Advertisement
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹೆಲಿಟೂರಿಸಂ ಮಾಡಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಸಭೆಗಳ ಮೇಲೆ ಸಭೆ ನಡೆಸಿ ಮೈಸೂರು ಸೇರಿದಂತೆ ರಾಜ್ಯದಲ್ಲಿ 5 ಕಡೆ ಹೆಲಿಟೂರಿಸಂ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಉತ್ಸುಕರಾಗಿ ಯೋಜನೆ ಜಾರಿಗೆ ಸರ್ವ ಪ್ರಯತ್ನ ಕೈಗೊಂಡಿದ್ದಾರೆ. ಆದರೆ ಈ ಹೆಲಿಟೂರಿಸಂಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಸಂಘ ಸಂಸ್ಥೆಗಳು ಹಾಗೂ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಘಟನೆಗಳು ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿವೆ. ಜತೆಗೆ ಆನ್‌ಲೈನ್‌ನಲ್ಲಿ ಹೆಲಿಟೂರಿಸಂ ವಿರೋಧಿಸಿ ನಡೆಸಿದ ಸಹಿ ಸಂಗ್ರಹ ಚಳವಳಿ ನಡೆಸಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, 72 ಸಾವಿರಕ್ಕೂ ಅಧಿಕ ಮಂದಿ ಇದಕ್ಕೆ ಸಹಿ ಹಾಕಿದ್ದಾರೆ.
ಉದ್ಯಮಿಗಳು, ಹೊಟೇಲ್ ಮಾಲಕರು ಹೆಲಿಟೂರಿಸಂ ಆವಶ್ಯಕತೆ ಇದೆ ಎಂದು ಪ್ರತಿಪಾದಿಸಿ, ಪ್ರವಾಸೋದ್ಯಮ ಉತ್ತೇಜನ ಹಾಗೂ ಆರ್ಥಿಕತೆ ವೃದ್ಧಿ ಈ ಯೋಜನೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೆಲಿಟೂರಿಸಂನಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಬೆಳೆಯುತ್ತಿರುವ ನಗರ ಅಭಿವೃದ್ಧಿಗೆ ಈ ಯೋಜನೆಗಳು ಪೂರಕವಾಗಿದೆ. ಪರಿಸರ ನೆಪದಲ್ಲಿ ಇದನ್ನು ವಿರೋಧಿಸುವುದು ಸಲ್ಲ. ಆಧುನಿಕತೆಗಳನ್ನು ಕೈಬಿಡುವುದು ಸರಿಯಲ್ಲ. ಹೀಗೆ ವಿರೋಧಿಸುವುದಾದರೆ ಅಂತರ್ಜಲ ಕುಸಿದಿರುವ ಗ್ರಾಮೀಣ ಪ್ರದೇಶಗಳಲ್ಲಿ ಬೋರ್‌ವೆಲ್ ಕೊರೆಸುವಂತಿಲ್ಲ ಎಂಬ ನಿಯಮ ಇದೆ. ಆದರೆ ಇದು ನಿಜಕ್ಕೂ ಪಾಲನೆಯಾಗುತ್ತಿಯೇ, ಕೃಷಿಗೆ ನೀರು ಬೇಕಿಲ್ಲವೇ, ರಸ್ತೆ ನಿರ್ಮಿಸಲು ಅದಕ್ಕೆ ಅಡ್ಡಿಯಾಗಿರುವ ಮರ ಕಡಿಯಲೇ ಬೇಕಾಗುತ್ತದೆ ಎಂಬುದು ಇವರ ವಾದ. ಹೆಲಿಟೂರಿಸಂ ಎಂಬುದು ಉಡಾನ್ ಸ್ಕೀಮ್‌ನಡಿ 100 ಸ್ಥಳಗಳಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಒಂದು ಯೋಜನೆ. ಪ್ರವಾಸೋದ್ಯಮ ಪ್ರೋತ್ಸಾಹಿಸಲು ಇದು ಯೋಜನೆ ಅತ್ಯವಶ್ಯ ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎನ್. ಶೆಟ್ಟಿ ಪ್ರತಿಪಾದಿಸಿದ್ದಾರೆ. ಹೆಲಿಟೂರಿಸಂ ಬೇಡ
ಮೈಸೂರಿನಲ್ಲಿ 2ನೇ ಅತೀ ದೊಡ್ಡ ಅರಮನೆಯಾದ ಲಲಿತಮಹಲ್ ಬಳಿ ಹೆಲಿಟೂರಿಸಂ ನಿರ್ಮಿಸಲು ಉದ್ದೇಶಿಸಲಾಗಿದೆ. ಮಹಾರಾಜರು 1921ರಲ್ಲಿ ಕಟ್ಟಿರುವ ಈ ಕಟ್ಟಡದ ಸುತ್ತ ಹಸುರು ಮರಗಳು ಇವೆ. ಪಕ್ಕದಲ್ಲೇ ಚಾಮುಂಡಿಬೆಟ್ಟವೂ ಇದೆ. ತಂಪು ವಾತಾವರಣ ಇದೆ. ಸಹಸ್ರಾರು ಪಕ್ಷಿಗಳಿಗೆ ಆಶ್ರಯ ಒದಗಿಸಿದೆ. ಲಲಿತ ಮಹಲ್ ಬಳಿ ಬೆಳೆದಿರುವ 160 ಮರಗಳನ್ನು ಕಡಿದು ಹೆಲಿಟೂರಿಸಂ ಮಾಡುವ ಅನಿವಾರ್ಯತೆ ಇಲ್ಲ. ಮಹಾರಾಜರು ಈ ಭಾಗದಲ್ಲಿ ಸಸ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ.
Related Articles
Advertisement