Advertisement

ಹೆಲಿಕಾಪ್ಟರ್‌ ಉತ್ಪಾದನೆ ಎಚ್‌ಎಎಲ್‌ಗೇ ನೀಡಿ

11:43 AM Nov 30, 2017 | |

ಬೆಂಗಳೂರು: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ., (ಎಚ್‌ಎಎಲ್‌)ಗೆ ನೀಡಿದ್ದ ರಾಫೆಲ್‌ ಹೆಲಿಕಾಪ್ಟರ್‌ ಉತ್ಪಾದನೆ ಗುತ್ತಿಗೆ ರದ್ದುಪಡಿಸಿ ರಿಲಾಯನ್ಸ್‌ ಕಂಪನಿಗೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಂಡವಾಳಶಾಹಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ಯುಪಿಎ ಸರ್ಕಾರದ ಅವಧಿಯಲ್ಲಿ ರಾಫೆಲ್‌ ಹೆಲಿಕಾಪ್ಟರ್‌ ಉತ್ಪಾದನೆ ಗುತ್ತಿಗೆಯನ್ನು ಎಚ್‌ಎಎಲ್‌ಗೆ ನೀಡುವಂತೆ ಫ್ರಾನ್ಸ್‌ನ ಡಸಾಲ್ಟ್ ಕಂಪನಿ ಜತೆ ಒಪ್ಪಂದವಾಗಿತ್ತು. 18 ಏರ್‌ಕ್ರಾಪ್ಟ್ಗಳನ್ನು ನೇರವಾಗಿ ಖರೀದಿ ಮಾಡುವುದು ಹಾಗೂ 108 ಹೆಲಿಕಾಪ್ಟರ್‌ಗಳನ್ನು ಎಚ್‌ಎಎಲ್‌ ಮೂಲಕ ಉತ್ಪಾದನೆ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ ಪ್ರಧಾನಿ ನರೇಂದ್ರ ಮೋದಿ, ಅನಿಲ್‌ ಅಂಬಾನಿಯನ್ನು ಜತೆ ಕರೆದುಕೊಂಡು ಏಕಾ ಏಕಿ ಫ್ರಾನ್ಸ್‌ಗೆ ತೆರಳಿ ಹಳೆಯ ಒಪ್ಪಂದ ರದ್ದು ಮಾಡಿ, ರಿಲಾಯನ್ಸ್‌ ಕಂಪನಿ ಜತೆ ಹೊಸ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಣೆ ಮಾಡಿದ್ದಾರೆ,’ ಎಂದು ಬೇಸರ ವ್ಯಕ್ತಪಡಿಸಿದರು.

“ಮೇಲಾಗಿ ಅನಿಲ್‌ ಅಂಬಾನಿ ಅವರ ರಿಲಾಯನ್ಸ್‌ ಕಂಪನಿಗೆ ಹೆಲಿಕಾಪ್ಟರ್‌ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲ. ಆದರೂ ಪ್ರಧಾನಿ, ಅವರ ಕಂಪನಿಗೇ ಟೆಂಡರ್‌ ನೀಡುವ ಮೂಲಕ “ಮೇಕ್‌ ಇನ್‌ ಇಂಡಿಯಾ’ ಯೋಜನೆಗೆ ತಿಲಾಂಜಲಿ ಇಟ್ಟಿದ್ದಾರೆ,’ ಎಂದು ಆರೋಪಿಸಿದರು.

ರಾಜ್ಯಕ್ಕೆ ಅನ್ಯಾಯ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದಾರೆ. ಆದರೆ, ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ಮಹತ್ವದ ಯೋಜನೆ ಕೈತಪ್ಪಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್‌ ಅವರೂ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ಎಚ್‌ಎಎಲ್‌ನ ಕೈತಪ್ಪಿ ಹೋಗಿರುವ ಯೋಜನೆಯನ್ನು ವಾಪಸ್‌ ತರಲು ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಅವರ ಮನಸ್ಸೇ ಕಸದ ತೊಟ್ಟಿ ಇದ್ಹಾಗೆ!: ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಹರಿ ಹಾಯ್ದ ದಿನೇಶ್‌ ಗುಂಡೂರಾವ್‌, “ಬಿಜೆಪಿಯವರ ಮನಸ್ಸೇ ಕಸದ ತೊಟ್ಟಿ ಇದ್ದ ಹಾಗೆ. ರಾಜ್ಯ ಸರ್ಕಾರ ಕಾಂಗ್ರೆಸ್‌ಗೆ ಅವಮಾನ ಮಾಡಿದೆ ಎಂದು ಹೇಳುವ ಬಿಜೆಪಿಯವರು, ತಮ್ಮ ಪಕ್ಷದ ಕಚೇರಿಯಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ಕಸದ ನಡುವೆ ಮೂಲೆಯಲ್ಲಿ ಇಟ್ಟು ಅವಮಾನ ಮಾಡಿದ್ದಾರೆ.

ಇದಕ್ಕಾಗಿ ಬಿಜೆಪಿಯವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್‌ ಹೆಗಡೆ ಅವರಿಗೆ ಸಂಸ್ಕೃತಿಯೇ ಇಲ್ಲ. ಅವರಿಗೆ ಮೊದಲು ಸಂಸ್ಕೃತಿಯ ಕೌಶಲ್ಯ ಕಲಿಸಬೇಕು,’ ಎಂದು ದಿನೇಶ್‌ ಗುಂಡೂರಾವ್‌ ವ್ಯಂಗ್ಯ ಮಾಡಿದರು.

ಅಂಬರೀಷ್‌ ನಮ್ಮ ನಾಯಕರು: ಮಾಜಿ ಸಚಿವ ಹಾಗೂ ಮಂಡ್ಯದ ಶಾಸಕ ಅಂಬರೀಷ್‌ ಅವರಿಗೆ ನಮ್ಮ ಪಕ್ಷದಲ್ಲಿ ಸದಾ ಗೌರವದ ಸ್ಥಾನವಿದೆ. ಪಕ್ಷಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನ ಕೈಗೊಂಡಾಗಲೂ ಅವರ ಸಲಹೆ ಪಡೆದೇ ಪಡೆಯುತ್ತೇವೆ. ಅವರು ನಮ್ಮ ಪಕ್ಷದ ಹಿರಿಯ ಮತ್ತು ಪ್ರಮುಖ ನಾಯಕರು,’ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು. ಇದೇ ಸಂದರ್ಭದಲ್ಲಿ ಮಾಜಿ ಸಂಸದೆ ರಮ್ಯಾ ಬಗ್ಗೆ ಕೇಳಿದ ಪ್ರಶ್ನೆಗೆ, “ಅವರ ಬಗ್ಗೆ ಮಾಹಿತಿ ಇಲ್ಲ,’ ಎಂದಷ್ಟೇ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next