Advertisement

Hejamady Port: ಭೂ ಸ್ವಾಧೀನ ತ್ವರಿತಗೊಳಿಸಲು ಸಂಸದ ಕೋಟ ಸೂಚನೆ

11:17 PM Jun 18, 2024 | Team Udayavani |

ಮಣಿಪಾಲ: ಹೆಜಮಾಡಿಯಲ್ಲಿ ಬಂದರು ಕಾಮಗಾರಿ ವಿಳಂಬವಾಗುತ್ತಿದೆ. ಡ್ರಜ್ಜಿಂಗ್‌ ಹಾಗೂ ಬ್ರೇಕ್‌ವಾಟರ್‌ ಕಾಮಗಾರಿ ಮುಗಿದಿದ್ದರೂ ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿ ಆಗದೆ ಇರುವುದರಿಂದ ಇಡೀ ಕಾಮಗಾರಿಗೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ತತ್‌ಕ್ಷಣವೇ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ ಮಂಗಳವಾರ ಜರಗಿದ ಹೆಜಮಾಡಿ ಬಂದರು ಕಾಮಗಾರಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಜಮಾಡಿ ಬಂದರು ಅಭಿವೃದ್ಧಿಗೆ 188 ಕೋ. ರೂ. ಅನುದಾನ ಮಂಜೂರಾಗಿ ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಂದರಿನ ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಆಗಿಲ್ಲ. ಹೀಗಾಗಿ ಅಧಿಕಾರಿಗಳು ಕೂಡಲೇ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ, ಅಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದರು.

ಅನುದಾನ ಬರುತ್ತಿರುವುದು ವಿಳಂಬವಾಗಿರುವ ಬಗ್ಗೆ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯಾದ ಅಜಯ್‌ ನಾಗಭೂಷಣ್‌ ಅವರಿಗೆ ಸಭೆಯಿಂದಲೇ ದೂರವಾಣಿ ಕರೆ ಮಾಡಿ, ಅನುದಾನ ಆದಷ್ಟು ಬೇಗ ಬಿಡುಗಡೆ ಮಾಡಬೇಕು. ಯಾವುದೇ ಹಣಕಾಸಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚಿಸಿದರು.

ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ ಹಾಗೂ ಯಶ್‌ಪಾಲ್‌ ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್‌., ಸಹಾಯಕ ಆಯುಕ್ತೆ ರಶ್ಮಿ, ಕಂದಾಯ, ಬಂದರು, ಅರಣ್ಯ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next