ರಾಧೆ ಕೃಷ್ಣನಿಗಾಗಿ ಕಾದಂತೆ, ಶಬರಿ ರಾಮನಿಗಾಗಿ ಬೋರೆ ಹಣ್ಣುಗಳ ಹಿಡಿದು ಎದುರುನೋಡುವಂತೆ ನಿನಗಾಗಿ ಕಾಯುತ್ತ ಕುಳಿತಿರುವ ನನ್ನನ್ನು ಕಂಡು ಎಲ್ಲರಿಗೂ ನಗು ಬರದೇ ಇರುತ್ತದೆಯೇ? ಇಷ್ಟು ದಿನ ನಿನ್ನ ಪ್ರೀತಿಯ ಕುರಿತು ಹೊಟ್ಟೆಕಿಚ್ಚು ಪಟ್ಟ ಗೆಳತಿಯರೆಲ್ಲ ಈಗ ನನ್ನ ಕಂಡು ನಗುತ್ತಿದ್ದಾರೆ. ಮನೆಯಲ್ಲಿ ಗಂಡು ನೋಡಲು ಶುರುಮಾಡುವಾ ಎಂದು ಮಾತನಾಡಿದ್ದು ಕೇಳಿಸಿಕೊಂಡೆ. ಆಗಲೇ-ನನ್ನ ಪ್ರೇಮದ ಕಥೆಯನ್ನು ಹಿರಿಯರ ಮುಂದೆ ಹೇಳಿಬಿಡಬೇಕು ಅಂದುಕೊಂಡೆ. ಆದರೆ, ಏನೆಂದು ಹೇಳಲಿ? ನಿನ್ನ ಹೆಸರು, ವಿಳಾಸವೊಂದನ್ನೂ ನಾನರಿಯೇ?ನಿನ್ನ ಒಂದು ಭಾವಚಿತ್ರವೂ ನನ್ನ ಬಳಿ ಇಲ್ಲ. ನಿನ್ನ ತೋರಿಸಿ ಇವನೇ ನನ್ನ ಕನಸುಗಳ ಅರಮನೆಯ ಸರದಾರ ಎಂದು ಹೇಳಲು!
ನಿನ್ನ ಪ್ರೀತಿಯ ಪರಿಯ ಕಂಡು ಯಾರದಾದರೂ ಕೆಟ್ಟ ದೃಷ್ಟಿ ಬಿದ್ದಿದೆಯಾ ನಾನರಿಯೆ! ನಿನ್ನ ಪ್ರೇಮಪತ್ರದಲ್ಲೇ ಆ ಪರಿಯ ಕಂಡು ಗೆಳೆತಿಯರೆಲ್ಲ ಹೊಟ್ಟೆಕಿಚ್ಚು ಪಟ್ಟಾಗಲಾದರೂ ಆ ಪತ್ರಕ್ಕೊಂದು ದೃಷ್ಟಿ ತೆಗೆದಿದ್ದರೆ ಸರಿಯಾಗುತ್ತೇನೋ? ಈಗಲೂ ದಿನಕ್ಕೊಮ್ಮೆ ದೃಷ್ಟಿ ತೆಗೆಯುತ್ತೇನೆ. ನಿನಗಾಗಿ ಹೊರದ ಹರಕೆಗಳಿಲ್ಲ ಗೆಳೆಯ. ಪ್ರತಿ ಸೋಮವಾರ, ಪಕ್ಕದ ಶಿವಾಲಯದಲ್ಲಿ ನಿನ್ನ ಹೆಸರಲ್ಲಿ ಅರ್ಚನೆ ಮಾಡುವಾಗ ನನ್ನದೇ ಒಂದು ಕಲ್ಪನೆಯ ಹೆಸರನ್ನಿಟ್ಟು ಹೇಳುವೆ ಎಂದರೆ ಕೇಳಿದವರು ನಗಬಹುದೇನೋ.
ಒಮ್ಮೆಲೇ, ನೀ ನಾಪತ್ತೆಯಾದೆ. ನೀನು ಪತ್ರಗಳನ್ನು ಬರೆಯುವುದು ನಿಲ್ಲಿಸಿರುವುದನ್ನು ನೋಡಿದರೆ, ನನಗೆ ಮೊದಲೇ ಹೇಳಿದ್ದಂತೆ ಮಿಲಟರಿ ಸೇರಲು ಹೋಗಿಬಿಟ್ಟಿದ್ದೀಯ ಅನಿಸುತ್ತದೆ. ನಾನಿಲ್ಲಿ ನಿನ್ನ ಧ್ಯಾನದಲ್ಲಿ ಉಳಿದಿರುವಾಗಲೇ ನೀನು ಸೇನೆಯನ್ನು ಸೇರಿ ರಾಷ್ಟ್ರಸೇವೆ ಮಾಡುತ್ತಿರುವೆಯೋ ಎಂಬ ಅನುಮಾನ ನನಗೆ. ಎಲ್ಲರಿಂದ ದೂರವಿರುವ ಯೋಧಬಾಂಧವರೊಂದಿಗೆ ಸೇರಿ, ರಜೆಗೆ ಬಂದಾಗಲಾದರೂ ನನ್ನ ನೆನಪಾಗಿ ಒಂದು ಪತ್ರ ಹಾಕುವೆಯೇನೋ ಎಂದು ಕಾಯುತ್ತಿರುವೆ.
ನಿನ್ನ ನೆನಪಾದಾಗಲೆಲ್ಲ ಒಂದೊಂದೇ ಪತ್ರ ಬರೀತಾನೇ ಇದ್ದೀನಿ. ಇವೆಲ್ಲಾ ಪತ್ರಗಳನ್ನು ಒಮ್ಮೆಲೇ ಕಂಡಾದರೂ ಆ ಅರ್ಜುನ ಉಲೂಚಿಯನು ನೆನಪಿಸಿಕೊಂಡಂತೆ, ನೀನೂ ನನ್ನನ್ನು ಸಂಪರ್ಕಿಸಬಹುದೆಂಬ ನಿರೀಕ್ಷೆ ಇದೆ.
ಇಂತಿ ನಿನ್ನ ಪ್ರೀತಿಯ,
ಉಲೂಚಿ