ಸೆಂಚುರಿಯನ್: ಹೆನ್ರಿಕ್ ಕ್ಲಾಸೆನ್ ಅವರ ಸಿಡಿಲಬ್ಬರ ಆಟಕ್ಕೆ ಕಾಂಗರೂ ತಲೆಬಾಗಿದೆ. 4ನೇ ಏಕದಿನ ಪಂದ್ಯವನ್ನು 164 ರನ್ನುಗಳ ಭಾರೀ ಅಂತರದಿಂದ ಗೆದ್ದ ದಕ್ಷಿಣ ಆಫ್ರಿಕಾ ಸರಣಿಯನ್ನು 2-2 ಸಮಬಲಕ್ಕೆ ತಂದು ನಿಲ್ಲಿಸಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 5 ವಿಕೆಟಿಗೆ 416 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಆಸ್ಟ್ರೇಲಿಯ 34.5 ಓವರ್‌ಗಳಲ್ಲಿ 252ಕ್ಕೆ ಆಲೌಟ್ ಆಯಿತು. ಸರಣಿ ನಿರ್ಣಾಯಕ ಪಂದ್ಯ ರವಿವಾರ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಇದುವಿಶ್ವಕಪ್ ಗೂ ಮುನ್ನ ದಕ್ಷಿಣ ಆಫ್ರಿಕಾ ಆಡಲಿರುವ ಕೊನೆಯ ಏಕದಿನ ಪಂದ್ಯವೂ ಹೌದು.
174 ರನ್ ಬಾರಿಸಿದ ಹೆನ್ರಿಕ್ ಕ್ಲಾಸೆನ್ ಈ ಪಂದ್ಯದ ಹೀರೋ ಎನಿಸಿದರು. ಕೇವಲ 83 ಎಸೆತಗಳಿಂದ ಅವರು ಈ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಸಿಡಿಸಿದ್ದು 13 ಸಿಕ್ಸರ್ ಹಾಗೂ 13 ಬೌಂಡರಿ. ಪಂದ್ಯದ ಅಂತಿಮ ಎಸೆತದಲ್ಲಿ ಇವರ ವಿಕೆಟ್ ಬಿತ್ತು. ಡೇವಿಡ್ ಮಿಲ್ಲರ್ ಅಜೇಯ 82 ರನ್ ಹೊಡೆದರು. ಇವರಿಬ್ಬರ ನಡುವೆ 5ನೇ ವಿಕೆಟಿಗೆ 222 ರನ್ ಜತೆಯಾಟ ನಡೆಯಿತು. ಅಂತಿಮ 10 ಓವರ್‌ಗಳಲ್ಲಿ 173 ಹರಿದು ಬಂತು.
ಚೇಸಿಂಗ್ ಹಾದಿಯಲ್ಲಿ ಆಸ್ಟ್ರೇಲಿಯದಿಂದ ಯಾವುದೇ ಮ್ಯಾಜಿಕ್ ಕಂಡುಬರಲಿಲ್ಲ. ಅಲೆಕ್ಸ್ ಕ್ಯಾರಿ ಏಕಾಂಗಿಯಾಗಿ ಹೋರಾಡಿ ಒಂದೇ ರನ್ನಿನಿಂದ ಶತಕ ತಪ್ಪಿಸಿಕೊಂಡರು. ಅವರು 99ಕ್ಕೆ ಔಟಾದ ಆಸ್ಟ್ರೇಲಿಯದ 5ನೇ ಆಟಗಾರ. ಉಳಿದವರೆಂದರೆ ಮ್ಯಾಥ್ಯೂ ಹೇಡನ್, ಆ್ಯಡಂ ಗಿಲ್‌ಕ್ರಿಸ್ಟ್, ಡೇವಿಡ್ ವಾರ್ನರ್ ಮತ್ತು ಅಲೆಕ್ಸ್ ಕ್ಯಾರಿ.
ಲುಂಗಿ ಎನ್‌ಗಿಡಿ 4, ಕಾಗಿಸೊ ರಬಾಡ 3 ವಿಕೆಟ್ ಉರುಳಿಸಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-5 ವಿಕೆಟಿಗೆ 416 (ಕ್ಲಾಸೆನ್ 174, ಮಿಲ್ಲರ್ ಔಟಾಗದೆ 82, ಡುಸೆನ್ 62, ಡಿ ಕಾಕ್ 45, ಹೇಝಲ್‌ವುಡ್ 79ಕ್ಕೆ 2). ಆಸ್ಟ್ರೇಲಿಯ-34.5 ಓವರ್‌ಗಳಲ್ಲಿ 252 (ಕ್ಯಾರಿ 99, ಟಿಮ್ ಡೇವಿಡ್ 35, ಲಬುಶೇನ್ 20, ಎನ್‌ಗಿಡಿ 51ಕ್ಕೆ 4, ರಬಾಡ 41ಕ್ಕೆ 3).
ಪಂದ್ಯಶ್ರೇಷ್ಠ: ಹೆನ್ರಿಕ್ ಕ್ಲಾಸೆನ್.