Advertisement

ಸಂಚಾರ ದಟ್ಟಣೆ ನಿವಾರಣೆಗೆ “ಹೆಲಿಟ್ಯಾಕ್ಸಿ’ 

12:04 PM Aug 05, 2017 | |

ಬೆಂಗಳೂರು: ಗಂಟೆಗಟ್ಟಲೆ ಹೊಗೆ ಕುಡಿಯುತ್ತಾ ಸಂಚಾರದಟ್ಟಣೆಯಲ್ಲಿ ಸಿಲುಕಿರುವ ಯಾವುದೇ ವ್ಯಕ್ತಿಗೆ ಆಗಸದಲ್ಲಿ ಹಾರಿಕೊಂಡು, ನೇರವಾಗಿ ನಿಗದಿತ ಸ್ಥಳಕ್ಕೆ ಇಳಿಯುವಂತಿದ್ದರೆ ಎಷ್ಟು ಚೆಂದ ಎಂಬ ಆಲೋಚನೆ ಎಷ್ಟೋ ಸಲ ಬಂದು-ಹೋಗಿರುತ್ತದೆ. 

Advertisement

ಈ ಕಲ್ಪನೆ ಶೀಘ್ರದಲ್ಲೇ ನಿಜವಾಗಲಿದೆ. ನಗರದಲ್ಲಿರುವ ಟೂರಿಸ್ಟ್‌ ಟ್ಯಾಕ್ಸಿ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಂತೆಯೇ ಇನ್ಮುಂದೆ “ಹೆಲಿಟ್ಯಾಕ್ಸಿ’ (ಹೆಲಿಕಾಪ್ಟರ್‌ ಟ್ಯಾಕ್ಸಿ)ಗಳು ಹಾರಾಟ ನಡೆಸಲಿವೆ. ಈ ಮೂಲಕ ಯಾವುದೇ ಸಂಚಾರದಟ್ಟಣೆ ಕಿರಿಕಿರಿ ಇಲ್ಲದೆ, ಹಾರಿಕೊಂಡೇ ನೇರವಾಗಿ ನಿಗದಿತ ಪ್ರದೇಶ ತಲುಪಬಹುದು!

ದೇಶ-ವಿದೇಶಗಳಿಂದ ವಿಮಾನಗಳಲ್ಲಿ ನಗರಕ್ಕೆ ಬಂದಿಳಿಯುವ ಪ್ರಯಾಣಿಕರು ಎದುರಿಸುವ ಸಂಚಾರದಟ್ಟಣೆ ಸಮಸ್ಯೆಯಿಂದ ಮುಕ್ತಿ ನೀಡಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್‌)ವು ಥುಂಬಿ ಏವಿಯೇಷನ್‌ ಪ್ರೈ.ಲಿ., ಸಹಯೋಗದಲ್ಲಿ “ಹೆಲಿಟ್ಯಾಕ್ಸಿ’ ಪ್ರಯೋಗಕ್ಕೆ ಮುಂದಾಗಿದೆ.

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೊಷ್ಠಿಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹ ಈ ನೂತನ ಸೇವೆಯನ್ನು ಪ್ರಕಟಿಸಿದರು. 

“ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ “ಹೆಲಿಟ್ಯಾಕ್ಸಿ’ ಸೇವೆಯನ್ನು ಬೆಂಗಳೂರಿನಲ್ಲಿ ಪರಿಯಚಿಸಲಾಗುತ್ತಿದೆ. ಹೊರರಾಜ್ಯ ಮತ್ತು ವಿದೇಶಗಳಿಂದ ವಿಮಾನದಲ್ಲಿ ನಿತ್ಯ ಸಾವಿರಾರು ಜನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಾರೆ.

Advertisement

ಅವರೆಲ್ಲಾ ನಗರದ ವಿವಿಧ ಪ್ರದೇಶಗಳಿಗೆ ತೆರಳಲು ಸುಮಾರು ಗಂಟೆಗಳ ರಸ್ತೆಯಲ್ಲಿ ಕಳೆಯುತ್ತಾರೆ. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ನಲ್ಲೇ ಈ ವಿಮಾನ ಪ್ರಯಾಣಿಕರನ್ನು ನಗರದ ವಿವಿಧ ಪ್ರದೇಶಗಳಿಗೆ ತಲುಪಿಸಲಾಗುವುದು” ಎಂದು ಮಾಹಿತಿ ನೀಡಿದರು. 

ಪ್ರಾಯೋಗಿಕವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿ ನಡುವೆ ಈ ಹೆಲಿಟ್ಯಾಕ್ಸಿ ಸೇವೆ ಆರಂಭಗೊಳ್ಳಲಿದೆ. ಈ ಸಂಬಂಧ ಈಗಾಗಲೇ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಹೆಲಿಕಾಪ್ಟರ್‌ ನಿಲ್ದಾಣ (ಏರ್‌ಪೊರ್ಟ್‌ ಮಾದರಿಯಲ್ಲಿ ಹೆಲಿಪೋರ್ಟ್‌)ಕ್ಕೆ ಜಾಗ ಗುರುತಿಸಲಾಗಿದ್ದು, ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಸೇವೆ ಶುರುವಾಗಲಿದೆ ಎಂದು ಹೇಳಿದರು. 

ಪ್ರಸ್ತುತ ಕೆಐಎಎಲ್‌ನಿಂದ ಎಲೆಕ್ಟ್ರಾನಿಕ್‌ ಸಿಟಿಗೆ ತೆರಳಲು ಹಲವು ಗಂಟೆಗಳೇ ಬೇಕಾಗುತ್ತದೆ. ಹೆಲಿಕಾಪ್ಟರ್‌ನಲ್ಲಿ ಕೇವಲ 15 ನಿಮಿಷಗಳಲ್ಲಿ ತಲುಪಬಹುದು. ಪ್ರಯಾಣದರ ಇನ್ನೂ ನಿಗದಿಯಾಗಿಲ್ಲ. ಆದರೆ, ಐಷಾರಾಮಿ ಕಾರುಗಳಲ್ಲಿ ಈಗಿರುವ ಟ್ಯಾಕ್ಸಿ ಬಾಡಿಗೆಗೆ ಹೆಚ್ಚು-ಕಡಿಮೆ ಸರಿಸಮವಾಗಿರುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು. 

ಹೆಲಿಕಾಪ್ಟರ್‌ ಟ್ಯಾಕ್ಸಿ ಸೇವೆ ಜತೆಗೆ ಇದರಿಂದ ವೈದ್ಯಕೀಯ ಸೇವೆ, ಸಾರ್ವಜನಿಕ ಸುರಕ್ಷತೆ ಸೇರಿದಂತೆ ಮತ್ತಿತರ ಸೇವೆಗಳಿಗೂ ಅವಕಾಶ ಇದೆ. ಮುಂದಿನ ದಿನಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳಿಗೂ ಬಳಕೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ಹೊಸ ಪ್ರಯೋಗಗಳಲ್ಲಿ ಯಾವಾಗಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಐಟಿ-ಬಿಟಿ, ವೈಮಾನಿಕ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದನ್ನು ನಿರೂಪಿಸಿದೆ. ಈ ಸಾಲಿಗೆ “ಹೆಲಿಟ್ಯಾಕ್ಸಿ’ ಸೇರ್ಪಡೆಗೊಳ್ಳುತ್ತಿದೆ. ಆದರೆ, ಈ ಸೇವೆ ಕೇವಲ ಪ್ರತಿಷ್ಠಿತ ಜನರಿಗೆ ಸೀಮಿತವಾಗಬಾರದು. ಸಾಮಾನ್ಯರಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಯಾಣ ದರ ನಿಗದಿಪಡಿಸಬೇಕು ಎಂದರು. 

ನಗರದಲ್ಲಿವೆ 90 ಹೆಲಿಪ್ಯಾಡ್‌
ನಗರದಲ್ಲಿ 90 ಬಹುಮಹಡಿ ಕಟ್ಟಡಗಳ ಮೇಲ್ಛಾವಣಿಯಲ್ಲಿ ಹೆಲಿಪ್ಯಾಡ್‌ಗಳಿವೆ. ಇವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ಇದನ್ನು ಈಗ ಆರಂಭಿಸುತ್ತಿರುವ ಹೆಲಿಕಾಪ್ಟರ್‌ ಟ್ಯಾಕ್ಸಿ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ಥುಂಬಿ ಏವಿಯೇಷನ್‌ ಪ್ರೈ.ಲಿ., ನಿರ್ದೇಶಕ ಕೆಎನ್‌ಜಿ ನಾಯರ್‌ ತಿಳಿಸಿದರು. 

ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್‌ಚಂದ್ರ ಕುಂಟಿಯಾ ಮಾತನಾಡಿ, ಮೇಲ್ಛಾವಣಿ ಜತೆಗೆ ಎಚ್‌ಎಎಲ್‌ ಸೇರಿದಂತೆ ನೆಲದ ಮೇಲೂ ಹಲವು ಹೆಲಿಪ್ಯಾಡ್‌ಗಳಿವೆ. ಅವುಗಳನ್ನು ಇದಕ್ಕೆ ಬಳಸಿಕೊಳ್ಳಲು ಸರ್ಕಾರ ಪೂರಕ ಸಹಕಾರ ನೀಡಲಿದೆ.

ಈ ಸಂಬಂಧ ಹೆಲಿಪ್ಯಾಡ್‌ ಹೊಂದಿದ ಕಟ್ಟಡ ಮಾಲಿಕರಿಂದ ಅಗತ್ಯ ಅನುಮತಿ ಪಡೆಯಲಾಗುವುದು ಎಂದು ಹೇಳಿದರು. ಹೆಲಿಕಾಪ್ಟರ್‌ ಟ್ಯಾಕ್ಸಿಯಲ್ಲಿ ಕೂಡ ತಂತ್ರಜ್ಞಾನ ಬಳಸಿಕೊಂಡು ಶೇರ್‌ ಟ್ಯಾಕ್ಸಿ ಮಾದರಿ ಅನುಸರಿಸಬೇಕು ಎಂದು ಸುಭಾಶ್‌ಚಂದ್ರ ಕುಂಟಿಯಾ ಸಲಹೆ ಮಾಡಿದರು. 

6 ಆಸನಗಳ ಸಾಮರ್ಥ್ಯ ಇರುವ “ಬೆಲ್‌-407′ ಹೆಲಿಕಾಪ್ಟರ್‌ನಿಂದ ಸೇವೆ ಆರಂಭಗೊಳ್ಳಲಿದೆ. ನಿತ್ಯ ಕೆಐಎಎಲ್‌ನಿಂದ 60 ಸಾವಿರ ಜನ ಪ್ರಯಾಣಿಸುತ್ತಾರೆ. ಈ ಪೈಕಿ ಕನಿಷ್ಠ 60ರಿಂದ 80 ಜನ ಹೆಲಿಟ್ಯಾಕ್ಸಿ ಬಳಸುವ ನಿರೀಕ್ಷೆ ಇದೆ ಎಂದು ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹರ್ಷ ರಾಘವನ್‌ ತಿಳಿಸಿದರು.  

ಪ್ರಪಂಚದ ಪ್ರತಿಷ್ಠಿತ ಮಹಾನಗರಗಳಲ್ಲಿ ಈ ಹೆಲಿಟ್ಯಾಕ್ಸಿ ಸೇವೆ ಇದೆ. ಬ್ರೆಜಿಲ್‌, ಸಾವೊಪಾಲೊ ಬೆಂಗಳೂರಿನಷ್ಟೇ ವಿಸ್ತೀರ್ಣ ಹೊಂದಿದ್ದು, ಅಲ್ಲಿ 300 ಹೆಲಿಟ್ಯಾಕ್ಸಿಗಳು ಕಾರ್ಯಾಚರಣೆ ಮಾಡುತ್ತಿವೆ. ಈಗ ಅಲ್ಲಿ ಸಂಚಾರದಟ್ಟಣೆ ಕಿರಿಕಿರಿಯೇ ಇಲ್ಲ ಎಂದು ಸಚಿವ ಜಯಂತ್‌ ಸಿನ್ಹ ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next