ಇತ್ತೀಚೆಗಷ್ಟೇ ಗಣೇಶ್ ಅಭಿನಯದ “ಗೀತಾ’ ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ಹಾಡಿದ್ದ “ಕನ್ನಡ ಕನ್ನಡ ಕನ್ನಡವೇ ಸತ್ಯ… ಕನ್ನಡ ಕನ್ನಡ ಕನ್ನಡವೇ ನಿತ್ಯ..’ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೇ ಲಕ್ಷಾಂತರ ಮಂದಿ ಹಾಡನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಆ ಹಾಡನ್ನು ಕನ್ನಡಿಗರು ಸ್ವೀಕರಿಸಿದ್ದರು. ಅದೇ ಖುಷಿಯಲ್ಲಿರುವ ಚಿತ್ರತಂಡ, ಶನಿವಾರ ಸಂಜೆ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ಸಿಕ್ಕಿದೆ.
ಹೌದು, ಗಣೇಶ್ ಅವರ “ಗೀತಾ’ ಚಿತ್ರ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಅದರ ಬೆನ್ನಲ್ಲೇ ಬಿಡುಗಡೆಯಾದ ಮೊದಲ ಹಾಡು ಕೂಡ ಚಿತ್ರ ನೋಡಬೇಕೆನ್ನುವಷ್ಟು ಕುತೂಹಲ ಮೂಡಿಸಿದೆ. ಈಗ ಗೀತರಚನೆಕಾರ ಗೌಸ್‌ಪೀರ್ ಅವರು ಬರೆದಿರುವ “ಹೇಳದೆ ಕೇಳದೆ..’ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡಿಗೆ ರಾಜೇಶ್ ಕೃಷ್ಣನ್ ಹಾಗು ಅನನ್ಯ ಭಟ್ ಧ್ವನಿಯಾಗಿದ್ದಾರೆ. ಈ ಹಾಡಿನ ವಿಶೇಷತೆ ಬಗ್ಗೆ ಹೇಳುವ ನಟ ಗಣೇಶ್, “ಇದೊಂದು 1980 ರ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯೋ ಹಾಡು. ಇಡೀ ಹಾಡು ರೆಟ್ರೋ ಶೈಲಿಯಲ್ಲಿರಲಿದೆ.
ನನ್ನೊಂದಿಗೆ ನಾಯಕಿ ಪಾರ್ವತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಲವ್‌ಸಾಂಗ್ ಇದಾಗಿದ್ದು, ಹಳೆ ಭಾಗದ ಮೈಸೂರು ಮತ್ತು ಕೊಲ್ಕತ್ತಾ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಹಾಡನ್ನು ನೋಡಿದವರಿಗೆ ಖಂಡಿತವಾಗಿಯೂ ಹಳೆಯ ಕಾಲವನ್ನು ನೆನಪಿಸದೇ ಇರದು. ಅನೂಪ್ ರುಬೆನ್ಸ್ ಅವರು ಸಂಗೀತ ನೀಡಿದ್ದಾರೆ. ಇನ್ನು ಛಾಯಾಗ್ರಾಹಕ ಶ್ರೀಶ ಅವರು ರೆಟ್ರೋ ಶೈಲಿಯ ಹಾಡನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಸದ್ಯಕ್ಕೆ ಎರಡನೇ ಹಾಡಿಗೂ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇಷ್ಟರಲ್ಲೇ ಚಿತ್ರ ಇನ್ನಷ್ಟು ವಿಶೇಷತೆಗಳನ್ನು ಹೇಳಿಕೊಳ್ಳಲಿದೆ.
ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ “ಗೀತಾ’ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ’ ಎಂಬುದು ಗಣೇಶ್ ಮಾತು. ಅಂದಹಾಗೆ, “ಗೀತಾ’ ಅಂದಾಕ್ಷಣ, ಶಂಕರ್‌ನಾಗ್ ಅಭಿನಯದ ಸೂಪರ್ ಹಿಟ್ ಸಿನಿಮಾ ನೆನಪಾಗುತ್ತೆ. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದಲ್ಲಿ ಗಣೇಶ್ ಅವರು ಶಂಕರ್‌ನಾಗ್ ಅವರ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಗಣೇಶ್ ಅವರು ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಕನ್ನಡ ಹೋರಾಟಗಾರರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಸೈಯ್ಯದ್ ಸಲಾಂ ಹಾಗೂ ಶಿಲ್ಪಾ ಗಣೇಶ್ ನಿರ್ಮಿಸುತ್ತಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನವಿದೆ.