ಹುಬ್ಬಳ್ಳಿ: ನಗರದ ಇಂದಿರಾ ಗಾಜಿನಮನೆ ಉದ್ಯಾನದಲ್ಲಿ ಫಲ-ಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಬಗೆ ಬಗೆಯ ಹೂ-ಹಣ್ಣುಗಳು ಮನ ಸೆಳೆಯುತ್ತಿವೆ. ತರಹೇವಾರಿ ಅಲಂಕಾರಿಕ ಗಿಡಗಳು, ಕಲಾಕೃತಿಗಳು, ಹೊಸ ತಳಿಗಳು, ನವೀನ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಪಡೆಯುವ ಅವಕಾಶ ಇಲ್ಲಿ ಒದಗಿ ಬಂದಿದೆ.
ಜಿಲ್ಲಾಡಳಿತ, ಜಿಪಂ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಉದ್ಯಾನ ಮತ್ತು ಫಲ-ಪುಷ್ಪ ಪ್ರದರ್ಶನ ಸಮಿತಿ ಸಹಯೋಗದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆಯುವ ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ವಿಭಾಗಗಳಲ್ಲಿಬಹುಮಾನ ಪಡೆದ ಸಸ್ಯಗಳನ್ನೂ ನೋಡಬಹುದಾಗಿದೆ.
ಹೊಸ ಕೃಷಿ ತಂತ್ರಜ್ಞಾನ: ಮಣ್ಣಿಲ್ಲದೆ ಕೃಷಿ ಮಾಡುವ 2 ಮಾದರಿಗಳು ಪ್ರದರ್ಶನದ ಪ್ರಮುಖ ಆಕರ್ಷಣೆ. ಜಲಕೃಷಿ (ಹೈಡ್ರೊಪೊನಿಕ್ಸ್) ಪದ್ಧತಿ ಮೂಲಕ ಕೇವಲ ಖನಿಜಭರಿತ ನೀರನ್ನು ಬಳಕೆ ಮಾಡಿ ಬೇರಿನ ಸದೃಢತೆಗೆ ಪರೆಲ„ಟ್ ಹಾಗೂ ಗ್ರಾವೆಲ್ಸ್‌ಗಳನ್ನು ಬಳಕೆ ಮಾಡಿ ಬೆಳೆ ಬೆಳೆಯುವುದು ಇದರ ವಿಶೇಷತೆ.
ಪಾಶ್ಚಾತ್ಯ ದೇಶಗಳಲ್ಲಿರುವ ಪದ್ಧತಿಯನ್ನು ನಗರದ ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಲ್ಲಿ ಪ್ರದರ್ಶಿಸಲಾಗುತ್ತಿದೆ. 20 ಚದುರ ಅಡಿ ಜಾಗದಲ್ಲಿ ಪ್ರತಿ ದಿನ 2 ಕೆ.ಜಿ ರಾಸಾಯನಿಕ ರಹಿತ ತರಕಾರಿ ಪಡೆಯಬಹುದಾಗಿದೆ. ಟೊಮ್ಯಾಟೊ, ಕ್ಯಾರೆಟ್, ಹುರುಳಿಕಾಯಿ, ಮೂಲಂಗಿ, ಹೂವಿನ ಸಸ್ಯಗಳು, ಔಷಧಿ ಸಸ್ಯಗಳನ್ನು ಬೆಳೆಸಲಾಗುತ್ತದೆ.
ಮಣ್ಣು ರಹಿತ ಬೇಸಾಯದ ಮಾದರಿಯನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ಡಚ್ ತಂತ್ರಜ್ಞಾನದಿಂದ ಕೇವಲ ಕೋಕೊಪಿಟ್‌ಗೆ ಪೊಟೈಸ್ ಹಾಘೂ ಮೈಕ್ರೊ ನ್ಯೂಟ್ರಿಶಿಯಂಟ್ಸ್‌ಗಳನ್ನು ಸೇರಿಸಿ ಬೆಳೆಯುವ ಪದ್ಧತಿ ಇದಾಗಿದೆ. ಈ ಪದ್ಧತಿಯಿಂದ ಜರ್ಬೆರಾ, ಡಚ್ ಗುಲಾಬಿ, ದಪ್ಪ ಮೆಣಸಿನಕಾಯಿ, ಚೆರ್ರಿ, ಟೊಮ್ಯಾಟೊ ಕಡಿಮೆ ನೀರು ಬಳಕೆ ಮಾಡಿ ಬೆಳೆಯಬಹುದಾಗಿದೆ. ನೀರು ಮರುಬಳಕೆ ಮಾಡಲು ಈ ಪದ್ಧತಿಯಲ್ಲಿ ಸಾಧ್ಯವಾಗುತ್ತದೆ.