, ನೂರಾರು ಕವಲುಗಳಲ್ಲಿ ಪದೇ ಪದೆ ನೆನಪಾಗುತ್ತಿರುತ್ತಾರೆ. ನಮ್ಮ ಮನೆಯ ಯಾರೇ ಸಿಕ್ಕರೂ ನನ್ನನ್ನು ನೆನಪಿಸಿಕೊಂಡು, ಅವನನ್ನು ಕೇಳಿದೆನೆಂದು ಹೇಳಿ ಎಂದು ನೆನಪ ರವಾನಿಸಿ ಬಾಲ್ಯಕ್ಕೆ ತಳ್ಳುವ ರಮಿಝಾಬಿ ಟೀಚರ್, ನೂರು ಬಾರಿ ಇಂಪೊಸಿಶನ್ ಬರೆಸುತ್ತೇನೆಂದು ಗದರಿಸಿಯೇ ಪ್ರಮೇಯದ ಐದು ಅಂಕ ಖಾತರಿ ಪಡಿಸಿದ ಸದಾಶಿವ ಸರ್, ಮನೆಯಲ್ಲಿ ಗೋಳು ಹೊಯ್ದುಕೊಳ್ಳಲು ಮಕಿರ್ತಾರೆ, ಇಲ್ಬಂದ್ರೆ ನೀವು ಎನ್ನುತ್ತಾ ಭುಜಕ್ಕೆ ಕೈ ಹಾಕಿ ವರಾಂಡವಿಡೀ ನಡೆದಾಡುತ್ತಿದ್ದ ಜಯಶ್ರೀ ಮೇಡಂ, ಮುಖ ನೋಡಿ ಮನಸ್ಸು ಓದುತ್ತಿದ್ದ ಮುಸ್ತಾಫ ಉಸ್ತಾದ್, ಆ ಕಾಲಕ್ಕೇ ಸ್ಯಾಂಟ್ರೋ ಕಾರಲ್ಲಿ ಬಂದು ಅಚ್ಚರಿ ಮೂಡಿಸಿದ, ಒಮ್ಮೆ ಉಟ್ಟ ಉಡುಪನ್ನು ಮತ್ತೆ ಉಡದ ಅಥವಾ ಆ ರೀತಿ ಮಟ್ಟಸವಾಗಿ ಬರುವ, ಶನಿವಾರ ಆದಿತ್ಯವಾರ ಸ್ಪೆಶಲ್ ಕ್ಲಾಸ್ ನೆಪದಲ್ಲಿ ನಮ್ಮ ಮುಗª ಶಾಪಕ್ಕೆ ತುತ್ತಾದ, ಪ್ಯಾಂಟ್ ಝಿಪ್ ಹಾಕುವಲ್ಲಿಂದ ಬದುಕು ಕಟ್ಟುವವರೆಗೂ ಕಾಳಜಿಯ ಮಳೆ ಹೊಯ್ದ, ಮುಂಜಾನೆ ಸಮಯಕ್ಕೆ ಮೊದಲೇ ನಡೆದೇ ಬರುವ, ಸಂಜೆ ಹೋಗುವ ಹೊತ್ತಿಗೆ ಮೈಯಿಡೀ ಚಾಕ್‌ಪೀಸ್ ಹುಡಿಯಿಂದ ತೋಯ್ದು ಹೋಗುವ, ನೂರು ಬಾರಿ ಮತ್ತೆ ಮತ್ತೆ ಸರಿದಾರಿ ಹಿಡಿಯಲು ಅವಕಾಶ ಒದಗಿಸಿದ, ಶಾಲೆಗೆ ಅಮ್ಮ ಬಂದಾಗಲೆಲ್ಲಾ ನಿಮ್ಮ ಮಗ ಬಹಳ ಚೂಟಿ ಇದ್ದಾನೆ ಎಂದು ನನಗೇ ಗೊತ್ತಾಗದಂತೆ ಹೊಗಳಿದ, ನಿನ್ನ ಹಣೆಬರಹವನ್ನೆಲ್ಲಾ ಅಮ್ಮನಲ್ಲಿ ಹೇಳಿದ್ದೇನೆಂದು ಹುಸಿನುಡಿದ, ಕ್ಲಾಸಲ್ಲಿ ಒಂದೆರಡು ಏಟು ಹೆಚ್ಚು ಬಿದ್ದ ಕಾರಣಕ್ಕೆ ಟೀಚರಿನ ಮುಸುಡಿಯೂ ನೋಡದ ನಮ್ಮನ್ನು ನಗಿಸಲು ಜೋಕ್ಸ್ ಗಳನ್ನು ತಾವೇ ಸೃಷ್ಟಿಸಿ ವಿದೂಷಕರಾದ, ಈ ತರಗತಿಯಲ್ಲಿ ಒಬ್ಬರಿಗೆ ನನ್ನಲ್ಲಿ ಕೋಪವೆಂದು ಪದೇ ಪದೆ ಹೇಳಿ ತರಗತಿ ಮುಗಿಯುವ ಮುನ್ನವೇ ನಮ್ಮ ಮುಖದ ಗಂಟು ಬಿಡಿಸುವ, ನಾವು ಆಟವಾಡುವಾಗೆಲ್ಲಾ ಆಫೀಸ್ ಕೋಣೆಯ ಹೊರಗೆ ಕುರ್ಚಿ ಹಾಕಿ ನೋಡಿ ಆನಂದಿಸಿದ, ಗುಡ್ ಬೇಕೆಂದು ಗೋಗರೆದ ನಮಗೆ ವೆರಿಗುಡ್ ಎಂದು ಕೆಂಪಕ್ಷರದಲ್ಲಿ ಬರೆದು ಹಬ್ಬವಾಗಿಸಿದ, ಹಬ್ಬದ ಡ್ರೆಸ್ ಚೆನ್ನಾಗಿದೆಯೆಂದು ಮರುದಿನ ಕಮೆಂಟ್ ಮಾಡಿದ, ಎಲ್ಲಾದರೂ ಸಿಕ್ಕಾಗ ಜೊತೆಗಿದ್ದವರೊಂದಿಗೆ ಇದು ನನ್ನ ವಿದ್ಯಾರ್ಥಿಯೆಂದು ಹೆಮ್ಮೆಯಿಂದ ಪರಿಚಯಿಸಿ ಕೊಟ್ಟ… ಹೀಗೆ ನಮಗಾಗಿ ಏನೇನನ್ನೆಲ್ಲಾ ಮಾಡಿ, ಏನನ್ನೂ ಮಾಡಿಲ್ಲವೆಂಬಂತೆ ಸರಳವಾಗಿಯೇ ಬದುಕುವ ಅಧ್ಯಾಪಕರ ವೃಂದವನ್ನು ಟೀಚರ್ಸ್ ಡೇ ದಿನ ಮಾತ್ರ ಸ್ಮರಿಸಿ, ಮತ್ತೆ ಮರೆತುಬಿಟ್ಟರೆ ಆದೀತೆ?
ಅವರು ನಿತ್ಯವೂ ನೆನಪಾಗಬೇಕು. ತಾಯಿ ಮಕ್ಕಳ ಸಂಬಂಧಕ್ಕೂ ಅಧ್ಯಾಪಕ-ವಿದ್ಯಾರ್ಥಿ ಸಂಬಂಧಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಇಷ್ಟುದ್ದ ಬರೆಯಲು ಬುನಾದಿ ಹಾಕಿ ಅ ದಿಂದ ಹಿಡಿದು ಅಳುವ, ನಗುವ, ನಗಿಸುವ, ದುಡಿದೇ ತಿನ್ನುವ, ಮುದ್ದು ಮಾಡುವ, ಯುದ್ಧ ತ್ಯಜಿಸುವ, ಬದುಕೆಂದರೆ ಹಾಗಲ್ಲ ಹೀಗೆಂದು ಬರಿಯ ಕಣ್ಸ್ನ್ನೆಯಲ್ಲಿ ಕಲಿಸಿಕೊಟ್ಟ ಎಲ್ಲಾ ಮಾತೃ ಹೃದಯಿ, ಶಿಕ್ಷಕರಿಗೆ ನನ್ನ ಮತ್ತು ನನ್ನಂಥ ಎಣಿಕೆಗೆ ಸಿಗದ ವಿಧ್ಯಾರ್ಥಿಗಳ ಕಡೆಯಿಂದ; ಒಂದನೇ ತರಗತಿಯಲ್ಲಿ ನೀವೇ ಕಲಿಸಿಕೊಟ್ಟ, ಎಲ್ಲರೂ ಜೊತೆಯಾಗಿ, ರಾಗವಾಗಿ, ಆಮೆ ನಾಚುವ ವೇಗದಲ್ಲಿ ಹೇಳುತ್ತಿದ್ದ ನಮಸ್ತೇ.. ಟೀಚರ್…
ಝುಬೈರ್ ಪರಪ್ಪು