Advertisement
ಶ್ರವಣಬೆಳಗೊಳದ ವಿಂಧ್ಯಗಿರಿಯ ಹಿಂಭಾಗ ಕೆ.ಆರ್.ಪೇಟೆ ರಸ್ತೆಯಲ್ಲಿರುವ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಆರಂಭವಾಗಲಿದೆ. ಮಂಗಳವಾರ ಹೆಲಿಕಾಪ್ಟರ್ ಪ್ರಾಯೋಗಿಕ ಹಾರಾಟ ಆರಂಭವಾಗಿದ್ದು, ಬುಧವಾರ ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೆಲಿಟೂರಿಸಂ ಉದ್ಘಾಟಿಸುವರು. ಹುಬ್ಬಳ್ಳಿಯ ಕ್ಯಾಪ್ಟನ್ ಏವಿಯೇಷನ್ ಎರಡು ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದೆ. ಪ್ರಥಮ ದಿನ ಒಂದು ಹೆಲಿಕಾಪ್ಟರ್ ಹಾರಲಿದ್ದು, ಒಂದೆರಡು ದಿನಗಳಲ್ಲಿಯೇ ಮತ್ತೂಂದು ಬಂದು ಸೇರಿಕೊಳ್ಳಲಿದೆ. ಒಟ್ಟು 6 ಸೀಟುಗಳಿರುವ ಎರಡು ಹೆಲಿಕಾಪ್ಟರ್‌ಗಳು ಜಿಲ್ಲೆಯ ಪ್ರಥಮ ಹೆಲಿಟೂರಿಸಂಗೆ ಬಳಕೆಯಾಗುತ್ತಿವೆ.
ಶ್ರೀ ಗೊಮ್ಮಟೇಶ್ವರನ ನೆಲೆಯ ವಿಂಧ್ಯಗಿರಿಯನ್ನು ಒಂದು ಸುತ್ತು ಹಾಕಿಕೊಂಡು ಶ್ರವಣಬೆಳಗೊಳ ಪಟ್ಟಣದ ವ್ಯಾಪ್ತಿಯಲ್ಲಿ ಹಾರಾಟ ನಡೆಸುವ ಹೆಲಿಕಾಪ್ಟರ್ 8 ನಿಮಿಷಗಳ ಪ್ರಯಾಣಕ್ಕೆ 2,100 ರೂ. ನಿಗದಿಪಡಿಸಲಾಗಿದೆ. ಒಂದು ದಿನಕ್ಕೆ 10ಕ್ಕಿಂತ ಹೆಚ್ಚು ಸುತ್ತು ಹೆಲಿಕಾಪ್ಟರ್ ಹಾರಾಟದ ಮೂಲಕ ಅಂದರೆ ದಿನಕ್ಕೆ ಕನಿಷ್ಠ 100 ಜನರು ಹೆಲಿಕಾಪ್ಟರ್‌ನಲ್ಲಿ ಹಾರಾಟದ ಅನುಭವ ಪಡೆಯುವರೆಂದು ಅಂದಾಜಿಸಲಾಗಿದೆ. ಮಹಾ ಮಸ್ತಕಾಭಿಷೇಕ ಮುಗಿದ ನಂತರವೂ ಒಂದು ತಿಂಗಳ ಕಾಲ ಹೆಲಿಟೂರಿಸಂ ನಡೆಸಲು ಪ್ರವಾಸೋದ್ಯಮ ಇಲಾಖೆ ಹುಬ್ಬಳ್ಳಿಯ ಕ್ಯಾಪ್ಟನ್ ಏವಿಯೇಷನ್ ಸಮ್ಮತಿ ನೀಡಿದೆ. ಹೆಲಿಟೂರಿಸಂನ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹಾಸನ ಕಚೇರಿಯ ಉಪ ನಿರ್ದೇಶಕ ಜಿತೇಂದ್ರನಾಥ್ ತಿಳಿಸಿದ್ದಾರೆ.
Related Articles
ಮಂಗಳವಾರ ಮಧ್ಯಾಹ್ನದಿಂದಲೇ ಹೆಲಿಟೂರಿಸಂ ಆರಂಭವಾಗಬೇಕಾಗಿತ್ತು. ಮಧ್ಯಾಹ್ನ 4 ಗಂಟೆಗೆ ಹೆಲಿಟೂರಿಸಂಗೆ ಚಾಲನೆ ನೀಡುವರೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಹೆಲಿಕಾಪ್ಟರ್ ಹಾರಾಟದ ಖುಷಿ ಅನುಭವಿಸಲು ಟಿಕೆಟ್‌ಗಳನ್ನೂ ಖರೀದಿಸಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಪ್ರಥಮ ದಿನ ಪ್ರಾಯೋಗಿಕ ಹಾರಾಟ ಆರಂಭಿಸಿ ಬುಧವಾರದಿಂದ ಅಧಿಕೃತವಾಗಿ ಹೆಲಿಕಾಪ್ಟರ್ ಹಾರಾಟ ನಡೆಸಲಾಗುವುದು ಎಂದು ಪ್ರಕಟಿಸಿದರು.
Advertisement
ಆದರೆ ಟಿಕೆಟ್ ಖರೀದಿಸಿದ್ದವರು ಗಲಾಟೆ ಆರಂಭಿಸಿದರು. ಅನಿವಾರ್ಯವಾಗಿ ಟಿಕೆಟ್ ಖರೀದಿಸಿದವರಿಗೆ ಎರಡು ಸುತ್ತು ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿ ಉಳಿದವರಿಗೆ ಬುಧವಾರ ಆದ್ಯತೆಯನುಸಾರ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿ, ಅನಂತರ ಹೊಸದಾಗಿ ಟಿಕೆಟ್ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪರಿಸ್ಥಿತಿ ಸುಧಾರಿಸಿತು.