ಹಾಸನ: ಸುಮಾರು 29 ವರ್ಷಗಳ ಹಿಂದೆ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಅರಮನೆಗುಡ್ಡದಲ್ಲೂ ಸೇನಾ ಹೆಲಿಕಾಪ್ಟರ್ ಪತನವಾಗಿ ಮೂವರು ಯೋಧರು ಸಾವನ್ನಪ್ಪಿದ್ದರು. ಆ ದುರಂತ ಸಂಭವಿಸಿದ್ದುದು ಕೂಡ ಡಿಸೆಂಬರ್‌ನಲ್ಲಿಯೇ!
ಬೆಂಗಳೂರಿನಿಂದ ಮಂಗಳೂರು ಕಡೆಗೆ 1992ರ ಡಿ. 22ರಂದು ಸಾಗುತ್ತಿದ್ದ ಸೇನೆಯ ಕೇರಳದ ನೌಕಾ ಪಡೆಯ ಕೊಚ್ಚಿ ವಿಭಾಗಕ್ಕೆ ಸೇರಿದ್ದ ಚೇತಕ್ ಹೆಲಿಕಾಪ್ಟರ್ ಅತಿಯಾದ ಮಂಜಿನಿಂದ ಸಕಲೇಶಪುರ ತಾಲೂ ಕಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪತನವಾಗಿತ್ತು. ಆದರೆ, ದುರಂತ ನಡೆದ ಹೆಲಿಕಾಪ್ಟರನ್ನು ಪತ್ತೆ ಹಚ್ಚಲು 5 ಹೆಲಿಕಾಪ್ಟರ್‌ಗಳನ್ನು ಬಳಸಿ, ಪೊಲೀಸರು ಹಾಗೂ ಅಧಿಕಾರಿಗಳು ಸೇರಿ ಸುಮಾರು 120 ಸೈನಿಕರು ಸತತ 45 ದಿನ ಹುಡುಕಿದರೂ ಸಾಧ್ಯವಾಗಿರಲಿಲ್ಲ.
ಪತನಗೊಂಡಿದ್ದ ಹೆಲಿಕಾಪ್ಟರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ., ಸರಕಾರಿ ನೌಕರಿ ಹಾಗೂ 4 ಎಕರೆ ಭೂಮಿ ಮಂಜೂರು ಮಾಡುವುದಾಗಿ ಹಾಸನ ಜಿಲ್ಲಾಡಳಿತ ಘೋಷಿಸಿತ್ತು. ಇದರಿಂದ ಉತ್ತೇಜಿತರಾದ ಸ್ಥಳೀಯರು ಸಕಲೇಶಪುರ ತಾಲೂಕಿನ ಅಭಯಾರಣ್ಯ, ಬೆಟ್ಟ ಗುಡ್ಡಗಳಲ್ಲಿ ಪತನಗೊಂಡಿದ್ದ ಹೆಲಿಕಾಪ್ಟರ್ ಹುಡುಕಲು ಮುಂದಾಗಿದ್ದರು. ಸತತ 15 ದಿನಗಳ ಪರಿಶ್ರಮದ ಬಳಿಕ ಕಾಡುಮನೆ ಟೀ ಎಸ್ಟೇಟ್ ಸಮೀಪ ಕೂಲಿ ಕೆಲಸ ಮಾಡುತ್ತಿದ್ದ ಪುಟ್ಟಸ್ವಾಮಿ ಗೌಡ ಎಂಬವರು ಪಶ್ಚಿಮಘಟ್ಟದ ತಪ್ಪಲು, ಕಾಡುಮನೆ ಸಮೀಪದ ಅರಮನೆ ಗುಡ್ಡದಲ್ಲಿ ಹೆಲಿಕಾಪ್ಟರನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದರು.
ಇದನ್ನೂ ಓದಿ:ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್
ಪುಟ್ಟಸ್ವಾಮಿ ಗೌಡ ಅವರು ಹಾಸನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ಬಳಿಕ ಕೊಚ್ಚಿಯಿಂದ ಆಗಮಿಸಿದ್ದ ನೌಕಾಪಡೆಯ ಯೋಧರು ಅರಮನೆ ಗುಡ್ಡದಲ್ಲಿ ಹೆಲಿಕಾಪ್ಟರ್‌ನ ಅವಶೇಷಗಳು ಮತ್ತು ಅದರಲ್ಲಿದ್ದ ಮೂವರು ಯೋಧರ ಕಳೇಬರ ಗುರುತಿಸಿ ಖಚಿತಪಡಿಸಿದ್ದರು. ಅಂದಿನ ನೌಕಾಪಡೆ ಮುಖ್ಯಸ್ಥ ಸಿಕ್ವೇರಾ ಅವರು ಸಕಲೇಶಪುರಕ್ಕೆ ಆಗಮಿಸಿ ಪುಟ್ಟಸ್ವಾಮಿ ಗೌಡರನ್ನು ಸಮ್ಮಾನಿಸಿದ್ದರು.
-ನಂಜುಂಡೇ ಗೌಡ