ಹುಣಸೂರು: ತಾಲೂಕಿನ ದೊಡ್ಡಹೆಜ್ಜೂರಿನಲ್ಲಿ ಪ್ರಥಮ ಶ್ರೀವೀರಾಂಜನೇಯ ಸ್ವಾಮಿ ರಥೋತ್ಸವ ಭಾನುವಾರ ಅದ್ಧೂರಿಯಿಂದ ನಡೆಯಿತು. ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿರುವ ನೂರಾರು ವರ್ಷಗಳ ಐತಿಹ್ಯವುಳ್ಳ ಈ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಮಾರನೇ ದಿನ ಈ ರಥೋತ್ಸವ ಆಯೋಜಿಸಲಾಗುತ್ತಿದೆ. ಭಾನುವಾರ ಮಧ್ಯಾಹ್ನ 2.30ಕ್ಕೆ ರಥೋತ್ಸವ ಆರಂಭವಾಯಿತು. ರಥ ಎಳೆಯುವ ಮುನ್ನ ಶ್ರೀವೀರಾಂಜನೇಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರತಂದು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು.
ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸಿದ ನಂತರ ಸಾವಿರಾರು ಭಕ್ತರು ಆಂಜನೇಯ ಸ್ವಾಮಿಗೆ ಜೈಕಾರ ಹಾಕಿದರು. ರಥವನ್ನು ದೇಗುಲದ ಸುತ್ತ ಒಂದು ಸುತ್ತು ಎಳೆದು ತಂದು ಸ್ವಸ್ಥಾನಕ್ಕೆ ನಿಲ್ಲಿಸಿದರು. ರಥೋತ್ಸವದ ವೇಳೆ ನವ ದಂಪತಿಗಳು ಸೇರಿದಂತೆ ಭಕ್ತರು ಹಣ್ಣು, ದವನ ಎಸೆದು ಭಕ್ತಿ ಮೆರೆದರು. ಮುಂಜಾನೆಯಿಂದಲೇ ವಿಶೇಷ ಪೂಜೆ, ಅಭಿಷೇಕಗಳನ್ನು ಆಯೋಜಿಸಲಾಗಿತ್ತು. ನಂತರ ದೇಗುಲದ ಸುತ್ತ ಉತ್ಸವ ಮೂರ್ತಿ ಹೊತ್ತು ಪ್ರದಕ್ಷಿಣೆ ಹಾಕಿದರು.
ಹರಕೆ ಒಪ್ಪಿಸಿದರು: ಹರಕೆ ಹೊರುವ ಬಹುತೇಕ ಎಚ್.ಡಿ.ಕೋಟೆ ತಾಲೂಕಿನ ಮಂದಿ ಹಿಂದಿನ ದಿನವೇ ಜಾತ್ರೆ ಮಾಳದಲ್ಲಿ ಕ್ಯಾಂಪ್ ಹಾಕಿದ್ದರು. ಲಕ್ಷ್ಮಣ ತೀರ್ಥನದಿ ದಂಡೆಯಲ್ಲಿ ತಲೆ ಮುಡಿಕೊಟ್ಟು ಬಾಯಿ ಬೀಗ ಹಾಕಿಕೊಂಡು ನಡೆದು ಬಂದು ದೇವಾಲಯ ಸುತ್ತ ಉರುಳುಸೇವೆ ಸಲ್ಲಿಸಿದರು. ನದಿ ದಂಡೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಬುತ್ತಿ ತಂದಿದ್ದ ಅಕ್ಕ-ಪಕ್ಕದ ಗ್ರಾಮಸ್ಥರು ನದಿ ದಂಡೆಯ ಗದ್ದೆ ಬಯಲಲ್ಲಿ ಪರಸ್ಪರ ಹಂಚಿಕೊಂಡು ಊಟ ಮಾಡಿದರು.
16 ಹಳ್ಳಿಯ ಗ್ರಾಮಸ್ಥರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಶಾಸಕರಾದ ಎಚ್.ಪಿ.ಮಂಜುನಾಥ್, ಜಿ.ಟಿ.ದೇವೇಗೌಡ, ಜಿ.ಪಂ.ಸದಸ್ಯ ಅನಿಲ್‌ಕುಮಾರ್, ಮಾಜಿ ಸದಸ್ಯೆ ಲಲಿತಾ ದೇವೇಗೌಡ ಸೇರಿದಂತೆ ಅನೇಕ ಮುಖಂಡರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಆದಿವಾಸಿಗಳ ಸಂಭ್ರಮ: ದೊಡ್ಡ ಹೆಜ್ಜೂರಿನ ಸುತ್ತ ಆದಿವಾಸಿಗಳ ಹಾಡಿ ಸಾಕಷ್ಟಿದೆ. ಜಾತ್ರೆಗೆ ಗಿರಿಜನರು ಸಹ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಅದರಲ್ಲೂ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಇಡೀ ಜಾತ್ರೆಗೆ ಬಗೆಬಗೆಯ ಹತ್ತಾರು ಸಿಹಿ ತಿಂಡಿ ಅಂಗಡಿಗಳನ್ನು ಮಾಡಲಾಗಿತ್ತು. ಮಹಿಳೆಯರು ಶೃಂಗಾರ ಸಾಧನ, ಖರ್ಜೂರ, ಐಸ್‌ಕ್ರೀಂ, ಕಾರಾಪುರಿ, ಮಕ್ಕಳ ಆಟಿಕೆ ಅಂಗಡಿಗಳು. ಜಾಯಿಂಟ್ ವ್ಹೀಲ್ ಜಾತ್ರೆಗೆ ಕಳೆಗಟ್ಟಿದ್ದವು. ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಹಚ್ಚೆ ಹಾಕಿಸಿಕೊಂಡರು.
ಬಿಗಿ ಬಂದೋಬಸ್ತ್: ಬರದ ನಡುವೆಯೂ ಜಾತ್ರೆಯಲ್ಲಿ 20 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ರಥ ಎಳೆಯುವಾಗ ನೂಕು ನುಗ್ಗಲು ಉಂಟಾಯಿತು. ಗ್ರಾಮಾಂತರ ಠಾಣೆಯ ಎಸ್.ಐ.ಪುಟ್ಟಸ್ವಾಮಿ ನೇತೃತ್ವದ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಯತ್ನಿಸಿದರು. ರಥ ಎಳೆಯುವ ವೇಳೆ ಸುತ್ತ ಹಗ್ಗವನ್ನು ಕಟ್ಟಿಕೊಂಡು ರಥದ ಬಳಿಗೆ ಜನ ಬಾರದಂತೆ ನಿಯಂತ್ರಿಸಿದರು.