Advertisement

ಆರ್‌ಬಿಐ ಹೇಳಿದ್ರೂ 10 ರೂ. ನಾಣ್ಯ ಸ್ವೀಕರಿಸ್ತಿಲ್ಲ

03:51 PM Mar 07, 2017 | Team Udayavani |

ನಂಜನಗೂಡು: ಹತ್ತು ರೂ. ಮೌಲ್ಯದ ನಕಲಿ ನಾಣ್ಯಗಳು ಚಲಾವಣೆಯಲ್ಲಿಲ್ಲ. ಈ ಬಗ್ಗೆ ಹರಡಿರುವ ವದಂತಿ ಸುಳ್ಳಾಗಿದ್ದು, ಯಾವ ಭೀತಿಯೂ ಇಲ್ಲದೆ ಹತ್ತು ರೂ. ಮೌಲ್ಯದ ನಾಣ್ಯಗಳನ್ನು ಬಳಸಬಹುದು ಎಂದು ಸ್ವತಃ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ(ಆರ್‌ಬಿಐ) ಸ್ಪಷ್ಟಪಡಿಸಿದ್ದರೂ ಹತ್ತು ರೂ. ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತಿರುವ ಘಟನೆಗಳು ಮುಂದುವರಿದಿವೆ.

Advertisement

ಹತ್ತು ರೂ. ನಾಣ್ಯಗಳು ನಕಲಿ ಎಂಬ ವದಂತಿ ಎಂಬ ಹಿನ್ನೆಲೆಯಲ್ಲಿ ಸಾರ್ವಜನಿಕರು, ವ್ಯಾಪಾರಿಗಳು ಹತ್ತು ರೂ. ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದರು. ಆದರೆ ಈಗ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಹತ್ತು ರೂ. ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಲಾಗುತ್ತಿದೆ. ಇದಕ್ಕೆ ಹತ್ತು ರೂ. ನಕಲಿ ನಾಣ್ಯಗಳು ಚಲಾವಣೆಯಲ್ಲಿರುವುದರಿಂದ ಅವುಗಳನ್ನು ಪಡೆಯುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಾಹಕರು ಪ್ರಯಾಣಿಕರಿಗೆ ಹೇಳುತ್ತಿದ್ದಾರೆ.

ಪ್ರಯಾಣಿಕನನ್ನು ಕೆಳಗಿಳಿಸಿದ ನಿರ್ವಾಹಕ: ಈ ಬಗ್ಗೆ ಹಲವು ಪ್ರಯಾಣಿಕರು ನಿರ್ವಾಹಕರ ಜೊತೆ ವಾದಕ್ಕಿಳಿ ಯುತ್ತಿದ್ದಾರೆ. 10 ರೂ. ನಾಣ್ಯಗಳನ್ನು ಬ್ಯಾಂಕಿನಲ್ಲೂ ಪಡೀತಿಲ್ಲ, ಜನರೂ ತೆಗೆದುಕೊಳ್ಳುವುದಿಲ್ಲ. ನಾವು ಸ್ವೀಕರಿಸಿ ಮನೆಗೆ ತೆಗೆದುಕೊಂದು ಹೋಗಲಾಗದಿತೇ ಎಂದು ನಿರ್ವಾಹಕರು ವಾದಕ್ಕಿಳಿದ ಪ್ರಯಾಣಿಕರಿಗೆ ಹೇಳುತ್ತಿದ್ದಾರೆ. ಬದಲಿ ಹಣವಿಲ್ಲದಿದ್ದರೆ ನಿರ್ವಾಹಕರು ಪ್ರಯಾಣಿಕರನ್ನು ಬಸ್‌ನಿಂದಲೇ ಕೆಳಗಿಳಿಸುತ್ತಿದ್ದಾರೆ.

ಶನಿವಾರ ನಂಜನಗೂಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಹತ್ತಿ ಪ್ರಯಾಣಿಕರೊಬ್ಬರು ಹತ್ತು ರೂ. ನ ಮೂರು ನಾಣ್ಯಗಳನ್ನು ನೀಡಿ ಮೈಸೂರಿಗೆ ಟಿಕೆಟ್‌ ಕೇಳಿದರು. ಹತ್ತು ರೂ. ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದ ನಿರ್ವಾಹಕರು ಬದಲಿ ಹಣ ನೀಡುವಂತೆ ಕೇಳಿದರು. ಬೇರೆ ಹಣವಿಲ್ಲ ಎಂದು ಹೇಳಿದ ಆ ಪ್ರಯಾಣಿಕನನ್ನು ನಿರ್ವಾಹಕ ಬಸ್‌ನಿಂದಲೇ ಕೆಳಗಿಳಿಸಿದ್ದಾರೆ.

ಮೈಸೂರಲ್ಲೂ ಸ್ವೀಕರಿಸುತ್ತಿಲ್ಲ: ಮೈಸೂರು ನಗರ ಸಾರಿಗೆಯಲ್ಲಿ ಹತ್ತು ರೂ.ನ ನಾಣ್ಯಗಳನ್ನು ಸ್ವೀಕರಿಸಲಾಗುತ್ತಿದೆ. ನಮ್ಮಲ್ಲಿ ಆ ರೀತಿಯ ಸಮಸ್ಯೆ ಇಲ್ಲ ಎಂದು ಮೈಸೂರು ನಗರ ಸಾರಿಗೆ ಅಧಿಕಾರಿ ರಾಮಮೂರ್ತಿ ಹೇಳಿದ್ದಾರೆ. ಆದರೆ ನಗರದಲ್ಲಿ ಓಡಾಡುವ ಬಸ್‌ಗಳಲ್ಲಿಯೂ 10 ರೂ.ನ ನಾಣ್ಯವನ್ನು ನಿರ್ವಾಹಕರು ಸ್ವೀಕರಿಸುತ್ತಿಲ್ಲ.

Advertisement

ಬ್ಯಾಂಕುಗಳಲ್ಲಿ ಸ್ವೀಕರಿಸಲಾಗುತ್ತಿದೆ: ಈ ಬಗ್ಗೆ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ನಂಜನಗೂಡು ಶಾಖೆಯ ಹಿರಿಯ ವ್ಯವಸ್ಥಾಪಕ ಉದಯಶಂಕರ್‌ ಭಟ್‌ ಅವರನ್ನು ಸಂಪರ್ಕಿಸಿದಾಗ, ಹತ್ತು ರೂ ನಾಣ್ಯಗಳನ್ನು ನಕಲಿಯಾಗಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ. ಬ್ಯಾಂಕುಗಳಲ್ಲಿಯೂ 10 ರೂ. ನಾಣ್ಯಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳುವಂತಿಲ್ಲ.

ನಾಣ್ಯಗಳ ಉತ್ಪಾದನೆಯ ವೆಚ್ಚ ಅತಿ ದುಭಾರಿಯಾಗಿರುವುದರಿಂದ ಯಾರೂ ನಾಣ್ಯಗಳನ್ನು ನಕಲಿ ಮಾಡಲು ಹೋಗುವುದಿಲ್ಲ ಎಂದು ಅವರು ಹೇಳಿದರು. ಕೆಲದಿನಗಳ ಹಿಂದೆ ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಸ್ಪಷ್ಟನೆ ನೀಡಿದ್ದ ಆರ್‌ಬಿಐ, 10 ರೂ. ನಾಣ್ಯಗಳು ನಕಲಿ ಎಂಬುದು ಸುಳ್ಳು. ವಿಭಿನ್ನ ಮಾದರಿಯ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಹೇಳಿತ್ತು. ಆದರೂ 10 ರೂ. ನಾಣ್ಯಗಳನ್ನು ಸ್ವೀಕರಿಸುತ್ತಿಲ್ಲ. 

ನಿರಾಕರಿಸಿದರೆ ದೂರು ನೀಡಿ: ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ನಿರಾಕರಿಸುವುದು ಶಿûಾರ್ಹ ಅಪರಾಧ. ಒಂದು ವೇಳೆ ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಅಂತವರ ವಿರುದ್ಧ ದೂರು ಸಲ್ಲಿಸಬೇಕು ಎಂದು ಆರ್‌ಬಿಐ ತಿಳಿಸಿದೆ.

ಗ್ರಾಹಕರ ಸಂದಣಿ ಹೆಚ್ಚಿದ್ದಾಗ ನಾಣ್ಯಗಳನ್ನು ಎಣಿಸಲು ಸಮಯ ಬೇಕಾಗುವುದರಿಂದ ನಂತರ ಬನ್ನಿ ಎಂದು ಹೇಳಲಾಗುತ್ತದೆ. ಹಾಗಾಗಿ ಅದನ್ನೇ ಕೆಲವರು ನಿರಾಕರಣೆ ಎಂದು ತಿಳಿದುಕೊಂಡಿದ್ದಾರೆ. ಕೆಲವೊಮ್ಮೆ ನಿಲ್ಲಲು ಸಾಧ್ಯವಾಗದವರೂ ಸ್ವೀಕರಿಸುತ್ತಿಲ್ಲ ಎಂದು ಹೇಳುತ್ತಿರಬಹುದು. ಆದರೆ ಬ್ಯಾಂಕುಗಳಲ್ಲಿ 10 ರೂ. ನಾಣ್ಯಗಳನ್ನು ಸ್ವೀಕರಿಸುತ್ತಿದ್ದೇವೆ.
-ಉದಯಶಂಕರ್‌ ಭಟ್‌, ಎಸ್‌ಬಿಎಂ ಹಿರಿಯ ವ್ಯವಸ್ಥಾಪಕ

ನಮ್ಮ ನಿರ್ವಾಹಕರು ತಂದ 10 ರೂ. ನಾಣ್ಯಗಳನ್ನು ಸ್ವೀಕರಿಸಲು ಬ್ಯಾಂಕ್‌ಗಳು ನಿರಾಕರಿಸುತ್ತಿವೆ. ಆ ಕಡೆ ಜನರೂ ಸ್ವೀಕರಿಸುವುದಿಲ್ಲ, ಆ ಕಡೆ ಬ್ಯಾಂಕಿನವರೂ ಸ್ವೀಕರಿಸದಿದ್ದರೆ ನಿಗಮಕ್ಕೆ ನಷ್ಟವಾಗುತ್ತದೆ. ಹಾಗಾಗಿ 10 ರೂ. ನಾಣ್ಯಗಳನ್ನು ಸ್ವೀಕರಿಸದಂತೆ ನಿರ್ವಾಹಕರಿಗೆ ಹೇಳಿದ್ದೇವೆ. 10 ರೂ. ನಾಣ್ಯವನ್ನು ಬ್ಯಾಂಕಿನವರು ನಮ್ಮಿಂದ ಪಡೆದರೆ ನಾವೂ ಸ್ವೀಕರಿಸಲು ಸಿದ್ದ.
-ಅಶೋಕ್‌ಕುಮಾರ್‌, ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗಾಧಿಕಾರಿ

ನಂಜನಗೂಡು ಡಿಪೋಗೆ ದಿನಪ್ರತಿ ಆದಾಯ 8 ರಿಂದ 10 ಲಕ್ಷ ರೂ. ಹಣ ಸಂಗ್ರಹವಾಗುತ್ತದೆ. ಇದರಲ್ಲಿ 10 ರೂ. ನಾಣ್ಯಗಳ ಮೌಲ್ಯವೇ ಸಂಗ್ರಹವೇ ಹತ್ತಿಪ್ಪತ್ತು ಸಾವಿರದಷ್ಟಿರುತ್ತದೆ. ಬ್ಯಾಂಕಿನವರು ಈ ನಾಣ್ಯವನ್ನು ಸ್ವೀಕರಿಸದಿದ್ದರೆ ನಾವೂ ಸ್ವೀಕರಿಸುವುದನ್ನು ನಿಲ್ಲಿಸಬೇಕಾಗುತ್ತದೆ.
-ಪರಮೇಶ್ವರಪ್ಪ, ವ್ಯವಸ್ಥಾಪಕ, ನಂಜನಗೂಡು ಡಿಪೋ

 * ಶ್ರೀಧರ್‌ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next