Advertisement

Hejamadi: ಲಕ್ಷಾಂತರ ರೂ. ಮೌಲ್ಯದ ಕಬ್ಬಿಣದ ಸೊತ್ತು ಕಳವು ಪ್ರಕರಣ: ಐವರ ಬಂಧನ

11:03 AM Oct 14, 2023 | Team Udayavani |

ಪಡುಬಿದ್ರಿ: ಹೆಜಮಾಡಿ ಕೋಡಿ ಬಂದರು ಪ್ರದೇಶದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣದ ಶೀಟು ಮತ್ತು ರಾಡ್‌ಗಳನ್ನು ಕಳವುಗೈದ ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು 21 ಲಕ್ಷ ರೂ. ಮೊತ್ತದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Advertisement

ಕಬ್ಬಿಣದ ಸೊತ್ತುಗಳನ್ನು ಕಳವುಗೈದಿದ್ದ ಆರೋಪಿಗಳಾದ ಬೆಳ್ತಂಗಡಿ ನಿವಾಸಿಗಳಾದ ಮೊಹಮ್ಮದ್‌ ಹಸೀಬ್‌, ನಿಜಾಮುದ್ದೀನ್‌, ಮೊಹಮ್ಮದ್‌ ಹಫೀಜ್‌, ಮೊಹಮ್ಮದ್‌ ಆಶಿರ್‌ ಕೆ. ಮತ್ತು ಕಬ್ಬಿದ ಸೊತ್ತುಗಳನ್ನು ಖರೀದಿಸಿದ ಹಂಝಾ ಬೆಳ್ತಂಗಡಿ ಬಂಧಿತರು.
ಕಳೆದ ಆ. 24ರಿಂದ ಸೆ. 25ರ ಅವಧಿಯಲ್ಲಿ ಹೆಜಮಾಡಿ ಕೋಡಿ ಬಂದರು ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 18,00,078 ರೂಪಾಯಿ ಮೌಲ್ಯದ ಕಬ್ಬಿಣದ ಶೀಟುಗಳನ್ನು ಮತ್ತು ರಾಡ್‌ಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಅ. 3ರಂದು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಎಸ್ಸೆ$ç ಪ್ರಸನ್ನ ಎಂ.ಎಸ್‌., ಕ್ರೈಂ ಎಸ್ಸೆ$ç ಸುದರ್ಶನ್‌ ದೊಡ್ಡಮನಿ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿದ ಪಡುಬಿದ್ರಿ ಪೊಲೀಸರು ಅ. 6ರಂದು ಬೆಳ್ತಂಗಡಿ ಗ್ರಾಮದ ಮದ್ದಡ್ಕ ಬಳಿ ಆರೋಪಿಗಳನ್ನು ಪತ್ತೆ ಹಚ್ಚಿ, ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಶಪಡಿಸಿಕೊಂಡ ಸೊತ್ತುಗಳ ವಿವರ
5,76,653 ರೂ. ಮೌಲ್ಯದ 86 ಕಬ್ಬಿಣದ ಎಂ. ಎಸ್‌. ಶೀಟುಗಳು, 61,382 ರೂ. ಮೌಲ್ಯದ ಕಬ್ಬಿಣದ ರಾಡ್‌ಗಳು, 3 ಲಕ್ಷ ರೂ. ಮೌಲ್ಯದ ಟಾಟಾ ಏಸ್‌ ವಾಹನ, 5 ಲಕ್ಷ ರೂ. ಮೌಲ್ಯದ ಪಿಕ್‌ಅಪ್‌ ವಾಹನ, 7 ಲಕ್ಷ ರೂ. ಮೌಲ್ಯದ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೇ. 70ರಷ್ಟು ಕದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಉಳಿದ ಸೊತ್ತುಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next