ಮುಂಬಯಿ: ಒಂದು ಕಾಲದಲ್ಲಿ ಶಿಕ್ಷಣಾರ್ಥಿಗಳಾಗಿ, ಉದ್ಯೋಗಾ ರ್ಥಿಗಳಾಗಿ ಮುಂಬಯಿಗೆ ಆಗಮಿಸುವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾದ ಗ್ರಾಮ ಸಭೆಗಳು ಇಂದು ಅಸ್ತಿತ್ವವನ್ನು ಕಳೆದುಕೊಂಡಿವೆ. ಯಾಕೆಂದರೆ ಇಂದು ಎಲ್ಲ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಹಾಗಾಗಿ ಇವರಿಗೆ ಗ್ರಾಮ ಸಭೆಗಳ ಸಹಾಯ ಬೇಕಾಗಿಲ್ಲ. ಆದರೆ ಹಿರಿಯರು ಒಳ್ಳೆಯ ಉದ್ದೇಶಕ್ಕಾಗಿ ಸ್ಥಾಪಿಸಿದ ಗ್ರಾಮ ಸಭೆಗಳನ್ನು ಮುಚ್ಚುವುದು ಸರಿಯಲ್ಲ. ಆಧುನಿಕ ಕಾಲದ ಆವಶ್ಯಕತೆಯಂತೆ ಗ್ರಾಮ ಸಭೆಗಳನ್ನು ಅರ್ಥಪೂರ್ಣವಾಗಿ ಬೆಳೆಸಬೇಕಾದ ಅಗತ್ಯವಿದೆ. ಇಂದಿನ ಸಮುದಾಯದ ಆಧುನಿಕ ಸಮಸ್ಯೆಗಳಿಗೆ ಗ್ರಾಮಸಭೆಗಳು ಸ್ಪಂದಿಸಬೇಕು ಎಂದು ಹೆಜಮಾಡಿ ಮೊಗವೀರ ಸಭಾದ ಅಧ್ಯಕ್ಷ ಕರುಣಾಕರ ಶೆಟ್ಟಿ ನುಡಿದರು.
ಅವರು ಇತ್ತೀಚೆಗೆ ಅಂಧೇರಿಯ ಮೊಗವೀರ ಭವನದಲ್ಲಿ ನಡೆದ ಹೆಜ ಮಾಡಿ ಮೊಗವೀರ ಸಭಾ ಮುಂಬಯಿ ಇದರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಸಭೆಗಳು ತಾಯ್ನಾಡ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು.
ಸಮುದಾಯದ ಬಡವರ ಉದ್ಧಾರಕ್ಕಾಗಿ ಕೈಜೋಡಿಸಬೇಕು ಎಂದು ಹೇಳಿದರು. ಹೆಜಮಾಡಿ ಮೊಗವೀರ ಸಭಾ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸುಂದರ ಪುತ್ರನ್ ಸ್ವಾಗತಿಸಿದರು.
ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಪ್ರತಾಪ್ ಸಾಲ್ಯಾನ್ ಅವರು ವಂದಿಸಿದರು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಭೆಯ ಯಶಸ್ಸಿಗೆ ಸಹಕರಿಸಿದರು.